ಶಿವಮೊಗ್ಗ, ಏ.೧೩: ತಂದೆಯನ್ನೇ ವನವಾಸಕ್ಕೆ ಕಳಿಸಿದ ರಾಮಭಕ್ತರು ನಮ್ಮಲ್ಲಿದ್ದಾರೆ ಎಂದು ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಅವರ ಹೆಸರು ಹೇಳದೆ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಶ್ರೀರಾಮ ಎಲ್ಲರ ದೇವರು ಆತ ಎಲ್ಲರನ್ನು ಕಾಪಾಡುತ್ತಾನೆ. ರಾಮನ ಭಕ್ತರೆಂದು ಹೇಳುಕೊಳ್ಳುವ ಕೆಲವರು ಶ್ರೀರಾಮನನ್ನೇ ದೂರವಿಡುತ್ತಾರೆ. ಆ ಶ್ರೀರಾಮನ ತಂದೆ ದಶರಥನ ಮಾತಿಗಾಗಿ ವನವಾಸ ಮಾಡಿದರು. ಆದರೆ ಈ ರಾಮಭಕ್ತರು ದಶರಥನನ್ನೇ(ಯಡಿಯೂರಪ್ಪ)ವನವಾಸಕ್ಕೆ ಕಳಿಸಿದ್ದಾರೆ. ಇದು ವಿಪರ್ಯಾಸ ಎಂದರು.
ಶ್ರೀರಾಮನ ಭಕ್ತರು ಎಲ್ಲ ಹಿಂದುಗಳು ಆಗಿದ್ದಾರೆ. ಆತನನ್ನು ಬೀದಿಗೆ ತಂದು ಚುನಾವಣೆಗೆ ಬಳಸಿಕೊಳ್ಳುವ ಅಗತ್ಯವೇ ಇಲ್ಲ. ಬಿಜೆಪಿಯವರು ಶ್ರೀರಾಮನಿಗಾಗಿ ಆಯೋಧ್ಯೆಯಲ್ಲಿ ಮಂದಿರ ಕಟ್ಟಿದ್ದೇವೆ ಎನ್ನುತ್ತಾರೆ. ಆದರೆ ಆ ಮಂದಿರ ಕಟ್ಟಲು ಈ ದೇಶದ ಕೋಟ್ಯಾಂತರ ಜನರು ಹಣ ಕೊಟ್ಟಿದ್ದಾರೆ. ಅದು ಬಿಜೆಪಿಯವರು ಕಟ್ಟಿದ್ದಲ್ಲ, ಭಕ್ತರು ಕೊಟ್ಟ ಹಣ ಎಂದರು.
ಆಯೋಧ್ಯೆಯ ಶ್ರೀರಾಮಮಂದಿರಕ್ಕಾಗಿ ಇಡೀ ದೇಶದ ಜನ ಇಟ್ಟಿಗೆ ಕಬ್ಬಿಣ ಕೊಟ್ಟಿದ್ದರು. ಈಗ ಆ ದೇವಾಲಯ ಕಾಂಕ್ರಿಟ್ ಕಲ್ಲಿನಿಂದ ಆಗಿದೆ. ಇಡೀ ದೇಶದಿಂದ ತೆಗೆದುಕೊಂಡು ಹೋಗಿದ್ದ ಇಟ್ಟಿಗೆ, ಕಬ್ಬಿಣ ಎಲ್ಲಿ ಹೋಯಿತು ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ. ರಾಜಕೀಯ ದ್ವೇಷವನ್ನೇ ಸಾಧಿಸುತ್ತಿದೆ. ಬರಗಾಲದ ಇಂತಹ ಸಂದರ್ಭದಲ್ಲಿ ಬಿ.ವೈ.ರಾಘವೇಂದ್ರ ಸೇರಿದಂತೆ ಯಾವ ಸಂಸದರು ಕೇಂದ್ರದಿಂದ ಅನುದಾನವನ್ನು ತರುವ ಮಾತನಾಡಲಿಲ್ಲ. ಒಂದು ರೀತಿಯಲ್ಲಿ ರಾಜ್ಯದ ಮೇಲೆ ಕೇಂದ್ರದ ದಬ್ಬಾಳಿಕೆ ನಡೆಸುತ್ತಿದೆ ಎಂದರು.
ಕಷ್ಟ ಕಾಲದಲ್ಲಿಯೂ ನೆರವಾಗದ ಕೇಂದ್ರದ ನಾಯಕರಾದ ಮೋದಿ, ಅಮಿತ್ಷಾ ಮುಂತಾದವರು ರಾಜ್ಯಕ್ಕೆ ಯಾವ ಮುಖ ಇಟ್ಟುಕೊಂಡು ಮತ ಕೇಳಲು ಬರುತ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯವೊಂದು ನ್ಯಾಯಾಲಯದ ಮೆಟ್ಟಿಲೆರಿರುವುದು ಇದೇ ಪ್ರಥಮವಾಗಿದೆ. ಇದೊಂದು ಪ್ರಜಾಪ್ರಭುತ್ವ ವಿರೋಧಿ ಎಂದರು.
ರಾಘವೇಂದ್ರ ಅವರು ಅಭಿವೃದ್ಧಿಯ ಹರಿಕಾರ ಎಂಬುವುದು ತಮ್ಮನ್ನು ತಾವು ಘೋಷಣೆ ಮಾಡಿಕೊಂಡಿದ್ದಾರೆ. ತಮ್ಮ ಅವಧಿಯಲ್ಲಿ ರೈತರಿಗಾಗಿ ಏನು ಅನುಕೂಲ ಮಾಡಿಕೊಟ್ಟಿದ್ದಾರೆ. ಎಷ್ಟು ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ. ಮುಚ್ಚಿದ ಎಷ್ಟು ಕಾರ್ಖಾನೆಗಳನ್ನು ಮರು ಸ್ಥಾಪಿಸಿದ್ದಾರೆ. ಉದ್ಯೋಗ ಸೃಷ್ಟಿಗಾಗಿ ಏನು ಮಾಡಿದ್ದಾರೆ. ಅವರು ಜಿಲ್ಲೆಯಲ್ಲಿ ಉದ್ಯೋಗವನ್ನು ಸೃಷ್ಟಿ ಮಾಡಲಿಲ್ಲ. ಉದ್ವೇಗವನ್ನು ಸೃಷ್ಟಿ ಮಾಡಿದರು ಅಷ್ಟೇ ಎಂದರು.
ಈಶ್ವರಪ್ಪನವರು ಗೀತಾ ಶಿವರಾಜ್ಕುಮಾರ್ ಅವರನ್ನು ಡಮ್ಮಿ ಎಂದು ಕರೆದಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪಾಪ ಈಶ್ವರಪ್ಪನವರಿಗೆ ಯಾರು ಡಮ್ಮಿ, ಯಾರು ಕಮ್ಮಿ ಎಂಬುವುದೇ ಗೊತ್ತಿಲ್ಲ, ಈಗಾಗಲೇ ಈಶ್ವರಪ್ಪನವರ ಬಗ್ಗೆ ಬಿ.ವೈ.ರಾಘವೇಂದ್ರ ಅವರೇ, ಹಾವು ಚೇಳು ಹೊರಗೆ ಬರುತ್ತವೆ ನೋಡಿ ಎಂದಿದ್ದಾರೆ. ಇವರು ಚೇಳಾಗಿ ಕುಟುಕುತ್ತಾರೋ ಎಂದು ಕಾದುನೋಡಬೇಕಾಗಿದೆ.
ತನ್ನ ಮಗನಿಗಾಗಿ ಅಷ್ಟೇಲ್ಲ ಮಾಡುತ್ತಿರುವ ಇವರು, ಈಗ ಅವರ ಮಗ ಎಲ್ಲಿದ್ದಾನೆ. ಆ ಕಾಂಗರೋ ಮರಿ ಎಲ್ಲಿದೆ ಎಂದು ಹೇಳಿದರಲ್ಲದೆ, ಕೋತಿಯ ಕತೆಯನ್ನು ಹೇಳಿ ಈಶ್ವರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ, ಅವರು ನಾಮಪತ್ರ ವಾಪಾಸು ತೆಗೆದುಕೊಳ್ಳುವವರಿಗೂ ಚುನಾವಣೆಗೆ ನಿಲ್ಲುತ್ತಾರೆ ಎಂಬ ನಂಬಿಕೆ ನನಗಿಲ್ಲ. ಒಂದು ವಿಧಾನಪರಿಷತ್ತಿನ ಸದಸ್ಯತ್ವಕ್ಕಾಗಿ ಇಷ್ಟೇಲ್ಲ ರಂಪರಾಮಾಯಣ ಮಾಡಬೇಕಾಗಿತ್ತೇ ಎಂದ ಅವರು, ಅದೇನೇ ಇದ್ದರು ಗೀತಾ ಶಿವರಾಜ್ಕುಮಾರ್ ಅವರ ಗೆಲುವು ಖಚಿತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ , ಧೀರರಾಜ್, ರವಿಕುಮಾರ್, ಸೈಯ್ಯದ್ ಅಡ್ಡು, ಮುಖ್ತಿಯಾರ್ ಅಹ್ಮದ್, ಹಿರಣ್ಣಯ್ಯ, ಜಿ.ಪದ್ಮನಾಬ್, ಶಿ.ಜು.ಪಾಶ, ಆಯನೂರು ಸಂತೋಷ್ ಮುಂತಾದವರು ಇದ್ದರು.