ಸಾಗರ : ವಾಲ್ಮೀಕಿ ಅಭಿವೃದ್ದಿ ನಿಗಮದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳ ರಾಜಿನಾಮೆಗೆ ಒತ್ತಾಯಿಸಿ ಜೂನ್ ೨೫ರಂದು ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದರು.
ಇಲ್ಲಿನ ಬಿ.ಎಚ್.ರಸ್ತೆಯಲ್ಲಿ ರಾಜ್ಯ ಸರ್ಕಾರದ ಇಂಧನ ದರ ಏರಿಕೆ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ರಸ್ತೆತಡೆ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು
.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭಿವೃದ್ದಿಗೆ ಸೇರಬೇಕಾದ ೧೮೭ ಕೋಟಿ ರೂ. ಹಣ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಸಚಿವ ನಾಗೇಂದ್ರ ರಾಜಿನಾಮೆ ನೀಡಿದ್ದಾರೆ. ಆದರೆ ಆಡಳಿತ ವೈಫಲ್ಯದ ನೇರಹೊಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊತ್ತು ತಮ್ಮ ಸ್ಥಾನಕ್ಕೆ ತಕ್ಷಣ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಲಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿರುವುದು ಪಿಕ್‌ಪಾಕೇಟ್ ಸರ್ಕಾರ. ಭಾಗ್ಯಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಈಗ ಭಾಗ್ಯಗಳಿಗೆ ಹಣ ಸಂಗ್ರಹ ಮಾಡುತ್ತೇವೆ ಎಂದು ಇಂಧನ ಬೆಲೆ ಹೆಚ್ಚು ಮಾಡಿದ್ದಾರೆ. ಜೊತೆಗೆ ಬಸ್ ದರ ಏರಿಸುವ ಸೂಚನೆ ನೀಡುತ್ತಿದ್ದಾರೆ.
ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ರಾಜ್ಯದ ಶೇ. ೩೦ರಷ್ಟು ಜನರಿಗೆ ಮಾತ್ರ ಗ್ಯಾರಂಟಿ ತಲುಪುತ್ತಿದೆ. ಆದರೆ ಶೇ. ೧೦೦ರಷ್ಟು ಜನರು ಹೆಚ್ಚಿನ ತೆರಿಗೆ ಹೊರೆ ಅನುಭವಿಸಬೇಕಾಗಿದೆ. ಭಾಗ್ಯಗಳನ್ನು ಪಡೆಯದ ಎಲ್ಲರನ್ನೂ ಜಾಗೃತಿಗೊಳಿಸಿ ರಾಜ್ಯ ಸರ್ಕಾರದ ವಿರುದ್ದ ಬೃಹತ್ ಜನಾಂದೋಲನ ರೂಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಗ್ಯಾರಂಟಿ ಮೂಲಕ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯಬಹುದು ಎಂದು ಕೊಂಡಿದ್ದ ಕಾಂಗ್ರೇಸ್‌ಗೆ ಭ್ರಮನಿರಶವಾಗಿದ್ದು ಇಂಧನ ಬೆಲೆ ಹೆಚ್ಚಳದ ಮೂಲಕ ರಾಜ್ಯದ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ. ಸಾಗರದಲ್ಲಿ ನಯಾಪೈಸೆ ಅಭಿವೃದ್ದಿ ಕೆಲಸವಾಗಿಲ್ಲ. ಶಾಸಕರು ತಾಲ್ಲೂಕಿನ ಜನರಿಗೆ ನೀಡಿದ ಕೊಡುಗೆ ಎಂದರೆ ಡೇಂಗ್ಯೂ ಜ್ವರ. ಸ್ವಚ್ಚತೆ ಕೊರತೆಯಿಂದ ತಾಲ್ಲೂಕಿನಲ್ಲಿ ಡೇಂಗ್ಯೂ ಪ್ರಕರಣ ಹೆಚ್ಚಿದ್ದು ಆಸ್ಪತ್ರೆಯಲ್ಲಿ ಬೆಡ್ ಹಾಕಲು ಸಹ ಜಾಗ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಪ್ರತಿಭಟನೆ ಉದ್ದೇಶಿಸಿ ಮಧುರಾ ಶಿವಾನಂದ್, ಕೆ.ಎಸ್.ಪ್ರಶಾಂತ್, ಶ್ರೀನಿವಾಸ್ ಮೇಸ್ತ್ರಿ ಮಾತನಾಡಿದರು. ಬಿಜೆಪಿ ಪ್ರಮುಖರಾದ ದೇವೇಂದ್ರಪ್ಪ, ಗಣೇಶಪ್ರಸಾದ್, ವಿ.ಮಹೇಶ್, ಸಂತೋಷ್ ಶೇಟ್, ಭರ್ಮಪ್ಪ ಅಂದಾಸುರ, ರಮೇಶ್ ಎಚ್.ಎಸ್., ಪರಶುರಾಮ್, ಚಂದ್ರಕಾಂತ್, ಹು.ಭಾ.ಅಶೋಕ್, ಕೃಷ್ಣ ಶೇಟ್, ಪ್ರೇಮ ಸಿಂಗ್, ಭಾವನಾ ಸಂತೋಷ್, ಮೈತ್ರಿ ಪಾಟೀಲ್, ಸುಧಾ ಉದಯ್, ಲಿಂಗರಾಜ್ ಬಿ.ಎಚ್., ಸವಿತಾ ವಾಸು, ವಿನೋದ್ ರಾಜ್ ಇನ್ನಿತರರು ಹಾಜರಿದ್ದರು. (