ಸಾಗರ,ಜ.11:
ಇಲ್ಲಿನ ಸೊರಬ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ರಸ್ತೆ ಇಕ್ಕೆಲಗಳಲ್ಲಿ ಬರುವ ಖಾಸಗಿ ಸ್ವತ್ತುಗಳ ೧೯೩೫ರ ದಾಖಲೆ ಮತ್ತು ೨೦೦೧ ಹಾಗೂ ಈಗಿನ ದಾಖಲೆಯನ್ನು ಪರಿಶೀಲಿಸಿ. ಸರ್ಕಾರಿ ಜಾಗವಿದ್ದರೆ ಈ ಸಂಬಂಧ ಸ್ವತ್ತಿನ ಮಾಲೀಕರಿಗೆ ಮಾಹಿತಿ ನೀಡಿ. ಅವರು ಅಗಲೀಕರಣ ಪ್ರಕ್ರಿಯೆಗೆ ಅಪಸ್ವರ ಎತ್ತಿದರೆ ಕಾನೂನಿನಂತೆ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದ್ದಾರೆ.
ಇಲ್ಲಿನ ಉಪ ವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಭೂಸ್ವಾಧೀನ ಸಂಬಂಧ ನ್ಯಾಯಾಲಯಕ್ಕೆ ಹೋದರೆ ೧೯೩೫ರ ದಾಖಲೆ ಪ್ರಕಾರ ಪ್ರಕರಣ ನಮ್ಮ ಪರವಾಗಿ ಆಗುತ್ತದೆ. ಆದರೆ ಸ್ವಲ್ಪ ವಿಳಂಬವಾಗಬಹುದು. ಈ ಹಿನ್ನೆಲೆಯಲ್ಲಿ ಸ್ವತ್ತಿನ ಮಾಲೀಕರಿಗೆ ಮಾನವೀಯತೆ ಅನುಸಾರ ಅವರು ೧೯೩೫ರಲ್ಲಿ ಹೊಂದಿರುವ ದಾಖಲೆಯ ಪ್ರಕಾರ ಪರಿಹಾರ ನೀಡಿ. ಮುಂದಿನ ಒಂದು ವಾರದಲ್ಲಿ ಹಿಂದಿನ ಅಳತೆ ಎಷ್ಟಿತ್ತು. ಈಗ ಅವರು ಎಷ್ಟು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎನ್ನುವ ಕುರಿತು ನಿಖರ ದಾಖಲೆ ತಯಾರಿಸುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು.
ಶಾಸಕ ಎಚ್.ಹಾಲಪ್ಪ ಹರತಾಳು ಮಾತನಾಡಿ, ಸೊರಬ ರಸ್ತೆ ಅಗಲೀಕರಣ ತುರ್ತಾಗಿ ಆಗಲೇಬೇಕಾಗಿದೆ. ಮುಖ್ಯಮಂತ್ರಿಗಳು ೩೦ ಕೋಟಿ ರೂ. ಅನುದಾನ ಮೊದಲ ಹಂತದಲ್ಲಿ ಬಿಡುಗಡೆ ಮಾಡಲು ಸೂಚನೆ ನೀಡಿದ್ದಾರೆ. ಅಗಲೀಕರಣಕ್ಕೆ ಮುಂದಾದರೆ ಸ್ಥಳೀಯ ನಿವಾಸಿಗಳು ಒಂದಕ್ಕೆ ಮೂರು ಪಟ್ಟು, ನಾಲ್ಕು ಪಟ್ಟು ಪರಿಹಾರ ಕೊಡಿ ಎಂಬ ಬೇಡಿಕೆ ಇಡುತ್ತಿದ್ದಾರೆ. ಅಷ್ಟೊಂದು ಪರಿಹಾರ ಕೊಡಲು ಸರ್ಕಾರದಿಂದ ಸಾಧ್ಯವಿಲ್ಲ. ಈಗಾಗಲೆ ಅಲ್ಲಿ ನಗರಸಭೆ ಜಾಗ ಒತ್ತುವರಿ ದೊಡ್ಡಪ್ರಮಾಣದಲ್ಲಿ ಮಾಡಲಾಗಿದೆ ಎನ್ನುವ ದೂರುಗಳಿವೆ. ಇದನ್ನು ಪರಿಶೀಲನೆ ನಡೆಸಿ ಅಗಲೀಕರಣಕ್ಕೆ ಸಂಬಂಧಪಟ್ಟಂತಹ ಪ್ರಕ್ರಿಯೆ ಶೀಘ್ರವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಬಿ.ಎಚ್.ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಅಳತೆ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ಸಹ ಕೇಂದ್ರ ಸರ್ಕಾರದಿಂದ ೬೫ ಕೋಟಿ ರೂ. ಬಿಡುಗಡೆಯಾಗಿದೆ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪರಿಹಾರ ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಮಾರ್ಗದಲ್ಲಿ ಸರ್ಕಾರಿ ಕಟ್ಟಡಗಳು ಜಾಸ್ತಿ ಇದೆ. ಜ. ೨೨ರಂದು ಬೃಹತ್ ಧ್ವಜಸ್ತಂಭ ಉದ್ಘಾಟನೆ, ಮುಖ್ಯ ಬಸ್ ನಿಲ್ದಾಣ ಉದ್ಘಾಟನೆ ಮತ್ತು ತಾಲ್ಲೂಕು ಕಚೇರಿಯ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದ್ದು, ಸಚಿವರು, ಸಂಸದರು ಪಾಲ್ಗೊಳ್ಳಲಿದ್ದಾರೆ ಎಂದರು.
ನಗರದ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಮೀಪ ಸುಮಾರು ೧೭ ಎಕರೆ ಸರ್ಕಾರಿ ಭೂಮಿ ಸೊಪ್ಪಿನಬೆಟ್ಟ ಹೆಸರಿನಲ್ಲಿ ಖಾಸಗಿ ವ್ಯಕ್ತಿಯೊಬ್ಬರ ವಶದಲ್ಲಿದೆ. ಇದನ್ನು ನಗರಸಭೆ ವಶಕ್ಕೆ ಪಡೆದು ಅಭಿವೃದ್ದಿ ಕೆಲಸಗಳಿಗೆ ಬಳಸಿಕೊಳ್ಳುವಂತೆ ಸ್ಥಳೀಯ ವಾರ್ಡ್ ಸದಸ್ಯ ಬಿ.ಎಚ್.ಲಿಂಗರಾಜ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ನಡೆಸುವ ಭರವಸೆ ನೀಡಿದರು.
ಈಗಾಗಲೆ ಇಂದಿರಾಗಾಂಧಿ ಮಹಿಳಾ ಕಾಲೇಜು ಪಕ್ಕದಲ್ಲಿ ಸಂತೆ ಮೈದಾನ ನಿರ್ಮಾಣ ಮಾಡಲಾಗಿದೆ. ಅಲ್ಲಿ ಗುರುವಾರ ಸಂತೆ ನಡೆದರೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು ೩ಸಾವಿರ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಲಿದೆ. ಆದ್ದರಿಂದ ಸಂತೆಯನ್ನು ಭಾನುವಾರ ನಡೆಸಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ನಗರದ ಪ್ರಮುಖರ ಸಭೆ ಕರೆದು ಅಂತಿಮ ನಿರ್ಣಯ ನಗರಸಭೆ ಕೈಗೊಳ್ಳುವಂತೆ ಶಾಸಕ ಎಚ್.ಹಾಲಪ್ಪ ಹರತಾಳು ನಗರಸಭೆ ಅಧ್ಯಕ್ಷರಿಗೆ ಸೂಚನೆ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು ಸಂತೆ ಯಾವ ದಿನ ಮಾಡಬೇಕು ಎಂದು ಜಿಲ್ಲಾಡಳಿತ ಯಾವುದೇ ಸೂಚನೆ ನೀಡುವುದಿಲ್ಲ. ಸ್ಥಳೀಯವಾಗಿರುವ ಸಂಪನ್ಮೂಲ, ಇತರೆ ಊರುಗಳಲ್ಲಿ ನಡೆಯುವ ಸಂತೆ ಇನ್ನಿತರೆ ಸಂದರ್ಭವನ್ನು ಪರಿಗಣಿಸಿ ಸಂತೆ ನಡೆಸುವಂತೆ ಸೂಚನೆ ನೀಡಿದ ಅವರು, ಈ ಸಂದರ್ಭದಲ್ಲಿ ಅಲ್ಲಿನ ಕಾನೂನು ವ್ಯವಸ್ಥೆ ಕಾಪಾಡಲು ಪೊಲೀಸರ ಸಹಕಾರ ಪಡೆಯುವಂತೆ ತಿಳಿಸಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಪ್ರಸನ್ನ ವಿ., ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮೋಹನ್ ಕೆ.ಎಸ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ವಲಯ ಅರಣ್ಯಾಧಿಕಾರಿ ಪ್ರಮೋದ್ ಡಿ.ಆರ್., ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ದಿನೇಶ್, ಡಿ.ವೈ.ಎಸ್.ಪಿ. ವಿನಾಯಕ್ ಎನ್. ಶೆಟಿಗೇರ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!