ಸಾಗರ : ಸಂಸತ್‌ನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಿಂದೂಗಳು ಹಿಂಸಾಚಾರ ಮತ್ತು ದ್ವೇಷವನ್ನು ಹರಡುತ್ತಾರೆ ಎಂದು ನೀಡಿರುವ ಹೇಳಿಕೆಯನ್ನು ಖಂಡಿಸಿ ಬಿಜೆಪಿ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಲೋಕಸಭೆ ಅಧಿಕೃತ ವಿಪಕ್ಷ ನಾಯಕರಾಗಿ ರಾಹುಲ್ ಗಾಂಧಿಯವರು ಸಂಸತ್ ಕಲಾಪದಲ್ಲಿ ಮಾತನಾಡುವಾಗ ಹಿಂದುಗಳು ದ್ವೇಷವನ್ನು ಹಚ್ಚುತ್ತಿದ್ದಾರೆ,
ಪ್ರೇರೆಪಿಸುತ್ತಿದ್ದಾರೆ, ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಪೂರ್ವಾಗ್ರಹಪೀಡಿತರಾಗಿ ಹೇಳಿದ್ದನ್ನು ಬಿಜೆಪಿ ತೀವೃವಾಗಿ ಖಂಡಿಸುತ್ತದೆ. ಇದು ಕಾಂಗ್ರೇಸ್‌ಗೆ ರಾಹುಲ್
ಗಾಂಧಿಗೆ ಗೌರವ ತರುವ ವಿಷಯವಲ್ಲ. ಹಿಂದೂಗಳು ತಮ್ಮ ಪ್ರತಿಕಾರವನ್ನು ಮತದ ಮೂಲಕ ಚುನಾವಣೆ ಮೂಲಕ ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸುತ್ತಾರೆ.
ತಕ್ಷಣ ರಾಹುಲ್ ಗಾಂಧಿಯವರು ಘನತೆವೆತ್ತ ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ಸಾಂವಿಧಾನಿಕ ಹುದ್ದೆಯಲ್ಲಿರುವ ರಾಹುಲ್ ಗಾಂಧಿಯವರು ಹಿಂದುಗಳು ದ್ವೇಷವನ್ನು ಹರಡುತ್ತಾರೆ ಎನ್ನುವ ಮೂಲಕ ಹಿಂದೂಗಳು ಭಯೋತ್ಪಾದಕರು ಎನ್ನುವ ಅರ್ಥ ಬರುವ ರೀತಿಯಲ್ಲಿ ಮಾತನಾಡಿರುವುದು ಅತ್ಯಂತ ಖಂಡನೀಯ.
ನರೇಂದ್ರ ಮೋದಿಯವರು ಹಿಂದುವೇ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದು ಅತ್ಯಂತ ಹೇಯವಾದದ್ದು. ಸಮಸ್ತ ಭಾರತೀಯರ ಹೃದಯದಲ್ಲಿ ನೆಲೆಸಿರುವ ನರೇಂದ್ರ ಮೋದಿಯವರ ಬಗ್ಗೆ ರಾಹುಲ್ ಗಾಂಧಿ ನೀಡಿರುವ ಈ ಹೇಳಿಕೆ ಅತ್ಯಂತ ದುರದೃಷ್ಟಕರವಾದದ್ದು.
ತಕ್ಷಣ ರಾಷ್ಟ್ರಪತಿಗಳು ಅವರನ್ನು ಸ್ಥಾನದಿಂದ ವಜಾಗೊಳಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆ ನೀಡಿದರೆ ಬಿಜೆಪಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ರೈತ ಮೋರ್ಚಾ ಪ್ರಮುಖ ಪ್ರಸನ್ನ ಕೆರೆಕೈ ಮಾತನಾಡಿದರು. ಪ್ರತಿಭಟನೆಯಲ್ಲಿ ಮಧುರಾ ಶಿವಾನಂದ್, ವಿ.ಮಹೇಶ್, ಆರ್.ಶ್ರೀನಿವಾಸ್, ಲಿಂಗರಾಜ್ ಬಿ.ಎಚ್., ಸವಿತಾ ವಾಸು, ಪ್ರೇಮ ಸಿಂಗ್, ಭಾವನಾ ಸಂತೋಷ್, ವಿನೋದ್ ರಾಜ್, ಪರಶುರಾಮ್, ಕೃಷ್ಣ ಶೇಟ್, ಸಂತೋಷ್ ಶೇಟ್ ಇನ್ನಿತರರು ಹಾಜರಿದ್ದರು.