ಶಿವಮೊಗ್ಗ, ಮೇ 4: ರಾಜ್ಯದಲ್ಲಿರುವ 1ಕೋಟಿ 15 ಲಕ್ಷ ಜಾನುವಾರುಗಳು ಮತ್ತು 1 ಕೋಟಿ 72ಲಕ್ಷ ಚಿಕ್ಕ ಜಾನುವಾರುಗಳಿಗೆ ಮೇವು ಒದಗಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷರಾದ ಸಿದ್ದಲಿಂಗಪ್ಪ ಆರೋಪಿಸಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, 196 ಬರಪೀಡಿತ ತಾಲ್ಲೂಕುಗಳು ಮತ್ತು 27 ಸಾಮಾನ್ಯ ಬರಪೀಡಿತ ತಾಲ್ಲೂಕುಗಳಲ್ಲಿ 1 ಜಾನುವಾರಿಗೆ ದಿನವೊಂದಕ್ಕೆ ಬೇಕಾದ ಕನಿಷ್ಟ 6 ಕೆ.ಜಿ.ಮೇವನ್ನು ಒದಗಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಿಂದೆ ಬಿಜೆಪಿ ರೈತ ಮೋರ್ಚಾದ ವತಿಯಿಂದ 3 ತಿಂಗಳ ಹಿಂದೆಯೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಜಾನುವಾರುಗಳೊಂದಿಗೆ ಪ್ರತಿಭಟನೆ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿ ಮನವಿ ಮಾಡಲಾಗಿತ್ತು.
ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಹೈನುದಾರ ರೈತನಿಗೆ ಹಾಲಿನ ಪ್ರೋತ್ಸಾಹ ಧನ ಜಿಲ್ಲೆಯಲ್ಲಿ 98 ಕೋಟಿ ರೂ. ಬಾಕಿ ಇದೆ. ರೈತ ಜಾನುವಾರುಗಳನ್ನು ಕಸಾಯಿಖಾನೆಗೆ ಮಾರುವ ಪರಿಸ್ಥಿತಿ ಉಂಟಾಗಿದೆ. ಜಾನುವಾರುಗಳಿಗೆ ನೀಡಬೇಕಾದ ಚಿಕಿತ್ಸಾ ಕಿಟ್ಗಳನ್ನು ನೀಡುತ್ತಿಲ್ಲ. ರೈತರಿಗೆ ಜಾಗೃತಿ ಸಭೆಗಳನ್ನು ಸರ್ಕಾರ ನಡೆಸಿಲ್ಲ. ಲಸಿಕೆಗಳನ್ನು ನೀಡಿಲ್ಲ. ಬರಪರಿಹಾರ ಒದಗಿಸಿಲ್ಲ. ಸಾಂಕ್ರಾಮಿಕ ರೋಗಗಳಿಗೆ ಔಷಧೋಪಚಾರ ಮಾಡದೇ ಅನೇಕ ಜಾನುವಾರುಗಳು ಮೃತಪಟ್ಟಿವೆ. ಗ್ಯಾರಂಟಿಯ ಬೆನ್ನೇರಿ ಅಭಿವೃದ್ಧಿ ಕಾರ್ಯಗಳನ್ನು ಮರೆತ ರಾಜ್ಯ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳಿದಿದೆ. ಚುನಾವಣೆ ಮುಗಿದ ಬಳಿಕ ರೈತ ಬೀದಿಗಿಳಿದು ದೊಡ್ಡ ಮಟ್ಟದ ಪ್ರತಿಭಟನೆ ಮಾಡುವ ಅನಿವಾರ್ಯತೆ ಇದೆ ಎಂದರು.
ಮೇವು ಬ್ಯಾಂಕ್ಗಳನ್ನು ಪ್ರಾರಂಭಿಸಿಲ್ಲ. ಆಹಾರ, ನೀರು, ವಸತಿ, ನೀಡಿಲ್ಲ. ಘೋಷಣೆಯಾದ ಅನುದಾನವನ್ನು ಒದಗಿಸಿಲ್ಲ. ಮುಗ್ಧಜಾನುವಾರುಗಳಿಗೆ ನೀಡಬೇಕಾದ 12.5ಲಕ್ಷ ಕಿರುಮೇವು ಕಿಟ್ಗಳನ್ನು ಒದಗಿಸದೇ ದ್ರೋಹಮಾಡಿದೆ. ರೈತರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕು ಎಂದರು.
ರೈತರಿಗೆ ಹಸಿರು ಮೇವನ್ನು ಉತ್ಪಾದನೆ ಮಾಡಲು ಮೇವು ಬೀಜಗಳನ್ನು ನೀಡುವ ಯೋಜನೆ ಅನುಷ್ಠಾನವಾಗಿಲ್ಲ. ಗೋಮಾಳ ಮತ್ತು ಖಾಲಿ ಜಾಗಗಳನ್ನು ಗುರುತಿಸಿಲ್ಲ. ರಾಜ್ಯ ವಿಫತ್ತು ಪ್ರತಿಕ್ರಿಯಾ ನಿಧಿ ಮತ್ತು ವಿವಿಧ ಇಲಾಖೆಗಳ ಸೂಚನೆಯನ್ನು ಸರ್ಕಾರ ಪಾಲಿಸಿಲ್ಲ. ಪ್ರತಿ 50 ಸಾವಿರ ಜಾನುವಾರುಗಳ ಸಂಖ್ಯೆಗೆ ಶಿಬಿರಗಳನ್ನು ಆರಂಭಿಸಬೇಕಿತ್ತು. ಆದರೆ ಸರ್ಕಾರ ಆರಂಭಿಸಿಲ್ಲ ಎಂದು ಅವರು ಆರೋಪಿಸಿದರು. ಇದು ಚುನಾವಣೆಗಾಗಿ ಮಾಡುವ ಆರೋಪವಲ್ಲ, ರೈತರ ಸಂಕಷ್ಟ ಅರಿತು, ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕುಮಾರ್ನಾಯ್ಕ್, ಗಣೇಶ್ ಬಿಳ್ಕಿ, ಶಾರದ ರಂಗನಾಥ್, ಸುರೇಶ್ ಸ್ವಾಮಿರಾವ್, ಸತೀಶ್ ಗೌಡ, ಹೊನ್ನಪ್ಪ, ನಾಗೇಶ್ ಇದ್ದರು.