ಶಿವಮೊಗ್ಗ : ಗಾಂಜಾ ಪ್ರಕರಣವೊಂದರಲ್ಲಿ  ನಾಲ್ವರು ಯುವಕರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ  ವಿಧಿಸಿ, ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೂ. 15 ರಂದು ತೀರ್ಪು ನೀಡಿದೆ.


ಇಂದಿರಾನಗರ ನಿವಾಸಿಗಳಾದ ದೌಲತ್ ಯಾನೆ ಗುಂಡು (27), ಮುಜೀಬ್ ಯಾನೆ ಬಸ್ಟ್ (27), ಕಡೇಕಲ್ ನಿವಾಸಿಗಳಾದ ಶೋಹೇಬ್ ಯಾನೆ ಚೂಡಿ (24) ಹಾಗೂ ಮಹಮ್ಮದ್ ಜಫ್ರುಲ್ಲಾ (24) ಶಿಕ್ಷೆಗೊಳಗಾದವರೆಂದು ಗುರುತಿಸಲಾಗಿದೆ.


ಶಿಕ್ಷೆಯ  ಜೊತೆಗೆ ಅಪರಾಧಿಗಳಿಗೆ ತಲಾ 1,05,000 ರೂ. ದಂಡ  ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 1 ವರ್ಷ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.


ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ  ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುರೇಶ್ ಕುಮಾರ್ ಎ. ಎಂ. ಅವರು ವಾದ ಮಂಡಿಸಿದ್ದರು.

ಪ್ರಕರಣದ ವಿವರ : 11-12-2021  ರಂದು ಆಂಧ್ರಪ್ರದೇಶದಿಂದ  ನಗರಕ್ಕೆ ಗಾಂಜಾ ಸಾಗಾಣೆ ಮಾಡಲಾಗುತ್ತಿದೆ ಎಂಬ ಖಚಿತ ವರ್ತಮಾನ ಶಿವಮೊಗ್ಗದ ತುಂಗಾನಗರ ಠಾಣೆ  ಪೊಲೀಸರಿಗೆ ಲಭಿಸಿತ್ತು. ಇದರ ಆಧಾರದ ಮೇಲೆ ಅಂದಿನ ಠಾಣೆ ಇನ್ಸ್’ಪೆಕ್ಟರ್ ದೀಪಕ್ ಎಂ. ಎಸ್. ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆಗಿಳಿದಿತ್ತು.  


ಲಕ್ಕಿನಕೊಪ್ಪ ಕ್ರಾಸ್ ಬಳಿಯ ಹಾಲ್ ಲಕ್ಕವಳ್ಳಿ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರನ್ನು  ತಡೆದು ಪರಿಶೀಲಿಸಿದ್ದರು. ಈ ವೇಳೆ ಕಾರಿನ ಸ್ಟೆಪ್ನಿ, ಹಿಂಭಾಗ ಹಾಗೂ ಮುಂಭಾಗದ ಡೋರ್ ಗಳು ಮತ್ತು ಬಾನೆಟ್ ನ ಒಳಗೆ  ಗಾಂಜಾ ಪ್ಯಾಕೇಟ್ ಗಳು ದೊರೆತಿದ್ದವು. 6,50,000 ರೂ. ಮೌಲ್ಯದ 21 ಕೆ.ಜಿ. 315  ಗ್ರಾಂ ತೂಕ ಗಾಂಜಾ, ಕಾರನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದು ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ನಂತರ  ಸದರಿ ಪ್ರಕರಣದ ಕುರಿತಂತೆ ಆಗಿನ ಸಬ್ ಇನ್ಸ್’ಪೆಕ್ಟರ್ ಭಾರತಿ, ಬಿ ಹೆಚ್. ಅವರು ನ್ಯಾಯಾಲಯಕ್ಕೆ  ಆರೋಪ ಪಟ್ಟಿ ದಾಖಲಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!