
ಶಿವಮೊಗ್ಗ: ಕೇಂದ್ರ ಸರ್ಕಾರವು ದೇಶದಲ್ಲಿ ಪ್ರಧಾನ ಮಂತ್ರಿ ಸೂರ್ಯಘರ್ ಸೋಲಾರ್ ರೂಫ್ ಟಾಪ್ ಸಬ್ಸಿಡಿ ಯೋಜನೆ ಅಡಿ ಒಂದು ಕೋಟಿ ಮನೆಗಳಿಗೆ ಸೋಲಾರ್ ರೂಫ್ ಟಾಪ್ ಅಳವಡಿಸುವ ಗುರಿ ಹೊಂದಿದ್ದು, ಗ್ರಾಹಕರಿಗೆ ಸಬ್ಸಿಡಿ ಸಹ ನೀಡಲಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ಹೇಳಿದರು.

ಟಾಟಾ ಪವರ್ ಸೋಲಾರ್ ರೂಫ್ನ ಚಾನಲ್ ಪಾರ್ಟನರ್ ಎಸ್.ಎಸ್. ಏಜೆನ್ಸೀಸ್ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ೨೮-೦೬-೨೦೨೪ರ ಶುಕ್ರವಾರ ಸಂಜೆ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಹೋಟೆಲ್ ಗ್ರೀನ್ ವ್ಯೂ, ಕ್ಲಾರ್ಕ್ ಇನ್ನಲ್ಲಿ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಸೂರ್ಯಘರ್ ಸೋಲಾರ್ ರೂಫ್

ಟಾಪ್ ಸಬ್ಸಿಡಿ ಯೋಜನೆ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಹಾಗೂ ಈ ಯೋಜನೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ದೀರ್ಘ ಕಾಲದ ಕಡಿಮೆ ಬಡ್ಡಿ ಸೌಲಭ್ಯವನ್ನು ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡಿದರು.

ಸೂರ್ಯಘರ್ ಸೋಲಾರ್ ರೂಫ್ ಟಾಪ್ ಯೋಜನೆಯಿಂದ ಜಾಗತಿಕ ತಾಪಮಾನ ಕಡಿಮೆ ಮಾಡಬಹುದು. ಅಲ್ಲದೆ ಪ್ರತಿ ಮನೆಗೆ ಅಗತ್ಯ ಇರುವ ವಿದ್ಯುತ್ತನ್ನು ತಾವೇ ಉತ್ಪಾದಿಸಿಕೊಳ್ಳುವ ಮೂಲಕ ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬಿಗಳಾಗಬಹುದು ಎಂದರು.

ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸ್ಥಳೀಯ ಸಂಸ್ಥೆಯಾಗಿರುವ ಎಸ್.ಎಸ್. ಏಜೆನ್ಸೀಸ್ ಮುಂದಾಗಿದೆ. ಈ ಸಂಸ್ಥೆಯು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಟಾಟಾ ಪವರ್ ಸೋಲಾರ್ನ ಗ್ರಾಹಕರನ್ನು ಹೊಂದಿದೆ ಎಂದು ಹೇಳಿದರು.

ಸೂರ್ಯಘರ್ ಸೋಲಾರ್ ರೂಫ್ ಟಾಪ್ ಯೋಜನೆ ಅಳವಡಿಸಿಕೊಳ್ಳಲು ಇಚ್ಛಿಸುವವರಿಗೆ ಎಸ್.ಎಸ್. ಏಜೆನ್ಸೀಸ್ ಏಕ ಗವಾಕ್ಷಿ (ಸಿಂಗಲ್ ವಿಂಡೋ) ಪದ್ಧತಿ ಮೂಲಕ ಎಲ್ಲಾ ಸೌಲಭ್ಯಗಳನ್ನು ಒಂದೇ ಕಡೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ನೈಸರ್ಗಿಕವಾಗಿ ದೊರೆಯುವ ಸೌರಶಕ್ತಿಯು ನವೀಕರಿಸಬಹುದಾದ ಸಂಪನ್ಮೂಲವಾಗಿದೆ. ಪರಿಸರ ಮಾಲಿನ್ಯ ತಡೆಗಟ್ಟಲು ಪೆಟ್ರೋಲ್, ಡೀಸೆಲ್ನಂತಹ ನವೀಕರಿಸಲಾಗದ ಪೆಟ್ರೋಲಿಯಂ ಉತ್ಪನ್ನಗಳ ಉಪಯೋಗವನ್ನು ಕಡಿಮೆ ಮಾಡಲು ಮತ್ತು ಕಲ್ಲಿದ್ದಲು ಬಳಕೆಯನ್ನು ನಿಯಂತ್ರಿಸಲು ಸೌರಶಕ್ತಿಯ ಉತ್ಪಾದನೆ ಹೆಚ್ಚಳವಾಗಬೇಕಿದೆ. ಈ ನಿಟ್ಟಿನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಹಕಾರ ನೀಡಲು ಮುಂದಾಗಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥರಾದ ಯು. ವಿಶುಕುಮಾರ್ ಮಾತನಾಡಿ ಸೌರಶಕ್ತಿ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಗ್ರಾಹಕರಿಗೆ ಸೂರ್ಯಘರ್ ಸೋಲಾರ್ ರೂಫ್ ಟಾಪ್ ಯೋಜನೆ ಅನುಕೂಲಕರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್. ರುದ್ರೇಗೌಡರನ್ನು ಅಭಿನಂದಿಸಲಾಯಿತು. ಟಾಟಾ ಪವರ್ ಸೋಲಾರ್ನ ಬ್ರಾಂಚ್ ಮ್ಯಾನೇಜರ್ ಕಾರ್ತಿಕ್ ಗೌಡ, ಸೇಲ್ಸ್ ಎಕ್ಸಿಕ್ಯೂಟಿವ್ ದರ್ಶನ್ ಹೆಗಡೆ, ಟಾಟಾ ಪವರ್ ಸೋಲಾರ್ನ ಚಾನಲ್ ಪಾರ್ಟನರ್ ಎಸ್ಎಸ್ ಏಜೆನ್ಸಿಯ ಎಸ್.ಎಂ. ಶಣೈ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.