ಶಿವಮೊಗ್ಗ,ಜ.15:
ಹೊಂಗಿರಣ ರಂಗ ತಂಡ 25 ನೇ ವರ್ಷದ ಸಂಭ್ರಮದಲ್ಲಿದ್ದು, ಇದರ ಅಂಗವಾಗಿ ಜನವರಿ 30 ರಂದು ‘ಬೆಳ್ಳಿಹೆಜ್ಜೆ ರಂಗಪಯಣ’ ಉದ್ಘಾಟನೆ ಹಾಗೂ ‘ಕುಣಿ ಕುಣಿ ನವಿಲೆ’ ಮಕ್ಕಳ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಹೊಂಗಿರಣ ತಂಡದ ಮುಖ್ಯಸ್ಥ, ನಟ ಚಂದ್ರಶೇಖರ ಹಿರೇಗೋಣಿಗೆರೆ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಂಗಿರಣ ರಂಗ ತಂಡ ಕಳೆದ 25 ವರ್ಷಗಳ ಹಿಂದೆ ಆರಂಭವಾಗಿದ್ದು, ಈ 25 ವರ್ಷಗಳಲ್ಲಿ ಮಕ್ಕಳ ನಾಟಕ ಸೇರಿದಂತೆ ಸುಮಾರು 40 ಕ್ಕೂ ಹೆಚ್ಚು ನಾಟಕಗಳನ್ನು ನಿರ್ಮಿಸಿದೆ. ಮದಗದ ಕೆಂಚವ್ವ, ಒಗಟಿನ ರಾಣಿ ಎಂಬ ಅತ್ಯುತ್ತಮ ರೂಪಕ ರೂಪಿಸಿದೆ. ವಿಶ್ವ ಕನ್ನಡ ಸಮ್ಮೇಳನದಲ್ಲಿ ತಂಡ ಭಾಗವಹಿಸಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿದೆ. ಹೊಂಗಿರಣ ತಂಡದ ಸದಸ್ಯರು ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ನಟಿಸಿ ಹೆಸರು ಪಡೆದಿದ್ದಾರೆ. ಇದು ತಂಡದ ಹೆಗ್ಗಳಿಕೆಯಾಗಿದೆ ಎಂದರು.
ರಂಗಕ್ಷೇತ್ರವನ್ನು ಮುಂದಿನ ಪೀಳಿಗೆಗೆ ದಾಟಿಸುವ ಉದ್ದೇಶದಿಂದ ಮಕ್ಕಳನ್ನು ಮುಂದಿಟ್ಟುಕೊಂಡು ಮಕ್ಕಳಿಂದಲೇ ನಾಟಕ ಮಾಡಿಸುವ ಬಹುದೊಡ್ಡ ಯೋಜನೆಯನ್ನು ಹೊಂಗಿರಣ ರೂಪಿಸಲು ಸಜ್ಜಾಗಿದೆ. ಹಾಗಾಗಿಯೇ ಜನವರಿ 30 ರಂದು ಡಾ. ಹೆಚ್.ಎಸ್. ವೆಂಕಟೇಶ ಮೂರ್ತಿ ಅವರ ‘ಕುಣಿ ಕುಣಿ ನವಿಲೆ’ ನಾಟಕವನ್ನು ಮಕ್ಕಳೇ ಅಭಿನಯಿಸಲಿದ್ದಾರೆ. ಸಾಸ್ವೆಹಳ್ಳಿ ಸತೀಶ್ ಇದನ್ನು ನಿರ್ದೇಶಿಸಿದ್ದಾರೆ ಎಂದರು.
ಹೊಂಗಿರಣ ತಂಡವು ಈ ಇಡೀ ವರ್ಷ ಹೊಸ ಮೂರು ನಾಟಕಗಳು ಮತ್ತು ಸಂಸ್ಥೆಯ ಹಳೆಯ 6 ನಾಟಕ ಸೇರಿದಂತೆ 9 ನಾಟಕಗಳನ್ನು ಪ್ರದರ್ಶಿಸುವ ಗುರಿ ಹೊಂದಿದೆ. ಹೊಸ ನಿರ್ದೇಶಕರ ತಯಾರು ಮಾಡುವ ಯೋಚನೆ ತಂಡಕ್ಕಿದೆ. ಹಾಗೆಯೇ ಈ ವರ್ಷವೇ ರಾಷ್ಟ್ರಮಟ್ಟದ ರಂಗೋತ್ಸವ ಏರ್ಪಡಿಸುವ ಯೋಜನೆ ಕೂಡ ಇದೆ. ಮಕ್ಕಳ ರಂಗ ಭೂಮಿಯಿಂದಲೇ ಹೊಂಗಿರಣ ತಂಡವು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಮಕ್ಕಳ ನಾಟಕಗಳಿಗೆ ಹೆಚ್ಚು ಒತ್ತು ಕೊಡಲಾಗುವುದು ಎಂದು ತಿಳಿಸಿದರು.
ಹೊಂಗಿರಣ ತಂಡದ ಮುಖ್ಯಸ್ಥ ಡಾ. ಸಾಸ್ವೇಹಳ್ಳಿ ಸತೀಶ್ ಮಾತನಾಡಿ, ಹೊಂಗಿರಣ ತಂಡದಿಂದ ಮುಂದಿನ ದಿನಗಳಲ್ಲಿ ಮಕ್ಕಳಿಗಾಗಿ ಅಭಿನಯದ ಕಲೆ ಕಲಿಸಿಕೊಡಲಾಗುವುದು. ಕಾಲೇಜ್ ವಿದ್ಯಾರ್ಥಿಗಳು ಕೂಡ ತರಬೇತಿ ಪಡೆಯಬಹುದು. ಬಾಗವಹಿಸುವ ಮಕ್ಕಳು ತಮ್ಮ ಪೋಷಕರೊಂದಿಗೆ ಹೊಂಗಿರಣ ತಂಡವನ್ನು ಭೇಟಿ ಮಾಡಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹೊಂಗಿರಣ ತಂಡದ ಲೋಗೋವನ್ನು ನಾಟಕದಲ್ಲಿ ಅಭಿನಯಿಸುವ ಮಕ್ಕಳೇ ಬಿಡುಗಡೆ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಹೊಂಗಿರಣ ತಂಡದ ಜಿಲ್ಲಾಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ಪ್ರಮುಖರಾದ ಶಿವಕುಮಾರ ಮಾವಲಿ, ಸಂತೋಷ್, ಮಂಜುನಾಥ್, ಸುಬ್ರಹ್ಮಣ್ಯ ಇದ್ದರು.