ಶಿವಮೊಗ್ಗ, ನ.05:
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅವರು ಇಂದು ಶಿವಮೊಗ್ಗ ತಾಲ್ಲೂಕು ಬಿದರೆ ಗ್ರಾಮಕ್ಕೆ ಭೇಟಿ ನೀಡಿದರು.
ಕಳೆದ ನವೆಂಬರ್ ತಿಂಗಳಲ್ಲಿ ಭದ್ರಾ ಜಲಾಶಯದಿಂದ ಎಡ ಮತ್ತು ಬಲ ನಾಲೆಗಳಿಗೆ ಹರಿಸುತ್ತಿದ್ದ ನೀರನ್ನು ಈಗಾಗಲೇ ನಿಲ್ಲಿಸಿದ್ದು, ಸಾಕಷ್ಟು ವರ್ಷಗಳಿಂದ ಹೂಳು ತೆಗೆಯುವ ಕೆಲಸ ಇಲಾಖೆಯ ವತಿಯಿಂದ ಆಗದೆ ಜಲಾಶಯದಿಂದ ನೀರು ಬಿಟ್ಟಾಗ ರೈತರಿಗೆ ಪೂರ್ಣ ಪ್ರಮಾಣದಲ್ಲಿ ನೀರು ಲಭಿಸುವುದರಲ್ಲಿ ಸ್ವಲ್ಪ ಮಟ್ಟಿನ ತೊಂದರೆಯಾಗುತ್ತಿರುವುದು ದೊಡ್ಡ ಸಮಸ್ಯೆಯಾಗಿ ಉಳಿದಿತ್ತು.
ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಯೋಚಿಸಿದಾಗ ಕೋವಿಡ್-19 ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರಕ್ಕೆ ಎದುರಾಗಿರುವ ಆರ್ಥಿಕ ಸಂಕಷ್ಟವನ್ನು ಮನಗಂಡು ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳು ತಗೆಸುವ ಕಾಮಗಾರಿ ಕೈಗೊಂಡರೆ ಕೆಲಸವಿಲ್ಲದ ಗ್ರಾಮೀಣ ಭಾಗದ ದುಡಿಯುವ ಕೈಗಳಿಗೆ ಕೆಲಸ ಕೊಟ್ಟಂತಾಗುತ್ತದೆ ರೈತರ ಸಮಸ್ಯೆಗೆ ಸ್ವಲ್ಪ ಮಟ್ಟಿನ ಕಾಯಕಲ್ಪ ನೀಡಿದಂತಾಗುತ್ತದೆ ಎಂದು ಆಲೋಚಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವೈಶಾಲಿ ಅವರನ್ನು ಭೇಟಿ ಮಾಡಿ ಕಾಡ ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳಿಗೆ ನರೇಗಾ ಯೋಜನೆಯ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದರು.
ಅದರಂತೆ ಈ ಮನವಿಗೆ ಸ್ಪಂದಿಸಿ ಎಲ್ಲಾ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಅನುದಾನ ಬಿಡುಗಡೆ ಮಾಡಿದ್ದಾರೆ.
ಜಿಲ್ಲೆಯ ಹಲವಾರು ಕಡೆ ಈಗಾಗಲೇ ನರೇಗಾ ಅಡಿ ಹೂಳು ತೆಗೆಯುವ ಕಾರ್ಯ ಆರಂಭವಾಗಿದೆ.
ಜಲಾಶಯದಿಂದ ನೀರು ನಿಲ್ಲಿಸಿರುವ ಈ ಬಿಡುವಿನ ಅವಧಿಯಲ್ಲಿ ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳನ್ನು ಎತ್ತುವ ಹಾಗೂ ಕಾಲುವೆಗಳ ಬದಿಯಲ್ಲಿ ಎತ್ತೆಚ್ಚಾವಾಗಿ ತುಂಬಿರುವ ಗಿಡ ಗಂಟೆಗಳನ್ನು ತಗೆಸುವ ಕೆಲಸ ಪ್ರಗತಿಯಲ್ಲಿದ್ದು ಇಂದು ಅಧಿಕಾರಿಗಳೊಂದಿಗೆ ಗ್ರಾಮದ ರೈತರೊಂದಿಗೆ ಭೇಟಿ ಮಾಡಿ ಪರಿಶೀಲನೆ ನಡೆಸಿ ಕಾಮಗಾರಿಯ ಗುಣಮಟ್ಟ ವೀಕ್ಷಿಸಿದರು.
ಭದ್ರಾ ಅಚ್ಚುಕಟ್ಟು ಭಾಗದ ರೈತರು ಅನೇಕ ವರ್ಷಗಳಿಂದ ಎದುರಿಸುತ್ತಿರುವ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂಬ ಕೂಗಿಗೆ ನಾನು ಧ್ವನಿಯಾಗಿ ನಿಲ್ಲಲ್ಲು ಈಗಾಗಲೇ ಯೋಜನೆ ರೂಪಿಸುತ್ತಿದ್ದು ಈ ನಿಟ್ಟಿನಲ್ಲಿ ಕಾರ್ಯ ಆರಂಭಿಸಿದ್ದೇನೆ.
ಕೊನೆಯ ಭಾಗಕ್ಕೆ ನೀರು ಮುಟ್ಟ ಬೇಕೆಂದು ರೈತರು ಹಸನ್ಮುಖರಾಗಬೇಕೆಂದು ನನ್ನ ಕನಸಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.