ಶಿವಮೊಗ್ಗ: ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿದ್ಧರಾಮಯ್ಯ ಸರ್ಕಾರಕ್ಕೆ ಒಂದು ವರ್ಷವಾಗಿದೆ. ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಗ್ಯಾರಂಟಿಗಳಲ್ಲಿ ಮುಳುಗಿ ಅಭಿವೃದ್ಧಿಯನ್ನೇ ಕಡೆಗಾಣಿಸಿದ್ದಾರೆ. ಬರಗಾಲ ಬಂದರೂ ಅದಕ್ಕೆ ಪರಿಹಾರ ನೀಡಲಿಲ್ಲ. ಅದರ ಬದಲು ಬರಗಾಲದ ಸಂದರ್ಭದಲ್ಲಿ ತೆಲಂಗಾಣಕ್ಕೆ ಹೋಗಿ ಚುನಾವಣಾ ಪ್ರಚಾರದಲ್ಲಿ ಮುಳುಗಿದರು. ಕೇಂದ್ರ ಸರ್ಕಾರಕ್ಕೆ 36 ಸಾವಿರ ಕೋಟಿ ಪರಿಹಾರ ಕೇಳಿದ್ದರೂ ಕೂಡ ಕೇಂದ್ರ ಸರ್ಕಾರ ಕೇವಲ 3 ಸಾವಿರ ಕೋಟಿ ರೂ. ನೀಡಿ ಕೈ ಚೆಲ್ಲಿದೆ. ರಾಜ್ಯ ಸರ್ಕಾರ ರೈತರಿಗೆ 200 ಕೋಟಿ ರೂ. ಮಾತ್ರ ಕೊಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರೈತರನ್ನು ಕಡೆಗಾಣಿಸಿವೆ ಎಂದರು.

ಕೇಂದ್ರ ಸರ್ಕಾರ ರೈತರ ಎಪಿಎಂಸಿ ಹಾಗೂ ಭೂಸುಧಾರಣಾ ಕಾಯ್ದೆ ರದ್ದು ಮಾಡಿದರೂ ಕೂಡ ರಾಜ್ಯ ಸರ್ಕಾರ ಮಾತ್ರ ರೈತರಿಗೆ ಮಾರಕವಾಗಿರುವ ಈ ಕಾನೂನುಗಳನ್ನು ರದ್ದು ಮಾಡದೇ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದೆ. ಚುನಾವಣೆಗೂ ಮುನ್ನ ರದ್ದು ಮಾಡುವ ಭರವಸೆ ನೀಡಿತ್ತು. ಆದರೆ, ಅದು ರದ್ದಾಗಿಲ್ಲ. ಭೂ ಸುಧಾರಣೆ ಕಾಯ್ದೆ ಪರಿಣಾಮವಾಗಿ ಸುಮಾರು 10 ಲಕ್ಷ ರೈತರು ತಮ್ಮ ಭೂಮಿ ಮಾರಿದ್ದಾರೆ. ಹಾಗೆಯೇ ಎಪಿಎಂಸಿ ಕಾಯ್ದೆಯಿಂದ ಕೃಷಿ ಮಾರುಕಟ್ಟೆಗೆ ಕಾರ್ಪೊರೇಟ್ ಕಂಪನಿಗಳು ನುಸುಳಿದ್ದಾರೆ. ಕೂಡಲೇ ಈ ಎರಡೂ ಕಾಯ್ದೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ನಮ್ಮ ಮೈತ್ರಿ ಸಂಘಟನೆಯೊಂದು ಅಂತರರಾಷ್ಟ್ರೀಯ ರೈತ ಸಮ್ಮೇಳನ ಆಯೋಜಿಸಿದೆ. ಈ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಆಹ್ವಾನ ಕೊಟ್ಟಿದ್ದಾರೆ. ಇದನ್ನು ಆಯೋಜನೆ ಮಾಡಿರುವ ರಾಕೇಶ್ ಟಿಕಾಯತ್ ಕಾಂಗ್ರೆಸ್ ಪಕ್ಷದಲ್ಲಿದ್ದು, ಅದಕ್ಕೂ ಮೊದಲು ಬಿಜೆಪಿಯಲ್ಲಿದ್ದವರು. ರೈತರ ಹಿತ ಮರೆತ ಸಿದ್ಧರಾಮಯ್ಯ ಅವರನ್ನು ಕರೆಯುತ್ತಿರುವುದು ಸಮಂಜಸವಲ್ಲ ಎಂದರು.

ರುದ್ರಪ್ಪ ಸವಿನೆನಪು ಕಾರ್ಯಕ್ರಮ:

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ(ಕೋಡಿಹಳ್ಳಿ ಚಂದ್ರಶೇಖರ್ ಬಣ) ಜಿಲ್ಲಾ ಶಾಖೆ ವತಿಯಿಂದ ಜು. 19ರಂದು ರೈತ ಸಂಘದ ಸಂಸ್ಥಾಪಕರಾದ ಹೆಚ್.ಎಸ್. ರುದ್ರಪ್ಪನವರ ಸವಿನೆನಪು ಕಾರ್ಯಕ್ರಮ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 10 ಗಂಟೆಗೆ ಪ್ರವಾಸಿ ಮಂದಿರ ವೃತ್ತದಿಂದ ಕಾರ್ಯಕ್ರಮ ನಡೆಯುವ ಸ್ಥಳವಾದ ಬೆಕ್ಕಿನ ಕಲ್ಮಠದವರೆಗೆ ಹೆಚ್.ಎಸ್. ರುದ್ರಪ್ಪನವರ ಭಾವಚಿತ್ರದೊಂದಿಗೆ ಮೆರವಣಿಗೆ ಆಯೋಜಿಸಲಾಗಿದೆ. ನಂತರ 11 ಗಂಟೆಗೆ ಬೆಕ್ಕಿನಕಲ್ಮಠದಲ್ಲಿ ವೇದಿಕೆ ಕಾರ್ಯಕ್ರಮವನ್ನು ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸುವರು. ಬೆಕ್ಕಿನ ಕಲ್ಮಠ ಶ್ರೀಗಳಾದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು, ಸಿಗಂದೂರು ಶ್ರೀ ಚೌಡೇಶ್ವರಿ ಟ್ರಸ್ಟ್ ಅಧ್ಯಕ್ಷ ರಾಮಪ್ಪ ಹಾಗೂ ವಕೀಲ ಕೆ.ಪಿ. ಶ್ರೀಪಾಲ್ ಉಪಸ್ಥಿತರಿರುವರು ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ಪಾಟೀಲ್, ಮಂಜುನಾಥ್, ಸುನಿತಾ, ಈಶ್ವರಪ್ಪ, ಸತೀಶ್, ಶಫೀವುಲ್ಲಾ ಮುಂತಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!