ಶಿವಮೊಗ್ಗ: “ಸಚಿವರು, ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು ಕೆಲಸ ಮಾಡುತ್ತಾರೋ, ಇಲ್ಲವೋ ಎಂದು ನಾನು ಗಮನಿಸುತ್ತೇನೆ. ಇಲ್ಲದಿದ್ದರೆ ಅವರನ್ನು ಬದಲಿಸುತ್ತೇವೆ. ಶಿವಮೊಗ್ಗ ಗೆಲ್ಲುವುದು ಕಾಂಗ್ರೆಸ್‌ನ ಮೊದಲ ಆದ್ಯತೆ’ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಎಚ್ಚರಿಕೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ “ಗ್ಯಾರಂಟಿ ಹಬ್ಬ’ದಲ್ಲಿ ಮಾತನಾಡಿದ ಅವರು, “ನಮ್ಮ ಬೂತ್ ನಮ್ಮ ಜವಾಬ್ದಾರಿ. ನಾನು ಪ್ರತಿಯೊಬ್ಬರನ್ನೂ ಗಮನಿಸುತ್ತಿದ್ದೇನೆ. ಸಚಿವ ಮಧು ಬಂಗಾರಪ್ಪ ಅವರನ್ನೂ ಗಮನಿಸುತ್ತಿದ್ದೇನೆ. ಎಲ್ಲರೂ ಇಲ್ಲೇ ಇದ್ದು ಕೆಲಸ ಮಾಡಬೇಕು. ಇದು ಗಂಭೀರ ವಿಷಯ. ನಿಮ್ಮ ಬೂತ್ ಅನ್ನು ನೀವು ಗೆಲ್ಲಿಸಿಕೊಳ್ಳಲೇಬೇಕು’ ಎಂದಿದ್ದಾರೆ.
ಎಲ್ಲರಿಗೂ ಟಾಸ್ಕ್
“ನಮ್ಮ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸಬೇಕು. ಮಂತ್ರಿ ಕೆಲಸ ಮಾಡುತ್ತಾರೋ ಇಲ್ಲವೋ ನೋಡುತ್ತೇವೆ. ಇಲ್ಲದಿದ್ದರೆ ಮಂತ್ರಿಯನ್ನು ಬದಲಾವಣೆ ಮಾಡುತ್ತೇವೆ. ಎಂಎಲ್‌ಎ ಕೆಲಸ ಮಾಡುತ್ತಾರೋ ಇಲ್ಲವೋ ನೋಡುತ್ತೇವೆ. ಇಲ್ಲದಿದ್ದರೆ ಮುಂದಿನ ಬಾರಿ ಬೇರೆಯವರಿಗೆ ಟಿಕೆಟ್ ಕೊಡುತ್ತೇವೆ. ದಿಲ್ಲಿ ವಾರ್ ರೂಂ ಮೂಲಕ ಎಲ್ಲರನ್ನೂ ಗಮನಿಸುತ್ತಿದ್ದೇವೆ. ಇದು ಗಂಭೀರವಾದ ವಿಷಯ. ಇದನ್ನು ಸಿಲ್ಲಿಯಾಗಿ ತೆಗೆದುಕೊಳ್ಳಬೇಡಿ. ನೀವು ದುಡಿಯಲೇಬೇಕು, ಕಷ್ಟ ಪಡಲೇಬೇಕು. ನಮಗೆ ಬೂತ್ ಸಹ ಗೆಲ್ಲಬೇಕು. ಅಭ್ಯರ್ಥಿ ಕೂಡ ಗೆಲ್ಲಬೇಕು’ ಎಂದು ಟಾಸ್ಕ್ ನೀಡಿದರು.
ಚೊಂಬು ಬೇಕೋ,
ಅಭಿವೃದ್ಧಿ ಬೇಕೋ?
ಚಿತ್ರದುರ್ಗ/ಶಿವಮೊಗ್ಗ: ಬಿಜೆಪಿ ಸರಕಾರದ ವಿರುದ್ಧ ಮುಗಿ ಬಿದ್ದಿರುವ ಕಾಂಗ್ರೆಸ್, ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡದೆ ಚೊಂಬು ನೀಡಿರುವ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಕರೆ ನೀಡಿದ್ದಾರೆ.
ಚಿತ್ರದುರ್ಗ ಹಾಗೂ ಶಿವಮೊಗ್ಗದಲ್ಲಿ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಕರ್ನಾಟಕಕ್ಕೆ ನೀಡಿರುವ ಕೊಡುಗೆ ಚೊಂಬು ಮಾತ್ರ. ಅಭಿವೃದ್ಧಿ ಬೇಕೋ ಚೊಂಬು ಬೇಕೊ ಎನ್ನುವುದನ್ನು ಜನತೆ ನಿರ್ಧರಿಸಬೇಕಿದೆ ಎಂದರು.