” ನಮ್ಮ ವೈಯಕ್ತಿಕ ಬದುಕಿನಲ್ಲಿ ಹೇಗೆ ದೈಹಿಕ ಸ್ವಚ್ಛತೆ ಬಗ್ಗೆ ಗಮನ ಕೊಡುತ್ತೇವೆಯೋ ಹಾಗೆ ನಮ್ಮ ಸುತ್ತ ಮುತ್ತಲಿನ ಪರಿಸರದ ಬಗ್ಗೆಯೂ ಅಷ್ಟೇ ಗಮನ ಕೊಡಬೇಕು. ಶ್ರೀಲಂಕಾ, ಬ್ರಿಟನ್ ಅಮೇರಿಕಾ ದೇಶಗಳಲ್ಲಿ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಭಾರತದಂತಹ ದೇಶದಲ್ಲಿ ಇದು ಜನ ಸಾಮಾನ್ಯರ ಪ್ರಜ್ಞೆಯಾಗಬೇಕಾದುದು ಅಗತ್ಯ. ಈ ಪ್ರಪಂಚವನ್ನು ಹಾಳು ಮಾಡುತ್ತಿರುವ ಮಾರಕ ಶಕ್ತಿ ಪ್ಲಾಸ್ಟಿಕ್.
ಅದರ ನಿರ್ಮೂಲನೆ ಸಾಧ್ಯವಾಗದೆ ಇದ್ದರೆ ಮುಂದಿನ ನಮ್ಮ ಜನಾಂಗ ತೀವ್ರವಾದ ಆತಂಕವನ್ನು ಎದುರಿಸುವುದಂತೂ ಸತ್ಯ. ಈಗಿಂದಲೇ ನಮ್ಮ ಯುವ ಜನಾಂಗ ಜಾಗೃತರಾಗಬೇಕು. ಪರಿಸರ ಕಾಳಜಿ ನಮ್ಮ ಬದುಕಿನ ಭಾಗವಾಗಬೇಕು ” ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಶರತ್ ಅನಂತಮೂರ್ತಿಯವರು ಅಭಿಪ್ರಾಯಪಟ್ಟರು. ಅವರು ವಿವಿ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ಹಮ್ಮಿಕೊಂಡ ಒಂದು ದಿನದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
” ಪರಿಸರ ಪ್ರೀತಿ ಕೇವಲ ತೋರಿಕೆಗಾಗಿ, ಫೋಟೋ ಬ್ಯಾನರ್ಗಾಗಿ ನಡೆಯಬಾರದು. ಶೈಕ್ಷಣಿಕ ಚಟುವಟಿಕೆಯ ಒಂದು ಅಂಗವಾಗಬೇಕು. ಇದರಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡಾಗ ಉದ್ದೇಶ ಸಾರ್ಥಕತೆ ಪಡೆಯುತ್ತದೆ. ಪರಿಸರ ಜಾಗೃತಿ ನಮ್ಮೆಲ್ಲರ ಹೊಣೆ ” ಎಂದರು.
ಕುಲಸಚಿವರಾದ ಶ್ರೀ ಎ. ಎಲ್. ಮಂಜುನಾಥ್ ಅವರು, ” ಪರಿಸರವನ್ನು ಉಳಿಸಿಕೊಳ್ಳುವ ಸವಾಲು ನಮ್ಮ ಮುಂದಿದೆ. ಅದರಲ್ಲೂ ವಿದ್ಯಾವಂತ ಸಮುದಾಯ ಪರಿಸರದ ಅಳಿವು ಉಳಿವಿನ ಪ್ರಶ್ನೆಯನ್ನು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ. ಭೂಮಿಯನ್ನು ಇಂದು ನಾವು ಪ್ಲಾಸ್ಟಿಕ್ ಮುಕ್ತವಾಗಿಸಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆದು ಭೂಮಿಯನ್ನು ಹಾಳು ಮಾಡುವ ನಮ್ಮ ಕೆಟ್ಟ ಹವ್ಯಾಸಕ್ಕೆ ನಾವೇ ಕಡಿವಾಣ ಹಾಕಿಕೊಳ್ಳಬೇಕು. ಕುವೆಂಪು ವಿದ್ಯಾಲಯ ಆವರಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವಲ್ಲಿ ನಿರಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಪ್ರಯತ್ನದಲ್ಲಿ ಎನ್ ಎಸ್ ಎಸ್ ನಮಗೊಂದು ಶಕ್ತಿ ” ಎಂದರು.
ಮೌಲ್ಯಮಾಪನ ಕುಲಸಚಿವರಾದ ಡಾ. ಎಂ. ಎಸ್. ಗೋಪಿನಾಥ್ ಅವರು ” ಪರಿಸರವನ್ನು ನಾವು ಉಳಿಸಿದರೆ ಪರಿಸರ ನಮ್ಮನ್ನುಳಿಸುತ್ತದೆ. ಈ ಅರಿವು ಮುಖ್ಯ. ಪ್ಲಾಸ್ಟಿಕ್ ವಿರೋಧಿ ನಿಲುವು ಜನ ಜಾಗೃತಿಯಾಗಿ ಮೂಡಿಬರುವ ಅವಶ್ಯಕತೆಯಿದೆ ” ಎಂದರು.
ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಡಾ. ಶುಭಾ ಮರವಂತೆ ಯವರು, ” ಕುವೆಂಪು ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯು ವಿವಿಧ ಕಾಲೇಜುಗಳಲ್ಲಿ ಪರಿಸರ ಪ್ರೀತಿ ಬೆಳೆಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಕಾಲೇಜುಗಳ ಆವರಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಅಭಿಯಾನವನ್ನು ಎನ್ ಎಸ್ ಮೂಲಕ ಕೈಗೊಳಲಾಗುವುದು. ಪ್ರತಿ ಎನ್ ಎಸ್ ಎಸ್ ವಿದ್ಯಾರ್ಥಿಯಲ್ಲೂ ಜಾಗೃತಿ ಮೂಡಿಸುವುದರ ಜೊತೆಗೆ
ಸಾಮೂಹಿಕ ಶ್ರಮದಾನದ ಮೂಲಕ ನಮ್ಮ ಸುತ್ತಲ ಪರಿಸರವನ್ನು ಸ್ವಚ್ಛಗೊಳಿಸುವುದಕ್ಕೆ ಆದ್ಯತೆ ನೀಡಲಾಗುವುದು. ‘ಇರುವೆ ಸಾಲು’ ಎಂಬ ವಿನೂತನ ಪರಿಕಲ್ಪನೆಯ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಚಟುವಟಿಕೆಗಳನ್ನು ಪರಿಚಯಿಸಲಾಗುವುದು” ಎಂದರು.
ಸಹ್ಯಾದ್ರಿ ವಾಣಿಜ್ಯ, ಕಲಾ ಹಾಗೂ ವಿಜ್ಞಾನ ಕಾಲೇಜು ಮತ್ತು ಶ್ರೀಮದ್ ರಂಭಾಪುರಿ ಕಾಲೇಜು ಶಂಕರಘಟ್ಟ ಇಲ್ಲಿಯ ಸುಮಾರು 120 ವಿದ್ಯಾರ್ಥಿಗಳು ಪ್ಲಾಸ್ಟಿಕ್ ಆಯುವ ಮೂಲಕ ವಿವಿ ಅವರಣವನ್ನು ಸ್ವಚ್ಛಗೊಳಿಸಿದರು. ಮಾನ್ಯ ಕುಲಪತಿಗಳು ಕುಲಸಚಿವರು ಮತ್ತು ವಿವಿಧ ಅಧಿಕಾರಿ ವರ್ಗವು ಒಂದು ಗಂಟೆಯ ಶ್ರಮದಾನದ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಕಾರ್ಯಕ್ರಮಾಧಿಕಾರಿಗಳಾದ ಡಾ. ಪ್ರಕಾಶ್ ಮರಗನಹಳ್ಳಿ, ಡಾ. ನಾಗಾರ್ಜುನ ಎಚ್. ಎಂ., ಡಾ. ಅರುಣ್, ಡಾ. ಕೆ. ಎನ್.ಮಂಜುನಾಥ್, ಶ್ರೀ ಪರಶುರಾಮ ಎಂ., ಡಾ. ಮುದುಕಪ್ಪ, ಶ್ರೀ ಗಿರೀಶ್, ಶ್ರೀ ದೇವೇಂದ್ರ, ವಿಶ್ವವಿದ್ಯಾಲಯದ ಎಸ್ಟೇಟ್ ವಿಭಾಗದ ಅಧಿಕಾರಿಗಳಾದ ಶ್ರೀ ಫಾಲಾಕ್ಷ ನಾಯ್ಕ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು