ಶಿವಮೊಗ್ಗ,ಮಾ.೩೦: ಬಿಜೆಪಿ ಶಿವಮೊಗ್ಗ ಗ್ರಾಮಾಂತರ ಘಟಕದ ವತಿಯಿಂದ ಏ.೧ರ ಸಂಜೆ ೪ಕ್ಕೆ ಸೈನ್ಸ್ ಮೈದಾನದಲ್ಲಿ ಪಕ್ಷದ ಭೂ ಸಮಿತಿಯ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಡಾ.ಧನಂಜಯ ಸರ್ಜಿ ತಿಳಿಸಿದರು.
ಅವರು ಇಂದು ಗ್ರಾಮಾಂತರ ಚುನಾವಣಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಈ ಸಮಾವೇಶದಲ್ಲಿ ಸುಮಾರು ೧೨ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದು, ಗ್ರಾಮಾಂತರ ಕ್ಷೇತ್ರದಲ್ಲಿ ೨೩೧ ಬೂತ್ಗಳಿದ್ದು, ೩ ಸಾವಿರ ಕಾರ್ಯಕರ್ತರಿದ್ದಾರೆ. ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಮುಖಂಡರಾದ ಭಾನುಪ್ರಕಾಶ್, ಆರ್.ಕೆ.ಸಿದ್ರಾಮಣ್ಣ, ಅಶೋಕ್ ನಾಯಕ್, ಕೆ.ಜಿ.ಕುಮಾರಸ್ವಾಮಿ ವಿರೂಪಾಕ್ಷಪ್ಪ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.
ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷವಾಗಿದ್ದು, ಬೂತ್ ಕಾರ್ಯಕರ್ತರಿಂದ ಹಿಡಿದು ರಾಜ್ಯ, ರಾಷ್ಟ್ರ ಮಟ್ಟದವರೆಗೆ ಎಲ್ಲರಿಗೂ ಸಮಾನವಾದ ಗೌರವ ನೀಡುತ್ತಾ ಬಂದಿದೆ. ವಿಶ್ವನಾಯಕ ನರೇಂದ್ರ ಮೋದಿ ಅವರು ಕಳೆದು ಒಂದೂವರೆ ತಿಂಗಳ ಹಿಂದೆ ದೆಹಲಿಯಲ್ಲಿ ನಡೆದಂತಹ ಪ್ರಮುಖರ ಕಾರ್ಯಕರಿಣಿ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡದೆ, ಬೂತ್ ಕಾರ್ಯಗಳ ಕುರಿತು ಬೂತ್ಗೆದ್ದರೆ ದೇಶ ಗೆದ್ದಂತೆ, ಬೂತ್ ಗೆದ್ದರೆ ಬಿಜೆಪಿ ಗೆದ್ದಂತೆ ಎಂದು ಪ್ರತಿಪಾದಿಸಿ ದೊಡ್ಡ ದೊಡ್ಡ ಸಮಾವೇಶಕ್ಕಿಂತ ಕಾರ್ಯಚಟುವಟಿಕೆಗಳೆಲ್ಲವು ಬೂತ್ ಮಟ್ಟದಲ್ಲಿ ನಡೆಯಬೇಕು ಎಂದರು.
ಅತಿ ಹೆಚ್ಚು ನಿಷ್ಟಾವಂತ ಕಾರ್ಯಕರ್ತರನ್ನು ಹೊಂದಿರುವ ಪಕ್ಷವಾಗಿದೆ. ಹಾಗಾಗಿ ನಿಷ್ಠಾವಂತ ಕಾರ್ಯಕರ್ತರ ವಿಶ್ವಾಸವಿದೆ. ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಕೆಲಸ ಮಾಡಬೇಕು. ನಮ್ಮ ಕಾರ್ಯಕರ್ತರು ಜನರ ಬಳಿಗೆ ಹೋಗಿ ತಲೆಯೆತ್ತಿ ಮತ ಕೇಳಬೇಕು. ಅಂತಹ ಸ್ಥಿತಿ ಬಿಜೆಪಿಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಅಶೋಕ್ನಾಯಕ್, ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ಎಂ.ಗಣೇಶ್, ಎಂ.ಮಲ್ಲೇಶಪ್ಪ, ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಇನ್ನಿತರರು ಇದ್ದರು.