ಶಿವಮೊಗ್ಗ,ಏ.01:
ಈ ಬಾರಿಯ ಆಸ್ತಿ ತೆರಿಗೆ ಪಾವತಿದಾರರಿಗೆ ಮಹಾನಗರ ಪಾಲಿಕೆ ಹಲವು ಸೌಲಭ್ಯಗಳನ್ನು ನೀಡುವ ಮೂಲಕ ಮೊದಲ ಬಾರಿಗೆ ಸರಿಯಾದ ಸಮಯಕ್ಕೆ ಸಾರ್ವಜನಿಕರು ತೆರಿಗೆ ಕಟ್ಟಲು ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಿದ್ದಾರೆ.
ತೆರಿಗೆ ಕಟ್ಟಲು ಬರುವ ಸಾರ್ವಜನಿಕರಿಗೆ ಮಹಾನಗರ ಪಾಲಿಕೆಯ ಆವರಣದಲ್ಲಿ 4 ಕೌಂಟರ್ಗಳನ್ನು ತೆರಿಯಲಾಗಿದೆ. ನೆರಳಿನ ವ್ಯವಸ್ಥೆಯನ್ನು ಮಾಡಲಾಗಿದೆ. ಶುದ್ಧ ಕುಡಿಯುವ ನೀರಿನ, ಆಸನದ ವ್ಯವಸ್ಥೆ ಮತ್ತು ಅಂಗವಿಕಲರಿಗಾಗಿ ಹಾಗೂ ಮಹಿಳೆಯರಿಗಾಗಿ ವಿಶೇಷ ಕೌಂಟರ್ನ ಸೌಲಭ್ಯ ನೀಡಲಾಗಿದೆ. ಹಾಗೆಯೇ ಆಸ್ತಿ ತೆರಿಗೆದಾರರಿಗೆ ಮಾಹಿತಿಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಕಂದಾಯ ಅಧಿಕಾರಿ ಡಿ.ನಾಗೇಂದ್ರ ತಿಳಿಸಿದರು.
ಇಂದು ಕೌಂಟರ್ಗಳಿಗೆ ಚಾಲನೆ ನೀಡಿದ ಅವರು ಸಾರ್ವಜನಿಕರಿಗೆ ಗುಲಾಬಿ ಹೂ ಹಾಗೂ ಸಿಹಿ ಹಂಚುವ ಮೂಲಕ ಸಾರ್ವಜನಿಕರಿಗೆ ತೆರಿಗೆ ಪಾವತಿಸುವ ವಿವರಗಳನ್ನು ತಿಳಿಸಿದರು.
24-25ರ ಸಾಲಿನ ಆಸ್ತಿ ತೆರಿಗೆಯನ್ನು ಏ.2024ರ ಒಳಗೆ ಪಾವತಿಸಿದರೆ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಜೂನ್ ಅಂತ್ಯದೊಳಗೆ ತೆರಿಗೆ ಪಾವತಿಸಿದರೆ ಯಾವುದೇ ರಿಯಾಯಿತಿ ಇಲ್ಲ. ಆದರೆ ಜುಲೈ ನಂತರ ಶೇ.3ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ.
ತೆರಿಗೆದಾರರು ಆನ್ಲೈನ್ ಮೂಲಕ, ಡೆಬಿಟ್ ಕಾರ್ಡ್ ಮೂಲಕ, ಪೋನ್ಪೇ ಮೂಲಕ, ನೆಟ್ಬ್ಯಾಂಕಿಂಗ್ ಹಾಗೂ ಪಾಲಿಕೆಯ ಆವರಣದಲ್ಲಿ ತೆರೆದಿರುವ ಕೌಂಟರ್ಗಳಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ. ಅಲ್ಲದೇ ಕಚೇರಿ ಸಿಬ್ಬಂದಿಗಳಿಂದ ಅನುಮೋದಿತವಾಗಿರುವ ಇಡಿಸಿ ಯಂತ್ರಗಳ ಮೂಲಕ ನೇರವಾಗಿ ಆಸ್ತಿ ಮಾಲೀಕರು ತಮ್ಮ ಸ್ವತ್ತಿನ ಸ್ಥಳದಲ್ಲಿಯೇ ತೆರಿಗೆಯನ್ನು ಕಟ್ಟಬಹುದಾಗಿದೆ.
ಈ ಸಂದರ್ಭದಲ್ಲಿ ಆಯುಕ್ತ ಮಾಯಣ್ಣಗೌಡರು, ಕಂದಾಯ ಶಾಖೆಯ ಪ್ರಮುಖರಾದ ಯಶವಂತ್, ಅಂಜನಾಮೂರ್ತಿ, ಪಿ. ಕುಮಾರ್, ಎಸ್.ಜಿ.ಮಂಜಣ್ಣ, ಜಿ.ಪರಮೇಶ ಮುಂತಾದವರು ಇದ್ದರು.