ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ವರಿಷ್ಠರು ಕರೆದಾಗ ಅವರಿಗೆ ಗೌರವ ಕೊಡುವುದು ನನ್ನ ಕರ್ತವ್ಯ. ಹೀಗಾಗಿ ನಾನು ದೆಹಲಿಗೆ ಹೋಗುತ್ತಿದ್ದೇನೆ ಹೊರೆತು ಸ್ಪರ್ಧೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಮಾಜಿ ಸಚಿವ, ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶದ ಗೃಹಮುಂತ್ರಿ ಅಮಿತ್ ಶಾ ಅವರು ಬೆಳಗ್ಗೆ ದೂರವಾಣಿ ಮೂಲಕ ಕರೆ ಮಾಡಿ, ನೀವು ಹಿರಿಯ ನಾಯಕರಿದ್ದೀರಿ, ನೀವು ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿರುವುದು ಆಶ್ಚರ್ಯವಾಗಿದೆ. ಸ್ಪರ್ಧೆ ಏಕೆ ಎಂದು ಕೇಳಿದರು. ಮೂರು ತಿಂಗಳ ಕೆಳಗೆ ನಿಮ್ಮೊಂದಿಗೆ ಮಾತನಾಡಿದ್ದೆ. ಒಂದು ಕುಟುಂಬದಿಂದ ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ತಿಳಿಸಿದ್ದೆ. ಆದರೂ ಯಾವುದೇ ಬದಲಾವಣೆ ಮಾಡಿಲ್ಲ. ಈಗ ನೀವು ಕರೆಯುತ್ತಿದ್ದೀರಿ, ನಾನು ದೆಹಲಿಗೆ ಬರುತ್ತೇನೆ. ಆದರೆ, ಸ್ಪರ್ಧೆಯಿಂದ ಯಾವುದೇ ಕಾರಣಕ್ಕೂ ನಾನು ಹಿಂದೆ ಸರಿಯಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದರು.
ರಾಜ್ಯದಲ್ಲಿ ಇಡೀ ಬಿಜೆಪಿ ಪಕ್ಷ ಒಂದು ಕುಟುಂಬ ಕೈಯಲ್ಲಿದೆ. ಕಾಂಗ್ರೆಸ್ನ ಕುಟುಂಬ ರಾಜಕಾರಣ ಸಂಸ್ಕೃತಿ ಈಗ ಬಿಜೆಪಿಗೂ ಬಂದಿದೆ. ಇದರಿಂದ ಅನೇಕ ಕಾರ್ಯಕರ್ತರು ನಲುಗಿ ಹೋಗಿದ್ದಾರೆ. ಹಿಂದು ಪರ ನಾಯಕರು ಸೇರಿದಂತೆ ಹಿಂದುಳಿದ ವರ್ಗದ ನಾಯಕರನ್ನು ಕಡೆಗಣಿಸಲಾಗುತ್ತಿದೆ. ಇದರ ವಿರುದ್ಧವಾಗಿ ನನ್ನ ಸ್ಪರ್ಧೆ. ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದಾಗ ಹಿಂದುಳಿದ ವರ್ಗದವರು ಇಷ್ಟೊಂದು ಸಂಖ್ಯೆಯಲ್ಲಿ ಪಕ್ಷಕ್ಕೆ ಬರುತ್ತಿರುವುದನ್ನು ಯಡಿಯೂರಪ್ಪ ಅವರು ಸ್ವಾಗತ ಮಾಡಬೇಕಿತ್ತು. ಆದರೆ, ಯಡಿಯೂರಪ್ಪ ಅವರು ಅದನ್ನು ನಿಲ್ಲಿಸುವಂತೆ ವರಿಷ್ಠರಿಗೆ ದೂರು ಕೊಟ್ಟಿದ್ದರು. ವರಿಷ್ಠರ ಸೂಚನೆಯಂತೆ ಅದನ್ನು ನಿಲ್ಲಿಸಿದ್ದೆ. ವಿಧಾನಸಭೆ ಚುನಾವಣೆಯಲ್ಲಿ ನಿಲ್ಲಬೇಡಿ ಎಂದಾಗಲೂ ಅವರ ಸೂಚನೆಯನ್ನು ಪಾಲನೆ ಮಾಡಿದೆ. ಆದರೆ, ಈಗ ಸ್ಪರ್ಧೆ ಯಾಕೆ ಎಂಬುದುನ್ನು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಸ್ಪಷ್ಟವಾಗಿ ತಿಳಿಸಿ ಅವರನ್ನು ಅಪ್ಪಿಸುವ ಶಕ್ತಿ ಈಗ ನನಗೆ ಬಂದಿದೆ ಎಂದು ತಿಳಿಸಿದರು.
ಕಾರ್ಯಕರ್ತರಿಗೆ ದಮ್ಕಿ ಹಾಕಿದ್ದಾರೆ ಎನ್ನುವ ವಿಚಾರಕ್ಕೆ ಈಶ್ವರಪ್ಪ ಅವರು ದೇವಸ್ಥಾನದಲ್ಲಿ ಘಂಟೆ ಬಾರಿಸಲಿ ಎಂದು ರಾಘವೇಂದ್ರ ಅವರು ಹೇಳಿದಾಗ ನಾನು ನೀನು ಬೇಡ, ನಿಮ್ಮಪ್ಪನನ್ನು ಕಳುಹಿಸು, ನನ್ನ ಮಗನಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿಲ್ಲ ಎಂದು ಹೇಳಿ ಪ್ರಮಾಣ ಮಾಡಲಿ ಎಂದಿದ್ದೆ. ನಾನು ಮನೆಯಲ್ಲಿ ದೇವರ ಪೂಜೆ ಮಾಡುವಾಗ ಘಂಟೆ ಬಾರಿಸಿದ್ದೇನೆ ಹೊರೆತು ಸುಳ್ಳು ಹೇಳಿ ದೇವಸ್ಥಾನದಲ್ಲಿ ಘಂಟೆ ಭಾರಿಸುವ ಅಭ್ಯಾಸ ನನಗಿಲ್ಲ. ಯಡಿಯೂರಪ್ಪ ಬೇಕಾದರೆ ಘಂಟೆ ಬಾರಿಸಬಹುದು. ಅವರಿಗೆ ಸುಳ್ಳಿ ಹೇಳಿ ಅಭ್ಯಾಸ ಇದೆ ಎಂದು ಕುಟುಕಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಇ.ವಿಶ್ವಾಸ್, ಏಳುಮಲೈ, ಲತಾ ಗಣೇಶ್, ಶಂಕರ್ ಗನ್ನಿ, ಆರ್.ಕೆ.ಪ್ರಕಾಶ್, ಲಕ್ಷ್ಮಿ ನಾಯಕ್, ರಮೇಶ್, ರಾಜು, ಶಂಕರ್ ನಾಯ್ಕ್ , ಭೂಪಾಲ್ ಕುಮಾರ್, ಶ್ರೀಕಾಂತ್, ಜಾಧವ್ ಮತ್ತಿತರರು ಇದ್ದರು.