ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ನೀತಿ -2020 ಅನ್ನು ಹಿಂಪಡೆದುಕೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ದೇಶದಲ್ಲಿ ಭಾರತೀಯ ಶಿಕ್ಷಣ ನೀತಿ ಜಾರಿಗೆ ಬರಬೇಕು. ಅದು ಮುಂದಿನ ಹತ್ತಾರು ವರ್ಷಗಳ ನಂತರ ದೇಶದಲ್ಲಿ ಕೌಶಲ್ಯಯುತ ಯುವ ಶಕ್ತಿ ಹೊರಗಡೆ ಬರಬೇಕು. ಬ್ರಿಟೀಷ್ ಶಿಕ್ಷಣ ನೀತಿಯಿಂದ ಮುಕ್ತರಾಗಿ ಭಾರತೀಯ ಶಿಕ್ಷಣ ನೀತಿ ಪಡೆಯಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ -2020 ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು,

ಅದನ್ನು ಅನುಷ್ಟಾನಗೊಳಿಸುವಲ್ಲಿ ಕರ್ನಾಟಕ ರಾಜ್ಯ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆಯುತ್ತೇವೆ ಎಂದು ಹೇಳಿದ ಕಾರಣಕ್ಕೋಸ್ಕರ ಒಂದು ಶಿಕ್ಷಣ ನೀತಿ ಬದಲಾವಣೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನೀತಿಯನ್ನು ಪ್ರತಿಭಟನಾಕಾರರು ಖಂಡಿಸಿದರು.

ಕೇವಲ ರಾಜಕೀಯ ಕಾರಣಕ್ಕೋಸ್ಕರ ಒಂದು ಉತ್ತಮ ಪ್ರಯೋಗಶೀಲ ಶಿಕ್ಷಣ ಪದ್ಧತಿಯನ್ನು ಬದಲಾವಣೆ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡಲು ಹೊರಟಿರುವ ಸರ್ಕಾರದ ನಡೆ ನಿಜಕ್ಕೂ ಮುಂದಿನ ದಿನಗಳಲ್ಲಿ ಬಹುದೊಡ್ಡ ಮಾರಕವಾಗಲಿದೆ. ಎನ್ಇಪಿ ಜಾರಿ ಮಾಡಿದ ಕಾರಣಕ್ಕೋಸ್ಕರ ನೂರಾರು ಕೋಟಿ ರೂ. ಅನುದಾನವನ್ನು ಪಿಎಂ ಉಷಾ ಯೋಜನೆಯಡಿಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಕೇಂದ್ರ ಸರ್ಕಾರ ನೀಡಿದೆ. ಒಂದು ವೇಳೆ ಎನ್ಇಪಿ ರದ್ದುಪಡಿಸಿದ್ದೇ ಆದಲ್ಲಿ ವಿಶ್ವವಿದ್ಯಾಲಯದ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ರಾಜ್ಯ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದು ಎನ್ಇಪಿಯಲ್ಲಿ ಆಗಿರುವ ಲೋಪದೋಷಗಳನ್ನು ಸರಿ ಮಾಡಿ ರಾಜ್ಯದಲ್ಲಿ ಸಮರ್ಪಕವಾದ ಎನ್ಇಪಿ ಮಾಡಿ ಈ ದೇಶದ ಶಿಕ್ಷಣ ಪದ್ಧತಿಯೊಂದಿಗೆ ಕರ್ನಾಟಕ ರಾಜ್ಯವನ್ನಾಗಿ ತೆಗೆದುಕೊಂಡು ಹೋಗುವ ಮಹತ್ತರ ಜವಾಬ್ದಾರಿಯನ್ನು ಮಾಡಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸಿದ್ದೇ ಆದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾದೀತು ಎಂದು ಮನವಿಯಲ್ಲಿ ಸರ್ಕಾರಕ್ಕೆ ಎಚ್ಚರಿಸಲಾಗಿದೆ.

ಪ್ರತಿಭಟನೆಯಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಹೆಚ್.ಕೆ. ಪ್ರವೀಣ್, ನಗರ ಕಾರ್ಯದರ್ಶಿ ರಘುನಂದನ್ ಹೆಗ್ಡೆ, ಲೋಹಿತ್, ಬಿ. ಅಭಿಷೇಕ್, ವರುಣ್, ಮನೋಜ್, ವೇದಶ್ರೀ ಇನ್ನಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!