ಶಿವಮೊಗ್ಗ,ಜೂ.೮: ತೀರ್ಥಹಳ್ಳಿಯ ಅಲೆಮಾರಿಗಳಿಗೆ ನ್ಯಾಯವೊದಗಿಸಬೇಕು, ಜಾತಿ ಗಣತಿ ಬಿಡುಗಡೆ ಮಾಡಬೇಕು. ಮತ್ತು ಹಮಾರೇ ಬಾರಹ ಚಿತ್ರವನ್ನು ನಿಷೇಧ ಮಾಡಿರುವುದು ಸರಿಯಲ್ಲ ಎಂದು ನಟ ಹಾಗೂ ಚಿಂತಕ ಚೇತನ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಂದು ಚಿತ್ರವನ್ನು ನೋಡದೇ ಅದನ್ನು ನಿಷೇಧ ಮಾಡುವುದು ಸರಿಯಲ್ಲ. ಇದು ವಾಕ್ ಸ್ವಾತಂತ್ರ್ಯಕ್ಕೆ ವಿರೋಧವಾಗಿದೆ. ಕೇವಲ ಟ್ರೈಲರ್ನ್ನು ನೋಡಿ ಚಿತ್ರ ನಿಷೇಧ ಮಾಡುವುದು, ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಮತ್ತು ಓಲೈಕೆಯ ತಂತ್ರವು ಆಗಿದೆ ಎಂದರು.
ಹಾಗೆಯೇ ಟ್ರೈಲರ್ನ್ನು ನೋಡಿ ಚಿತ್ರ ನಿಷೇಧ ಮಾಡಬೇಕು ಎಂದರೆ ಇತ್ತೀಚಿಗೆ ಬರುವ ಎಲ್ಲಾ ಸಿನಿಮಾಗಳನ್ನು ನಿಷೇಧ ಮಾಡಬೇಕಾಗುತ್ತದೆ. ಸಿನಿಮಾಗಳಲ್ಲಿ ಕೊಲೆ, ಸುಲಿಗೆ ಅತ್ಯಾಚಾರ ಮುಂತಾದ ದೃಶ್ಯಗಳು ಇದ್ದೇ ಇರುತ್ತವೆ. ಊಹೆ ಮಾಡಿ ಚಿತ್ರ ನಿಷೇಧ ಮಾಡುವುದು ಸರಿಯಲ್ಲ. ಅಷ್ಟಕ್ಕೂ ಈ ಚಿತ್ರವನ್ನು ಸೆನ್ಸಾರ್ಮಂಡಳಿ ಒಪ್ಪಿಗೆ ನೀಡಿದೆ. ಅಷ್ಟೇ ಅಲ್ಲ ಬಾಂಬೆ ಹೈಕೋರ್ಟ್ ಕೂಡ ಸಮ್ಮಿತಿಸಿದೆ. ಹೀಗಿದ್ದೂ ಕರ್ನಾಟಕ ಸರ್ಕಾರ ಚಿತ್ರ ನಿಷೇಧ ಮಾಡಿರುವುದು ಸರಿಯಲ್ಲ ಎಂದರು.
ಜಾತಿಗಣತಿ ೨೦೧೪ ರಿಂದಲೇ ಪ್ರಾರಂಭವಾಗಿತ್ತು. ಸುಮಾರು ೨೦೦ ಕೋಟಿಯನ್ನು ಇದಕ್ಕಾಗಿ ಖರ್ಚು ಮಾಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಕೂಡ ಮಾತಿನಂತೆ ಜಾತಿಗಣತಿಯನ್ನು ಬಿಡುಗಡೆ ಮಾಡಿಲ್ಲ. ಜಾತಿಗಣತಿಯನ್ನು ಬಿಡುಗಡೆ ಮಾಡದೆ ಹೇಗೆ ದಲಿತರ ಶೋಷಿತರ ಆದಿವಾಸಿಗಳಿಗೆ ನ್ಯಾಯ ಸಿಗುತ್ತದೆ. ಈ ಸರ್ಕಾರಕ್ಕೆ ಅದೇಕೋ ಬಿಡುಗಡೆ ಮಾಡುವ ಮನಸ್ಸಿಲ್ಲವೇನು? ಕಾಂಗ್ರೆಸ್ ಸರ್ಕಾರ ಕೂಡಲೇ ಇದನ್ನು ಬಿಡುಗಡೆ ಮಾಡಬೇಕು ಎಂದರು.
ಕೇಂದ್ರದಲ್ಲಿ ಮೋದಿ ಸರ್ಕಾರ ಆಡಳಿತಕ್ಕೆ ಬರುತ್ತದೆ. ದೇಶದಲ್ಲಿಯೂ ಕೂಡ ಇದುವರೆಗೂ ಜಾತಿ ಗಣತಿ ಹಾಗಿಲ್ಲ. ಎನ್ಡಿಎದೊಂದಿಗೆ ಹೆಜ್ಜೆ ಹಾಕಿರುವ ನಿತೀಶ್ಕುಮಾರ್ ಮತ್ತು ಚಂದ್ರಬಾಬುನಾಯ್ಡು ಅವರು ಒತ್ತಡ ತಂದು ದೇಶದಲ್ಲಿ ಜಾತಿಗಣತಿಯನ್ನು ಮಾಡಬೇಕು ಎಂದರು.
ಒಂದು ದೇಶ, ಒಂದು ಚುನಾವಣೆ ಇದನ್ನು ನಾನು ಒಪ್ಪುವುದಿಲ್ಲ. ಇದು ತುಂಬ ಕಷ್ಟವಾಗುತ್ತದೆ. ಹಿಂದುತ್ವದ ಯುಸಿಸಿ ನಮಗೆ ಅಗತ್ಯಯಿಲ್ಲ. ಸಂವಿಧಾನ ಪರವಾದ ಯುಸಿಸಿ ಈ ದೇಶಕ್ಕೆ ಬೇಕಾಗಿದೆ. ಪ್ರಾದೇಶಿಕ ಪಕ್ಷಗಳ ನಾಯಕರುಗಳಿಗೆ ಈ ವಿಷಯ ಗೊತ್ತಿದೆ. ಇವರು ಎನ್ಡಿಎನಲ್ಲಿ ಸೇರಿಕೊಂಡಿರುವುದರಿಂದ ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ತೀರ್ಮಾನಿಸಬೇಕಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ಹಾಲೇಶಪ್ಪ ಮಾತನಾಡಿ, ಅಲೆಮಾರಿಗಳ ಸಮಸ್ಯೆ ಇಡೀ ರಾಜ್ಯಾದಾದ್ಯಂತ ಇದೆ. ಶಿವಮೊಗ್ಗದಲ್ಲಿಯೂ ಅಂಬೇಡ್ಕರ್ ಕಾಲೋನಿ, ಸಹ್ಯಾದ್ರಿ ಕಾಲೇಜು ಪಕ್ಕದ ಬೈಪಾಸ್ನಲ್ಲಿ ಹಲವು ವರ್ಷಗಳಿಂದ ಅಲೆಮಾರಿಗಳು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿವುಕುಮಾರ್, ಹಾರೋಗುಳಿಗೆ ವಿಶ್ವನಾಥ್ ಇದ್ದರು.