ಶಿವಮೊಗ್ಗ: ಎಐಸಿಸಿ ಗ್ಯಾರಂಟಿಗಳ ಜೊತೆಗೆ ರಾಜ್ಯ ಸರ್ಕಾರದ ಗ್ಯಾರಂಟಿಗಳು ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಲು ಕಾರಣವಾಗುತ್ತವೆ. ಜೊತೆಗೆ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಗೆದ್ದೇ ಗೆಲ್ಲುತ್ತಾರೆ ಎಂದು ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೀತಾ ಶಿವರಾಜ್ ಕುಮಾರ್ ಅವರು ಈಗಾಗಲೇ ಎರಡನೇ ಸುತ್ತಿನ ಪ್ರಚಾರ ಆರಂಭಿಸಿದ್ದಾರೆ. ಪ್ರಚಾರ ಕಾರ್ಯ ಬಿರುಸಾಗಿ ಸಾಗಿದೆ. ಇದರ ಜೊತೆಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ೨೫ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ. ಈ ಗ್ಯಾರಂಟಿಗಳ ಕರಪತ್ರಗಳನ್ನು ಮನೆ ಮನೆಗೆ ತಲುಪಿಸಲಾಗುವುದು ಎಂದರು.
ಈಗಾಗಲೇ ರಾಜ್ಯ ಸರ್ಕಾರದ ಗ್ಯಾರಂಟಿಗಳು ಈಡೇರಿವೆ. ಜಿಲ್ಲೆಯಲ್ಲಿ ಸುಮಾರು ೪.೬೦ ಲಕ್ಷ ಮನೆಗಳಿಗೆ ಯೋಜನೆ ತಲುಪಿವೆ. ಈ ಗ್ಯಾರಂಟಿಗಳು ಹಾಗೂ ಕೇಂದ್ರದ ನಾಯಕರು ಪ್ರಣಾಳಿಕೆಯಲ್ಲಿ ತಿಳಿಸಿರುವ ೨೫ ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸಲಾಗುವುದು. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಹಿ ಹಾಕಿದ ಗ್ಯಾರಂಟಿ ಪತ್ರಗಳನ್ನು ವಿತರಿಸಲಾಗುವುದು ಎಂದರು.
೧೮೯೫ ಬೂತ್ ಗಳ ಮೂಲಕ ತಲುಪಿಸಿ ಮತಯಾಚನೆ ಮಾಡಲಾಗುವುದು. ೨೫ ಗ್ಯಾರಂಟಿಗಳನ್ನು ಕೇಂದ್ರದ ಹೈ ಕಮಾಂಡ್ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಮಹಿಳೆ, ಉನ್ನತ ಶಿಕ್ಷಣ, ಆರೋಗ್ಯ ವಿಮೆ, ರೈತರಿಗೆ ಕಾನೂನು ಖಾತ್ರಿ ಬೆಂಬಲ ಬೆಲೆ, ಜಿಎಸ್ ಟಿ ಎಲ್ಲದಕ್ಕೂ ಹಾಕಲಾಗಿದ್ದು, ಅದನ್ನು ಸಂಪೂರ್ಣ ಬದಲಾವಣೆ, ಆದಾಯ ತೆರಿಗೆ ಭರವಸೆ, ಅಂಗನವಾಡಿ, ಪಿಂಚಣಿ ದಾರರಿಗೆ ಹೆಚ್ಚಳದ ಹಣ, ದೌರ್ಜನ್ಯಗಳ ವಿರುದ್ಧ ಆಯೋಗ ರಚನೆ, ಭೋಗಸ್ ಕಂಪನಿಗಳ ವಿರುದ್ಧ ತನಿಖೆ, ಪಿಎಂ ಕೇರ್ ಲೆಕ್ಕಪತ್ರ ತನಿಖೆ, ನೋಟ್ ಅಮಾನ್ಯೀಕರಣ, ಪೆಗಾಸಿಸ್ ಸೇರಿದಂತೆ ಹಲವು ಹಗರಣಗಳ ವಿರುದ್ಧ ತನಿಖೆ, ನಗರ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ಭರವಸೆ, ಆರೋಗ್ಯ, ಶಿಕ್ಷಣ, ರೈತರು, ಮಹಿಳೆಯರು, ಕಾರ್ಮಿಕರು, ಇವರೆಲ್ಲರ ಕಲ್ಯಾಣಕ್ಕಾಗಿ ಆಯೋಗಗಳನ್ನು ರಚಿಸಲಾಗುವುದು ಎಂದರು.
ರಾಜ್ಯದ ಗ್ಯಾರಂಟಿಗಳಿಂದ ದೇವಸ್ಥಾನ ಸೇರಿದಂತೆ ಎಲ್ಲರಿಗೂ ಅನುಕೂಲ. ಮೋದಿ ಅಲೆ ಎಲ್ಲಿಯೂ ಇಲ್ಲ. ಬಿಜೆಪಿ ಹೇಳುವುದೆಲ್ಲವೂ ಸುಳ್ಳು. ಜನರ ಮೇಲೆ ಲಕ್ಷಾಂತರ ರೂ. ಸಾಲ ಹೊರಿಸಲಾಗಿದೆ. ಬಂಗಾರಪ್ಪರ ಕೆಲಸಗಳು, ಮಧು ಬಂಗಾರಪ್ಪರ ಪ್ರಯತ್ನಗಳ ಮೂಲಕ ಗೀತಾ ಶಿವರಾಜ್ ಕುಮಾರ್ ಗೆಲ್ಲಿಸುವುದು ಖಚಿತ ಎಂದರು.
ಬರಗಾಲದ ಹಣ ಕೇಳುವ ಯೋಗ್ಯತೆ ಈಗಿನ ಸಂಸದರಿಗಿಲ್ಲ. ರಾಘವೇಂದ್ರ ಎರಡು ಲಕ್ಷ ಲೀಡ್ ಅಂತಿದಾರೆ, ಈಶ್ವರಪ್ಪ ಮೂರು ಲಕ್ಷ ಲೀಡ್ ಅಂತಾರೆ. ಆದರೆ, ಗೀತಾ ಶಿವರಾಜ್ ಕುಮಾರ್ ಅತ್ಯಂತ ಅಧಿಕ ಲೀಡ್ ನಿಂದ ಗೆಲ್ಲೋದು ಖಚಿತ ಎಂದರು
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಪ್ರಮುಖರಾದ ಚಂದ್ರಭೂಪಾಲ್, ಕಲೀಂ ಪಾಶಾ, ರಮೇಶ್ ಶೆಟ್ಟಿ ಶಂಕರಘಟ್ಟ, ಎಸ್.ಟಿ. ಚಂದ್ರಶೇಖರ್, ಗಿರೀಶ್ ರಾವ್, ಇಕ್ಕೇರಿ ರಮೇಶ್, ಶಾಂತವೀರ ನಾಯ್ಕ, ಮಧು, ಚಂದನ್, ಶಿ.ಜು. ಪಾಶಾ, ಜಿ. ಪದ್ಮನಾಭ್ ಮತ್ತಿತರರು ಇದ್ದರು.
:
ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿ ಮಾಡಿದ ಕೆಲಸ ತೃಪ್ತಿ ತಂದಿದೆ ಎಂದು ಸುಂದರೇಶ್ ತಿಳಿಸಿದರು.
ಐದೂವರೆ ವರ್ಷಗಳ ಕಾಲ ಜಿಲ್ಲಾಧ್ಯಕ್ಷನಾಗಿದ್ದೆ. ಒಬ್ಬರೇ ಶಾಸಕರಿದ್ದಾಗ ಅಧ್ಯಕ್ಷ ಸ್ಥಾನಕ್ಕೆ ಬಂದಿದ್ದು, ಪಕ್ಷವನ್ನು ಬಲಪಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕರೋನಾದಂತಹ ಕೆಟ್ಟ ಕಾಲದಲ್ಲೂ, ಪ್ರವಾಹದ ಸಂದರ್ಭದಲ್ಲೂ ಸ್ವಂತ ಹಣದಿಂದ ಕೆಲಸ ಮಾಡಿದ್ದೇನೆ ಎಂದರು.
ಪ್ರಮುಖವಾಗಿ ಬಿಜೆಪಿಯ ಹಗರಣ ಬಯಲಿಗೆಳೆಯಲು ನೂರಾರು ಪ್ರತಿಭಟನೆಗಳನ್ನು ಮಾಡಿದ್ದೇವೆ. ಹರ್ಷ ಪ್ರಕರಣ, ಶೇ. ೪೦ರ ಕಮಿಷನ್ ನಂತಹ ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. ನನಗೆ ಸಹಕಾರ ನೀಡಿದವರಿಗೆ ಅಭಿನಂದನೆ ಎಂದರು