ಶಿವಮೊಗ್ಗ,ಜೂ.೨೮: ಇಂದು ಕುವೆಂಪು ರಂಗಮಂದಿರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ಸರ್ಕಾರದಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸ್ಥಳದಲ್ಲಿಯೇ ಕೆಲವರಿಗೆ ಪರಿಹಾರ ಸಿಕ್ಕಿದೆ.
ಜನರ ವಿವಿಧ ರೀತಿಯ ಅಹವಾಲುಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಆಲಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಇವರ ನೇತೃತ್ವದಲ್ಲಿ, ಇಂದು ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಉಸ್ತುವಾರಿ ಸಚಿವರು ಕಳೆದ ಬಾರಿ ಜನಸ್ಪಂದನ ಕಾರ್ಯಕ್ರಮ ನಡೆಸಿದಾಗ ೪೫೦ ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿತ್ತು. ಅಧಿಕಾರಿಗಳು ಕಚೇರಿಗೆ ಬರುವ ಜನಸಾಮಾನ್ಯರಿಗೆ ಸಕಾರತ್ಮಕವಾಗಿ ಸ್ಪಂದಿಸಬೇಕು ಎಂದರು.
ಜನಸ್ನೇಹಿಯಾಗಿ ಜನರ ವಿಶ್ವಾಸ ಗಳಿಸಬೇಕು. ಕಠಿಣ ಸಮಸ್ಯೆಗಳಿದ್ದರೆ ಜನ ಪ್ರತಿನಿಧಿಗಳ ಬಗ್ಗೆ ಹಿರಿಯ ಅಧಿಕಾರಿಗಳ ಸಲಹೆ ಪಡೆಯಬೇಕು. ಜನರಿಗಾಗಿ ೫ ಗ್ಯಾರಂಟಿಗಳ ಮೂಲಕ ಸರ್ಕಾರ ಅನೇಕ ಉತ್ತಮ ಕಾರ್ಯಕ್ರಮ ನೀಡಿದೆ. ಯಾರೂ ಇದರಿಂದ ವಂಚಿತರಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಗಾಜನೂರಿನ ವಿಕಲಚೇತನರಾದ ಸತ್ಯನಾರಾಯಣ್ ಅವರು ಅರ್ಜಿ ನೀಡಿ, ನಮ್ಮ ಮನೆ ಮತ್ತು ಜಮೀನಿಗೆ ರಸ್ತೆ ಮಾಡಿಕೊಡಿ ಎಂದು ಹಲವು ಬಾರಿ ಮನವಿ ನೀಡಿದರು, ಕ್ರಮವಾಗಿಲ್ಲ ಎಂದರು. ಅದಕ್ಕೆ ಸ್ಪಂದಿಸಿದ ಸಚಿವರು ಕೂಡಲೇ ಅಧಿಕಾರಿಗಳಿಗೆ ಇವರ ಬೇಡಿಕೆಯನ್ನು ಈಡೇರಿಸಬೇಕು ಮತ್ತು ಇದನ್ನು ಕಡೆಗಣಿಸಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಮೌಲಾನ ಅಬ್ದುಲ್ ಕಲಾಂ ಶಾಲೆಯಲ್ಲಿ ೧೫೦ ವಿದ್ಯಾರ್ಥಿಗಳಿದ್ದು, ಕಳೆದ ಒಂದೂವರೆ ವರ್ಷದಿಂದ ಬಿಸಿಯೂಟ ನಿಂತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಕೂಡಲೇ ಅಲ್ಲಿನ ವಿದ್ಯಾರ್ಥಿಗಳಿಗೆ ಹಾಲು ಮೊಟ್ಟೆ, ರಾಗಿಗಂಜಿ ಕಲ್ಪಿಸಲು ಸಿಇಓಗೆ ಸೂಚಿನೆ ಕೊಟ್ಟರು.
ಇಂದಿನ ಜನಸ್ಪಂದನ ಸಭೆಯಲ್ಲಿ ಸಾಕಷ್ಟು ಅರ್ಜಿಗಳು ಕಂದಾಯ ಭೂಮಿಗೆ ೯೪ ಸಿಸಿ ಅರ್ಜಿಕೊಟ್ಟರು ಹಕ್ಕು ಪತ್ರ ಹಲವಾರು ವರ್ಷಗಳಿಂದ ಕೊಟ್ಟಿಲ್ಲ. ನಮಗೆ ಭೂಮಿ ಹಕ್ಕು ಕೊಡಿ, ಸಮುದಾಯ ಭವನಕ್ಕೆ ಹಣ ಕೊಡಿ , ಕಡುಬಡವರಾಗಿದ್ದು ನಿವೇಶನ ಕೊಡಿ, ತೋಟಕ್ಕೆ ಬೆಂಕಿ ಬಿದ್ದು ನಾಶವಾಗಿದೆ. ಅತಿವೃಷ್ಟಿಯಿಂದ ನಾಶವಾಗಿದೆ. ಕಾಡುಪ್ರಾಣಿಗಳ ಹಾವಳಿಯಿಂದ ನಾಶವಾಗಿದೆ. ನಮಗೆ ಪರಿಹಾರ ನೀಡಿ ಎಂಬುವುದು ಕೆಲವರ ಅಳಲು.
ನನ್ನ ಮಗ ಬುದ್ಧಿಮಾಂಧ್ಯನಿದ್ದಾನೆ. ಆತನಿಗೆ ನೆರವು ನೀಡಿ ಎಂಬುವುದು ಓರ್ವರ ಬೇಡಿಕೆಯಾದರೆ ಹೊಲ ಮತ್ತು ಮನೆಗೆ ಖಾತೆ ಮಾಡಿಕೊಡಿ ಎಂಬುವುದು ಕೆಲವರ ಬೇಡಿಕೆ, ವಿಕಲಾಂಗ ಮಸ್ತಾನ್ ಎಂಬ ಯುವಕ ನನಗೆ ಕೆಎಎಸ್ ತರಬೇತಿಗೆ ಕಳಿಸಿಕೊಡಿ ಎಂದು ಬೇಡಿಕೆ ಇಟ್ಟರು. ಕೂಡಲೇ ಸ್ಪಂಧಿಸಿದ ಸಚಿವರು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ವಸಂತಕುಮಾರ್ ಎಂಬುವ ವಿಕಲಚೇತನರು ಸರ್ಕಾರಿ ಹೊರಗುತ್ತಿಗೆ ನೌಕರಿಯಾದರೂ ಕೊಡಿಸಿ ಎಂದು ಬೇಡಿಕೆ ಇಟ್ಟರು. ಜ್ಯೋತಿ ಎನ್ನುವ ವಿಕಲಚೇತನೆ ನಾನು ಅಂತರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದು, ಆರ್ಥಿಕ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಕೂಡಲೇ ಸ್ಪಂಧಿಸಿದ ಸಚಿವರು ಆರ್ಥಿಕ ಸಹಾಯ ನೀಡುವ ಭರವಸೆಯನ್ನು ನೀಡಿದರು. ಜೊತೆಗೆ ರೈತರು ಮತ್ತು ಡಿಎಸ್‌ಎಸ್ ಮುಖಂಡರು ಕೂಡ ಭೂಮಿ ಹಕ್ಕು ಸಂಬಂಧಿಸಿದಂತೆ ಸರ್ಕಾರದಿಂದ ಹಾಗುತ್ತಿರುವ ವಿಳಂಬದ ಬಗ್ಗೆ ಸಚಿವರ ಗಮನಕ್ಕೆ ತಂದರು.
ಬೆಳಿಗ್ಗೆ ೧೦ರಿಂದಲೇ ಹಲವಾರು ನಾಯಕರು ಇಂದಿನ ಸಭೆಯಲ್ಲಿ ತಮ್ಮ ವಿವಿಧ ಸಮಸ್ಯೆಗಳನ್ನು ಸಚಿವರ ಮುಂದಿಟ್ಟು ಸ್ಥಳದಲ್ಲೇ ಪರಿಹಾರ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಸಿ.ಇ.ಓ. ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾರಕ್ಷಣಾಧಿಕಾರಿ ಮಿಥುನ್‌ಕುಮಾರ್ ಜಿ.ಕೆ. ಪಾಲಿಕೆ ಆಯುಕ್ತರಾದ ಕವಿತಯೋಗಪ್ಪ, ಅರಣ್ಯಾ-ಕಂದಾಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.