ಶಿವಮೊಗ್ಗ,ಏ.೦೨: ಗೀತಾ ಶಿವರಾಜ್ಕುಮಾರ್ರವರ ಗೆಲುವು ಹತ್ತಿರವಾಗುತ್ತಿದೆ. ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಒಂದು ಸುತ್ತು ಗೀತಾ ಶಿವರಾಜ್ಕುಮಾರ್ ಹಾಗೂ ಶಿವರಾಜ್ಕುಮಾರ್ ಮತ್ತು ಕಾಂಗ್ರೆಸ್ ನಾಯಕರುಗಳ ನೇತೃತ್ವದಲ್ಲಿ ಪ್ರಚಾರ ಮಾಡಲಾಗಿದೆ. ಹೋದ ಕಡೆಯಲೆಲ್ಲಾ ಒಳ್ಳೆಯ ವಾತಾವರಣವಿದೆ. ಬೈಂದೂರು ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಕಾಂಗ್ರೆಸ್ ಬಗ್ಗೆ ಅತಿಯಾದ ಒಲವಿದೆ. ಈ ಒಲವು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತದೆ ಎಂದರು.
ಹಾಗೆಯೇ ಉಡುಪಿ ಚಿಕ್ಕಮಗಳೂರು ಭಾಗದಲ್ಲಿಯೂ ಜೈಪ್ರಕಾಶ್ ಹೆಗ್ಡೆಯವರೊಂದಿಗೆ ಪ್ರವಾಸ ಮಾಡಲಾಗಿದೆ. ಶೃಂಗೇರಿ, ಕೊಪ್ಪ, ಅಜ್ಜಂಪುರ ಸೇರಿದಂತೆ ಚುನಾವಣಾ ಪ್ರಚಾರ ಮಾಡುತ್ತಿದ್ದೇವೆ. ಈ ಭಾಗದ ಅಭ್ಯರ್ಥಿ ಜಯಪ್ರಕಾಶ್ ಹೆಗಡೆ ಕೂಡ ಗೆಲಲ್ಲಿದ್ದಾರೆ. ಇದರ ಜೊತೆ ಜೊತೆಯಲ್ಲಿಯೇ ನೈರುತ್ಯ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತ್ತೆಯೂ ಆ ಭಾಗದ ಪದವೀದರರ ಮತ್ತು ಶಿಕ್ಷಕರನ್ನು ಭೇಟಿಯಾಗಿ ಮತಯಾಚನೆ ಮಾಡಿದ್ದೇವೆ ಎಂದರು.
ಗೀತಾ ಶಿವರಾಜ್ಕುಮಾರ್ ಕಾಣಿಸಿಕೊಳ್ಳುತ್ತಿಲ್ಲ ಎಂದು ಆರೋಪವಿದೆಯಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಈ ಆರೋಪವನ್ನು ಮಾಡುತ್ತಿರುವವರು ಬಿಜೆಪಿಗರು, ಅವರಿಗೆ ಕೆ.ಎಸ್.ಈಶ್ವರಪ್ಪನವರು ಬೆನ್ನು ಹತ್ತಿದ್ದಾರೆ. ತಮ್ಮನ್ನು ತಾವು ಕಾಯ್ದುಕೊಳ್ಳಲು ಅವರು ಕ್ರಿಯಾಶೀಲರಾಗಿರಬೇಕಾಗಿದೆ. ಹಾಗಾಗಿಯೇ ಹತಶರಾಗಿ ಅಭ್ಯರ್ಥಿ ರಾಘವೇಂದ್ರ ಓಡಾಡುತ್ತಿದ್ದರೆ ಅಷ್ಟೇ ಆದರೆ, ನಮ್ಮ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಒಂದು ವ್ಯವಸ್ಥಿತವಾಗಿಯೇ ಚುನಾವಣಾ ಪ್ರಚಾರದಲ್ಲಿದ್ದಾರೆ. ನಿಧಾನವಾಗಿಯಾದರೂ ಪ್ರಚಾರದ ಬಿರುಸು ಹೆಚ್ಚಿದೆ. ಜೆಡಿಎಸ್ ಮತ್ತು ಬಿಜೆಪಿಯ ಹೊಂದಾಣಿಕೆ ಕಾಂಗ್ರೆಸ್ಗೆ ಲಾಭವಾಗುತ್ತದೆ ಅಷ್ಟೇ, ಅದರಿಂದ ಏನೂ ಕಾಂಗ್ರೆಸ್ಗೆ ನಷ್ಟವಾಗುವುದಿಲ್ಲ ಎಂದರು.
ನಿಮ್ಮ ವಿರುದ್ಧ ಧನಂಜಯ ಸರ್ಜಿ ಹಾಗೂ ರುದ್ರೇಗೌಡರು ಟೀಕೆ ಮಾಡಿದ್ದಾರೆ. ಕುಹಕ ಮಾತುಗಳನ್ನು ಆಯನೂರು ಮಂಜುನಾಥ್ ಆಡಿದ್ದಾರೆ ಎಂದಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರುದ್ರೇಗೌಡರ ಬಗ್ಗೆ ನನಗೆ ಅಭಿಮಾನವಿದೆ. ಧನಂಜಯ ಸರ್ಜಿ ಇನ್ನು ಎಳಸು ಆತ ರಾಜಕೀಯ ಎಲ್ಕೆಜಿ ಶಾಲೆಗೂ ಇನ್ನೂ ಬಂದಿಲ್ಲ. ಆತನಿಗೆ ರಾಜಕಾರಣ ಏನೆಂದರೆ ಎಂದು ಗೊತ್ತೇ ಇಲ್ಲ ಎಂದರು.
ರುದ್ರೇಗೌಡರ ಆಗಲೀ, ಧನಂಜಯ ಸರ್ಜಿ ಆಗಲಿ ನಾನು ಏನು ಕುಹಕ ಮಾತನಾಡಿದ್ದೇನೆ ಎಂದು ಮೊದಲು ಅರ್ಥ ಮಾಡಿಕೊಳ್ಳಲಿ, ನಾನು ಬಿ.ಎಸ್. ಯಡಿಯೂರಪ್ಪನವರ ಪರವಾಗಿ ಮಾತನಾಡಿದ್ದೇನೆ. ಅದು ಕುಹಕ ಹೇಗೆ ಆಗುತ್ತದೆ. ಬಿಜೆಪಿಯಲ್ಲಿ ಇದ್ದು, ಕೆಜೆಪಿ ಪರ ರಾಘವೇಂದ್ರ ಮಾತನಾಡಿದ್ದಾರೆ ಎಂಬುವುದು ಕುಹಕವೇ ? ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಪ್ಪನನ್ನೇ ಜೈಲಿಗಟ್ಟಿದ್ದು ಕುಹಕವೇ ಹೇಳಬೇಕಲ್ಲ ? ಅಪ್ಪನ ಮೇಲೆ ಆಪಾಧನೆಯ ರೂಪದ ಹೇಳಿಕೆಗಳನ್ನು ಅವರದೇ ಪಕ್ಷದವರು ಮಾತನಾಡಿದಾಗ, ಸುಮ್ಮನಿದ್ದರು ಎಂದು ಹೇಳಿದ್ದು, ಕುಹಕವೇ ಎಂದು ಪ್ರಶ್ನೆ ಮಾಡಿದರು
.
ಧನಂಜಯ ಸರ್ಜಿ ವಿರುದ್ಧ ಕಿಡಿಕಾರಿದ ಆಯನೂರು ಮಂಜುನಾಥ್ ಈ ಸರ್ಜಿಯವರಿಗೆ ರಾಜಕಾರಣವೇ ಗೊತ್ತಿಲ್ಲ, ಬಿಜೆಪಿಗೆ ಬರುವ ಮೊದಲು ಎಲ್ಲೆಲ್ಲಿ ಬಾಗಿಲು ತಟ್ಟಿದ್ದರು ಎಂಬುವುದನ್ನು ಅವರೇ ಪ್ರಶ್ನೆ ಮಾಡಿಕೊಳ್ಳಲಿ, ಆಯನೂರು ಮಂಜುನಾಥ್ ಬಗ್ಗೆ ಟೀಕೆ ಮಾಡಲು ಅವರು ಇನ್ನೂ ತುಂಬ ರಾಗಿ ಬೀಸಬೇಕು ಎಂದರು.
ಬಿಜೆಪಿಯಿಂದ ನಾನು ಫಲಾನುಭವಿ ಆಗಲು ನನ್ನದೇ ಶ್ರಮವಿದೆ. ಎಲ್ಲಾ ಚುನಾವಣೆಗಳನ್ನು ನಾನು ಎದುರಿಸಿದ್ದೇನೆ. ಅನೇಕ ಚುನಾವಣೆಗಳಲ್ಲಿ ನನ್ನ ಪರ ಪ್ರಚಾರ ಮಾಡಲು ಯಾರು ಬಂದಿರಲಿಲ್ಲ. ಆಯಾ ಪಕ್ಷದಲ್ಲಿ ಇದ್ದಾಗ ಸಮರ್ಥವಾಗಿ ಕೆಲಸ ಮಾಡಿದ್ದೇನೆ. ಮನಸ್ಸೊಂದನ್ನು ಇಟ್ಟುಕೊಂಡು ಇನ್ನೊಂದು ಪಕ್ಷದ ಜೊತೆ ನಾನು ಕೆಲಸ ಮಾಡಿಲ್ಲ. ನಾನು ರಾಜಕೀಯ ವ್ಯಭಿಚಾರಿಯೂ ಅಲ್ಲ, ಹಾಗೇ ವ್ಯಭಿಚಾರ ಮಾಡಿದ್ದರೆ ಅದು ರಾಘವೇಂದ್ರ ಎಂದು ಕುಟುಕಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ , ಪ್ರಮುಖರಾದ ಶಿ.ಜು. ಪಾಶ, ಜಿ.ಪದ್ಮಾನಾಭ್, ಎಸ್.ಪಿ.ಪಾಟೀಲ್, ಕೃಷ್ಣ, ದಿವಾಕರ, ಆಯನೂರು ಸಂತೋಷ್, ರುದ್ರೇಶ್, ಜಗದೀಶ್ ಗೌಡ, ಆಯನೂರು ಸಂತೋಷ, ಹಿರಣ್ಣಯ್ಯ ಮುಂತಾದವರು ಇದ್ದರು.