ಶಿವಮೊಗ್ಗ,ಏ.01:
ಈ ಬಾರಿಯ ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವದ ಉಳಿವಿಗಾಗಿ ಮತ್ತು ಸಂವಿಧಾನದ ಉಳಿವಿಗಾಗಿ, ಹೀಗಾಗಿ ಕಾಂಗ್ರೆಸ್ ಗೆಲ್ಲಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದರು.
ಅವರು ಇಂದು ಮದ್ಯಾಹ್ನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂದು ಪ್ರಜಾಪ್ರಭುತ್ವಕ್ಕೆ ಆತಂಕ ಬಂದೊದಗಿದೆ. ಸಂವಿಧಾನವೇ ಕಗ್ಗೊಲೆಯಾಗುತ್ತಿದೆ. ಲಕ್ಷಾಂತರ ಜನರ ಬಲಿದಾನದಿಂದ ಭದ್ರವಾಗಿದ್ದ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ. ಪ್ರಜಾಪ್ರಭುತ್ವವನ್ನು ಸಂವಿಧಾನವನ್ನು ಉಳಿಸುವ ಉದ್ದೇಶದಿಂದ ಕಾಂಗ್ರೆಸ್ ಈ ಬಾರಿ ಇದನ್ನೇ ಮುಖ್ಯ ಅಜೆಂಡಾವಾಗಿ ಇಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದೇವೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ೭ ಪಾರ್ಲಿಮೆಂಟ್ ಕ್ಷೇತ್ರಗಳ ಜೊತೆಗೆ, ಯುವ ಮತ್ತು ಮಹಿಳಾ ಕಾಂಗ್ರೆಸ್ ಜವಾಬ್ದಾರಿ ನೀಡಿದ್ದಾರೆ. ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ಹೇಳಿದಂತೆ ಸಂವಿಧಾನ ಮತ್ತು ಪ್ರಜಾಸತ್ತೆ ಉಳಿಸುವ ಪ್ರಯತ್ನ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡುತ್ತಿದೆ ಎಂದರು.
ಪ್ರಜಾಪ್ರಭುತ್ವದ ಕಗ್ಗೋಲೆಯಾಗುತ್ತಿರುವುದಕ್ಕೆ ದೇಶದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ಪ್ರಜಾಸತ್ತಾತ್ಮಕ ಆಡಳಿತಗಳನ್ನು ಕಳೆದ ಐದಾರು ವರ್ಷಗಳಲ್ಲಿ ಪ್ರಜೆಗಳಿಂದ ಆಯ್ಕೆ ಆದ 8 ರಾಜ್ಯಗಳಲ್ಲಿ ಕಗ್ಗೊಲೆ ಆಗ್ತಿದೆ. ಗೆದ್ದ ಶಾಸಕರುಗಳನ್ನು, ಉದಾಹರಣೆಗೆ ಅರುಣಾಚಲದಲ್ಲಿ ಈ ಕಗ್ಗೊಲೆ ಕಾಣಬಹುದು ಎಂದರು.
ಸಿಬಿಐ, ಇಡಿ ರೈಡ್ಗಳನ್ನು ಭ್ರಷ್ಟರ ಮೇಲೆ ಮಾಡಿಸಿ, ಬಿಜೆಪಿಗೆ ಸೇರಿಸಿಕೊಂಡು ಕ್ಲೀನ್ ಚಿಟ್ ಕೊಡಲಾಗುತ್ತಿದೆ. ಆಪ್ ಮುಖ್ಯಮಂತ್ರಿ ಕೇಜ್ರಿವಾಲ್ ರನ್ನ ಜೈಲಿಗೆ ಕಳಿಸಲಾಗಿದೆ. ಅಬಕಾರಿ ನೀತಿ ಸರಿ ಇಲ್ಲವೆಂದು ಬಂಧಿಸಲಾಗಿದೆ. ಆಪ್ ಸರಕಾರ ತಪ್ಪು ನೀಡಿ ಮಾಡಿದೆಯಾದರೆ, ಎಲೆಕ್ಟ್ರೋಲ್ ಬಾಂಡ್ ಗಳಿಗೆ ಅದೇ ಕಾನೂನು ಜೈಲಿಗೆ ಕಳಿಸಬೇಕಿತ್ತಲ್ಲವೇ ಎಂದು ಪ್ರಶ್ನೆ ಮಾಡಿದರು.
ಚುನಾವಣೆಯ ಈ ಸಂದರ್ಭದಲ್ಲಿ ಬ್ಯಾಂಕ್ ಖಾತೆಗಳನ್ನು ಸೀಝ್ ಮಾಡಲಾಗಿದೆ. ಬಿಜೆಪಿಗೆ ಹೆದರಿಕೆ ಶುರುವಾಗಿದೆ, ಕಾಂಗ್ರೆಸ್ ಬಗ್ಗೆ, ರಾಹುಲ್ ಗಾಂಧಿ ಬಗ್ಗೆ. ಆದರೆ, ದುರುದ್ದೇಶದಿಂದ ಕಾಂಗ್ರೆಸ್ ಮೇಲೆ ಹಿಂಸೆ. ಬಿಜೆಪಿ ಮೇಲೆ ಯಾವುದೇ ಕ್ರಮ ಯಾಕಿಲ್ಲ? ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತಿದೆ ಎಂದರು.
ಸಂವಿಧಾನದ ಹಕ್ಕುಗಳು ಮಾನವೀಯವಾಗಿವೆ. ಅದನ್ನೆಲ್ಲ ಬದಲಾಯಿಸಲು ಹೊರಟಿದ್ದಾರೆ. ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಅಭಿವೃದ್ಧಿ ಆಧಾರದ ಮೇಲೆ ಮತಕೇಳುತ್ತಿದ್ದೆವು. ಆದರೆ, ಧರ್ಮ, ಜಾತಿ ಆಧಾರದ ಮೇಲೆ ಕೇಳಿಲ್ಲ. ಆದರೆ, ಚುನಾವಣೆ ಪ್ರಚಾರಕ್ಕೆ ಇದನ್ನೆಲ್ಲ ಬಿಜೆಪಿ ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ? ಎಂದರು.
ಪ್ರಣಾಳಿಕೆ ಮುಖಾಂತರ ಭರವಸೆ ಕೊಡುತ್ತಿದ್ದೆವು ಮೊದಲೆಲ್ಲ. ಜನಾಭಿಪ್ರಾಯದ ಮೂಲಕ ಈಗ ಪ್ರಣಾಳಿಕೆ. ಅದರ ಆಧಾರದ ಮೇಲೆ ಗ್ಯಾರಂಟಿಗಳ ಘೋಷಣೆ ಆಯಿತು. ಗ್ಯಾರಂಟಿಗೆ ವಾರಂಟಿ ಇಲ್ಲ ಅಂದ ಬಿಜೆಪಿ ಗ್ಯಾರಂಟಿಯನ್ನೇ ಕದಿಯುತ್ತಿದೆ. ಪ್ರಣಾಳಿಕೆಗಳೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತದೆ ಎಂದರು.
ಬಿಜೆಪಿಯವರು ಭಾವನಾತ್ಮಕವಾಗಿ ರಾಷ್ಟ್ರಪ್ರೇಮ, ದೇವಸ್ಥಾನದ ವಿಷಯ ತರುತ್ತಿದ್ದಾರೆ. ೧೫೦ ಲಕ್ಷ ಕೋಟಿ ಸಾಲ ಬಿಜೆಪಿ ಹತ್ತು ವರ್ಷಗಳಲ್ಲಿ ಮಾಡಿದೆ. ಹತ್ತು ಲಕ್ಷ ರೂ ಒಬ್ಬೊಬ್ಬರ ತಲೆ ಮೇಲಿದೆ. ಸಾಲ ಮಾಡಿದ್ದೇ ಅಭಿವೃದ್ಧಿ ಇವರದಾಗಿದೆ. ರಾಷ್ಟ್ರಪ್ರೇಮ ಕಾಂಗ್ರೆಸ್ ಕಾರ್ಯಕರ್ತನ ಡಿಎನ್ ಎ ನಲ್ಲಿಯೇ ಇದೆ. ನಮ್ಮ ಹಿಂದುತ್ವ ಸಂವಿಧಾನದ್ದು. ಬಸವ ಬುದ್ಧ ಅಂಬೇಡ್ಕರ್ ಸಂವಿಧಾನದ ಹಿಂದುತ್ವ ನಮ್ಮದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್, ಉಪಾಧ್ಯಕ್ಷರಾದ ಎಸ್.ಟಿ.ಚಂದ್ರಶೇಖರ್, ಪ್ರಚಾರ ಸಮಿತಿ ಅಧ್ಯಕ್ಷರಾದ ಎನ್.ರಮೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ, ಪ್ರಮುಖರಾದ ಹೆಚ್.ಸಿ.ಯೋಗೇಶ್, ಚಂದ್ರಭೂಪಾಲ್, ಕಾಶಿ ವಿಶ್ವನಾಥ್, ಮಧು, ಶಿವಕುಮಾರ್, ವಿಜಯಲಕ್ಷ್ಮೀ ಪಾಟೀಲ್, ಸುವರ್ಣ ನಾಗರಾಜ್, ಮೂರ್ತಿ ಮತ್ತಿತರರು ಇದ್ದರು.
ಕೆ.ಪಿ.ಸಿ.ಸಿ. ಕಾರ್ಯಧ್ಯಕ್ಷರಾಗಿ ಆಯ್ಕೆಯಾಗಿ ಶಿವಮೊಗ್ಗಕ್ಕೆ ಮೊದಲ ಬಾರಿಗೆ ಬಂದ ಮಂಜುನಾಥ್ ಭಂಡಾರಿಯವರಿಗೆ ಶಿವಮೊಗ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಪ್ರಮುಖರಾದ ಹೆಚ್.ಸಿ.ಯೋಗಿಶ್, ವಿಶ್ವನಾಥ್ ಕಾಶಿ, ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಮತ್ತಿತರರಿದ್ದರು.