ಶಿವಮೊಗ್ಗ,ಜು.5:ಕ್ಷೇತ್ರದ ಸಮಸ್ಯೆಗಳತ್ತ ಗಮನಹರಿಸುವೆ ಅಭಿವೃದ್ಧಿಗೆ ಆಧ್ಯತೆ ನೀಡುವೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ನೀಲಿನಕ್ಷೆ ತಯಾರಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೀಗ ಲೋಕಸಭಾ ಅಧಿವೇಶನವನ್ನು ಪ್ರಮಾಣ ವಚನ ಸ್ವೀಕರಿಸಿ ಮುಗಿಸಿಕೊಂಡು ಬಂದಿದ್ದೇನೆ. ಮೊದಲ ಬಾರಿಯೇ ಜಿಲ್ಲೆಯ ಸಮಸ್ಯೆಗಳತ್ತ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ, ಗಮನಸೆಳೆದಿದ್ದೇನೆ. ಅಲ್ಲದೇ ಜಿಲ್ಲಾ ಮಟ್ಟದಲ್ಲೂ ಕೂಡ ಮುಖಂಡರು ಸೇರಿ ಕ್ಷೇತ್ರದಲ್ಲಿ ಉಳಿದಿರುವ ಸಮಸ್ಯೆಗಳ ಬಗ್ಗೆ ನೀಲಿನಕ್ಷೆಯನ್ನು ಕೂಡ ತಯಾರಿಸಿದ್ದೇವೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಕಂಕಣ ಬದ್ದನಾಗಿದ್ದೇನೆ ಎಂದರು.

ರೈಲ್ವೆ, ಹೆದ್ದಾರಿ, ಪ್ರವಾಸೋಧ್ಯಮ, ಕೈಗಾರಿಕೆ, ಉದ್ಯೋಗ, ಶರಾವತಿ ಸಂತ್ರಸ್ಥರ ಸಮಸ್ಯೆ, ಬಗರ್‍ಹುಕುಂ ಸಾಗುವಳಿದಾರರ ಸಮಸ್ಯೆ, ಎಂಪಿಎಂ, ವಿಐಎಸ್‍ಎಲ್ ಸಮಸ್ಯೆ ಹೀಗೆ ಹಲವು ವಿಷಯಗಳಿವೆ. ಈ ಎಲ್ಲಾ ವಿಷಯಗಳ ಬಗ್ಗೆ ಈಗಾಗಲೇ ಇದಕ್ಕೆ ಸಂಬಂಧಪಟ್ಟ ಕೇಂದ್ರ ಸಚಿವರುಗಳ ಪ್ರಸ್ತಾಪ ಮಾಡಿದ್ದೇನೆ. ಮನವಿಕೂಡ ಮಾಡಿದ್ದೇನೆ. ರಾಜ್ಯ ಸರ್ಕಾರದ ನೆರವಿನೊಂದಿಗೆ ಈ ಎಲ್ಲಾ ಅಭಿವೃದ್ಧಿಗಳನ್ನು ಕೈಗೊಳ್ಳುತ್ತೇವೆ ಎಂದರು.

ಕೇಂದ್ರ ಸಚಿವರುಗಳಾದ ನಿತಿನ್ ಗಡ್ಕರಿ, ಅಶ್ವಿನ್ ವೈಷ್ಣವ್, ಭೂಪೇಂದ್ರ ಯಾದವ್, ರಾಜನಾಥ್ ಸಿಂಗ್, ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ ಮತ್ತು ಇಲಾಖೆಯ ಮುಖ್ಯಸ್ಥರುಗಳನ್ನು ಭೇಟಿ ಮಾಡಿದ್ದೇನೆ. ಕ್ಷೇತ್ರಕ್ಕೆ ಅನುದಾನ ಪಡೆದು, ಕಾರ್ಯಪ್ರವೃತ್ತನಾಗಿದ್ದೇನೆ. ಸಚಿವರೆಲ್ಲರು ಭರವಸೆ ನೀಡಿದ್ದಾರೆ ಎಂದರು.

ಈಗಾಗಲೇ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರು 2024-25ನೇ ಸಾಲಿಗೆ ರಾಜ್ಯಕ್ಕೆ ಒಟ್ಟು 8006ಕೋಟಿ ರೂ.ಗಳನ್ನು ನೀಡಿದ್ದಾರೆ. ಅದರಲ್ಲಿ ಲೋಕಸಭಾ ವ್ಯಾಪ್ತಿಗೆ 2623 ಕೋಟಿ ಮೊತ್ತದ ಅನುಮೋದನೆ ನೀಡಲಾಗಿದೆ. ಹಾಗೆಯೇ ರಾಷ್ಟ್ರೀಯ ಹೆದ್ದಾರಿ ಬೈಂದೂರ್‍ನಿಂದ ರಾಣೆಬೆನ್ನೂರುವರೆಗೆ 900 ಕೋಟಿ ರೂ. ಅನಂತಪುರ-ಸಾಗರ ಜೇನಿ ಕಟ್ಟೆ ರಸ್ತೆಗೆ 400 ಕೋಟಿ, ಆಗುಂಬೆ ಘಾಟಿ ರಸ್ತೆಯನ್ನು ಅಗಲೀಕರಣಗೊಳಿಸಲು 403ಕೋಟಿ ನೀಡಲಾಗಿದೆ ಎಂದರು.

ಕೇಂದ್ರ ಭೂ ಸಾರಿಗೆ ಮಂತ್ರಾಲಯದಿಂದ ಮಂಜೂರಾದ ಕಾಮಗಾರಿಗಳಾದ ತುಮಕೂರು-ಶಿವಮೊಗ್ಗ ರಸ್ತೆ,ಚಿತ್ರದುರ್ಗ-ಶಿವಮೊಗ್ಗ ರಸ್ತೆ, ಸಿಂಗಧೂರು ಸೇತುವೆ ನಿರ್ಮಾಣ, ಸಾಗರ ಪಟ್ಟಣದ 4 ಪಥದ ರಸ್ತೆ, ಹೊಸ ನಗರದ ಬಿಕ್ಕೂಡಿ ಸೇತುವೆ, ಶಿವಮೊಗ್ಗ ಸಂದೇಶ ಮೋಟರ್‍ನಿಂದ ಅರಕೆರೆಯವರೆಗೂ 4 ಪಥದ ರಸ್ತೆ, ಶಿಕಾರಿಪುರ ಬೈಪಾಸ್ ರಸ್ತೆ, ಶಿವಮೊಗ್ಗ ಆನಂದಪುರಂ ರಸ್ತೆ, ಮುಂತಾದ ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. 

ಹಾಗೆಯೇ ಮೇಗರುವಳ್ಳಿಯಿಂದ ಸೋಮೇಶ್ವರದವರೆಗೆ ಆಗುಂಬೆ ಘಾಟಿ ರಸ್ತೆಗೆ ಸುರಂಗ ಮಾರ್ಗದ ರಸ್ತೆ ಮಾಡಲು ಕೂಡ ಯೋಜನೆ ಮಾಡಲಾಗಿದೆ. ಇದರ ಜೊತೆಗೆ ಅಗತ್ಯ ಇರುವ ಕಡೆ ಸೇತುವೆಗಳನ್ನು ನಿರ್ಮಿಸಲಾಗುವುದು ಎಂದರು.

ರೈಲ್ವೆಗೆ ಸಂಬಂಧಿಸಿದಂತೆ ತಾಳಗೊಪ್ಪ ಶಿರಸಿ, ತಡಸ, ಹುಬ್ಬಳ್ಳಿ, ಮತ್ತು ಶಿವಮೊಗ್ಗ ಶೃಂಗೇರಿ, ಮಂಗಳೂರಿಗೆ ಹೊಸ ಮಾರ್ಗ ಮಾಡಲು ಚಿಂತನೆ ನಡೆದಿದೆ. ಶಿವಮೊಗ್ಗ-ಬೀರೂರು ನಡುವೆ ಡಬ್ಲಿಂಗ್ ಮಾರ್ಗ ನಿರ್ಮಿಸಲಾಗುವುದು. ಕೋಟೆ ಗಂಗೂರಿನಲ್ಲಿ  ಎಕ್ಸ್‍ಲೈಟರ್ ನಿರ್ಮಾಣ ಮಾಡಲಾಗುವುದು ಎಂದರು.

ಬೆಂಗಳೂರು-ಚೆನೈ ನಡುವೆ ಹೊಸ ರೈಲು ಸಂಚಾರ ಈ ವಾರದಲ್ಲಿ ಆರಂಭವಾಗಲಿದೆ. ಸಂಜೆ 4ಕ್ಕೆ ಶಿವಮೊಗ್ಗದಿಂದ ಹೊರಟ ಈ ರೈಲು ಬೆಳಿಗ್ಗೆ 4.45ಕ್ಕೆ ಚೆನೈ ತಲುಪುತ್ತದೆ. ಅದೇ ದಿನ ರಾತ್ರಿ 11.30ಕ್ಕೆ ಚೈನೈನಿಂದ ಹೊರಟ ರೈಲು ಮಾರನೇ ದಿನ ಮಧ್ಯಾಹ್ನ 1ಕ್ಕೆ ಬಂದು ತಲುಪುತ್ತದೆ ಎಂದರು.

ಇದರ ಜೊತೆಗೆ ಶರಾವತಿ ಸಂತ್ರಸ್ಥರ ಸಮಸ್ಯೆ ವಿಐಎಸ್‍ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಸಮಸ್ಯೆ ಬಗರ್‍ಹುಕುಂ ಸಾಗುವಳಿದಾರರ ಸಮಸ್ಯೆಗಳತ್ತ ಗಮನಹರಿಸಲಾಗುವುದು. ನಂಬಿಕೆ ಇದೆ ಈ ಎರಡು ಕಾರ್ಖಾನೆಗಳು ಪುನರಾರಂಭಿಸುತ್ತವೆ ಎಂದು ಈಗಾಗಲೇ ಎಂಪಿಎಂ ಕಾರ್ಖಾನೆಗೆ ಸಂಬಂಧಿಸಿದಂತೆ 20 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಕಾರ್ಖಾನೆಗೆ ಮತ್ತು 40 ವರ್ಷದ ಲೀಸ್ ಅವಧಿಗೆ ವಿಸ್ತರಿಸಲು ಮನವಿ ಮಾಡಿದ್ದೇವೆ, ಆದರೆ ಪರಿಸರ ಪ್ರೇಮಿಗಳು ಅಲ್ಲಿ ನೀಲಗಿರಿ ಬೆಳೆಯಬಾರದು ಎಂಬ ಹೋರಾಟ ನಡೆಸುತ್ತಿದ್ದಾರೆ. ನೀಲಗಿರಿ ಇಲ್ಲದೆ, ಕಾರ್ಖಾನೆ ಮಾಡುವುದು ಹೇಗೆ ಎಂಬ ಯೋಚನೆ ಬರುತ್ತದೆ.

ವಿಐಎಸ್‍ಎಲ್ ಕಾರ್ಖಾನೆಗೆ ಸಂಬಂಧಿಸಿದಂತೆ ಈಗಾಗಲೇ ಕೈಗಾರಿಕಾ ಮತ್ತು ಉಕ್ಕು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿಯವರು ಕಾರ್ಖಾನೆಗೆ ಭೇಟಿ ನೀಡಿ, ಭರವಸೆ ನೀಡಿದ್ದಾರೆ. ಪುನಶ್ಚೇತನಗೊಳಿಸಲು ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಎಲ್ಲರೂ ಸಕಾರತ್ಮಕವಾಗಿ ಸ್ಪಂಧಿಸಿದ್ದಾರೆ. ಈಗಾಗಲೇ ಸಭೆಗಳನ್ನು ಕೂಡ ನಡೆಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಪ್ರಮುಖರಾದ ರುದ್ರೇಗೌಡರು, ಮೋಹನ್‍ರೆಡ್ಡಿ, ಜಗದೀಶ್, ಸತೀಶ್, ಮಾಲತೇಶ್, ಚಂದ್ರಶೇಖರ್, ವಿನ್ಸಂಟ್, ಕುಪ್ಪೇಂದ್ರ, ಕೆ.ವಿ.ಅಣ್ಣಪ್ಪ, ರಾಮು ಇದ್ದರು. 

By admin

ನಿಮ್ಮದೊಂದು ಉತ್ತರ

You missed

error: Content is protected !!