ಶಿವಮೊಗ್ಗ : ಹಾವೇರಿಯಲ್ಲಿ ನಡೆದ ಭೀಕರ ಅಪಘಾತ ದುಃಖ ತಂದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ವಿಷಾದ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಎಮ್ಮೆಹಟ್ಟಿ ಗ್ರಾಮದ ಒಂದೇ ಕುಟುಂಬದ 13 ಸದಸ್ಯರು ಸಾವನಪ್ಪಿದ್ದಾರೆ. ಸರ್ಕಾರ ಈಗಾಗಲೇ ಎರಡು ಲಕ್ಷ ಪರಿಹಾರ ಘೋಷಣೆ ಮಾಡಿದೆ. ಇನ್ನು ಹೆಚ್ಚಿನ ಪರಿಹಾರ ನೀಡಬೇಕು. ಕನಿಷ್ಠ ಒಬ್ಬರಿಗೆ 5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮೃತಪಟ್ಟ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಲು ಪಕ್ಷದಿಂದಲೂ ಪ್ರಯತ್ನ ಮಾಡುತ್ತೇವೆ. ಎಲ್ಲಾ ಜನಪ್ರತಿನಿಧಿಗಳು ಸೇರಿ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬುತ್ತೇವೆ. ಇನ್ನು ಒಂದು ಗಂಟೆಯಲ್ಲಿ ಎಲ್ಲರೂ ಮನೆ ಸೇರುತ್ತಿದ್ದರು. ಅಷ್ಟರಲ್ಲಿ ಹೀಗೆ ಆಗಿದೆ, ದೇವರ ಇಚ್ಚೆ ಏನಿತ್ತೋ ಗೊತ್ತಿಲ್ಲ. ವಾಹನ ಸವಾರರು ಇನ್ನಾದರು ಎಚ್ಚರಿಕೆಯಿಂದ ಚಾಲನೆ ಮಾಡಬೇಕು ಎಂದು ಹೇಳಿದರು.
ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ರಾಘವೇಂದ್ರ, ಸಹಕಾರಿ ಪ್ರಕೋಷ್ಟದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅವರು ಸಾಕಷ್ಟು ವರ್ಷದಿಂದ ಅಧಿಕಾರಿದಲ್ಲಿದ್ದಾರೆ. ಅವರ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಹಾಗಾಗಿ ಅವರು ಸಹಕಾರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ ಎಂದರು.
ಎಲ್ಲಾ ರೀತಿಯ ಪ್ರಯತ್ನ ಹಾಗೂ ಶಕ್ತಿ ಮೀರಿ ನಮ್ಮ ಪಕ್ಷದ ಅಭ್ಯರ್ಥಿಗಳು ಪ್ರಯತ್ನ ಮಾಡಿದ್ದಾರೆ. ನಮ್ಮವರು ಹತ್ತಿರದಿಂದ ಸೋತಿದ್ದಾರೆ ಅಷ್ಟೇ. ನಮ್ಮ ಅಭ್ಯರ್ಥಿಗಳು ತುಂಬಾ ಪೈಟ್ ನೀಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದರು, ಒಂದು ವರ್ಷ ತುಂಬಿದ ಮೇಲೆ ಮತದಾರರ ಮೇಲೆ ಸೇಡು ತೀರಿಸಿಕೊಳ್ಳುವ ಕೆಲಸ ಸರ್ಕಾರದಿಂದ ಆಗ್ತಿದೆ. ಹಾಲಿನ ದರ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಆಗಿದೆ. ಜನರ ಜೇಬಿಗೆ ಕೈ ಹಾಕಿ ಹಣ ಕಿತ್ತುಕೊಳ್ಳುವ ಕೆಲಸ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಸಿಎಂ, ಡಿಸಿಎಂ ಕುರ್ಚಿ ಬಗ್ಗೆ ಚರ್ಚೆ ಶುರುವಾಗಿದೆ. ರಾಜ್ಯದಲ್ಲಿ ಅಧಿಕಾರದ ತಿಗ್ಗಾಟ ಶುರುವಾಗಿದೆ. ಜನ ಎಲ್ಲವನ್ನು ನೋಡ್ತಾ ಇದ್ದಾರೆ ಎಂದು ಹೇಳಿದರು.