: ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಘುಪತಿ ಭಟ್ ಹಾಗೂ ನನಗೂ ನೇರ ಹಣಾಹಣಿ ಇದೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್.ಪಿ. ದಿನೇಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಚುನಾವಣೆಯಲ್ಲಿ ನನಗೂ ಮತ್ತು ರಘುಪತಿ ಭಟ್ ಅವರಿಗೂ ನೇರ ಸ್ಪರ್ಧೆ ಇದೆ. ಆಯನೂರು ಮಂಜುನಾಥ್ ಏನಿದ್ದರೂ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ. ನಾವು ಪಕ್ಷದಿಂದ ಹೊರ ಹೋಗಿದ್ದರೂ ಕೂಡ ನಾವಿಬ್ಬರೇ ನಿಜವಾದ ಪಕ್ಷದ ಅಭ್ಯರ್ಥಿಗಳಾಗಿದ್ದೇವೆ ಎಂದರು.
ಈಗಾಗಲೇ ಒಂದು ಸುತ್ತು ಪ್ರಚಾರ ಮಾಡಿ ಬಂದಿದ್ದೇನೆ. ಎಲ್ಲಾ ಕಡೆ ಆಭೂತಪೂರ್ವ ಬೆಂಬಲ ಇದೆ. ನನ್ನ ಪರವಾಗಿ ಪಕ್ಷಾತೀತವಾಗಿ ಬೆಂಬಲ ನೀಡುತ್ತಿದ್ದಾರೆ. ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದೇನೆ. ಎರಡು ಬಾರಿ ಸೋತಿದ್ದೇನೆ. ಈ ಬಾರಿ ಮತದಾರರು ಕೈಹಿಡಿಯುತ್ತಾರೆ ಎಂಬ ಆತ್ಮವಿಶ್ವಾಸ ಇದೆ. ಗೆದ್ದೇ ಗೆಲ್ಲುತ್ತೇನೆ ಎಂದರು.ಅನೇಕ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಪದವೀಧರರ
ಸಮಸ್ಯೆಗಳನ್ನು ಅರಿತಿದ್ದೇನೆ. ಗೆದ್ದರೆ ಖಂಡಿತಾ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಬಿಜೆಪಿ ಅಭ್ಯರ್ಥಿ ಈ ಚುನಾವಣೆಯನ್ನು ಅಪವಿತ್ರಗೊಳಿಸಲು ಹೊರಟಿದ್ದಾರೆ. ಒಂದು ಪಕ್ಷದಿಂದ ಟಿಕೆಟ್ ಗಾಗಿ ಬಯಸಿ ನಮ್ಮ ಹತ್ತಿರವೇ ಅವರು ಬಂದಿದ್ದರು. ಇಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಜೆಪಿಗೆ ಹೋದರು.
ಅಲ್ಲಿ ಅವರು ಇರುತ್ತಾರೆ ಎಂಬ ದೃಢತೆ ಇಲ್ಲ ಎಂದ ಅವರು ಕಾಂಗ್ರೆಸ್ ಅಭ್ಯರ್ಥಿ ಕೂಡ ಪಕ್ಷದಿಂದ ಪಕ್ಷಕ್ಕೆ ಹಾರಿದವರು. ಅವರು ಇಲ್ಲೇ ಇರುತ್ತಾರೆ ಎಂಬ ಯಾವ ನಂಬಿಕೆಯೂ ಇಲ್ಲ. ಹಾಗಾಗಿ ನನ್ನನ್ನು
ಮತದಾರರು ಗೆಲ್ಲಿಸುತ್ತಾರೆ. ಈ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಗೌಣವಾಗಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಸುಧಾಕರ್, ಪ್ರೊ. ವೆಂಕಟಾಚಲ, ಉಮೇಶ್, ಸಚಿನ್, ಇದ್ದರು.