ಶಿವಮೊಗ್ಗ, ಮಾ.17:
ಸರ್ಕಾರಿ ಶಾಲೆಯನ್ನು ದತ್ತು ಪಡೆಯುತ್ತೇನೆ ಎಂದು ದಾಖಲೆ ರೂಪಿಸಿಕೊಂಡು ಸರ್ಕಾರಿ ಶಾಲೆಯ ಜಾಗವನ್ನೇ ಒತ್ತುವರಿ ಮಾಡಿಕೊಂಡಿದ್ದಲ್ಲದೇ, ಶಾಲೆಯ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಅಕ್ರಮವಾಗಿ ಕಳಪೆ ಕಾಮಗಾರಿ ಮಾಡಿ ಅರ್ಧಕ್ಕೆ ಕೈ ಬಿಟ್ಟಿರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಶಾಲೆಯನ್ನು ಈ ದತ್ತು ಸ್ವೀಕಾರದಿಂದ ಮುಕ್ತಗೊಳಿಸಿ, ಅಕ್ರಮ ದಾಖಲೆಗಳೊಂದಿಗೆ ಶಾಲಾ ಜಾಗವನ್ನು ಉಳಿಸಬೇಕೆಂದು ಭದ್ರಾವತಿ ತಾಲೂಕ್ ಹುಣಸೇಕಟ್ಟೆ ಗ್ರಾಮದ ನಿವಾಸಿ, ವಿದ್ಯಾರ್ಥಿನಿಯ ತಂದೆ ಶೇಷಣ್ಣ, ಕೇಶವ, ಬಾಬು ಹಾಗೂ ಇತರರು ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಡಿಡಿಪಿಐ ಹಾಗೂ ಭದ್ರಾವತಿ ಬಿಇಓ ಗೆ ಪ್ರತ್ಯೇಕ ದಾಖಲೆಯ ದೂರು ಸಲ್ಲಿಸಿದ್ದಾರೆ.


ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಶೌಚಾಲಯವಿಲ್ಲದೆ ಪರದಾಟ ಪಡುತ್ತಿರುವಾಗ ಇದನ್ನು ಮಾಡಲು ಜಿಲ್ಲಾ ಪಂಚಾಯತ್ ನ ನರೇಗಾ ಯೋಜನೆಯನ್ನು ಬಳಸಿಕೊಂಡು ಕೆಲಸವನ್ನು ಸಂಪೂರ್ಣಗೊಳಿಸದೇ ವಂಚಿಸಿರುವ ಹಾಗೂ ದತ್ತು ಸ್ವೀಕಾರ ಹೆಸರಿನಲ್ಲಿ ಶಾಲೆಗೆ ಬಂದು ಶಾಲೆಯ ಜಾಗವನ್ನೇ ಕಬಳಿಸಿರುವ ಎಸ್. ವಿರೂಪಾಕ್ಷಪ್ಪ ಹಾಗೂ ಇತರರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಸೂಕ್ತ ದಾಖಲೆಗಳ ಸಹಿತ ದೂರು ನೀಡಿದ್ದಾರೆ.


ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗಾಗಿ ಇರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಕಡುಬಡವರ ಹಾಗೂ ಕೃಷಿ ಕಾರ್ಮಿಕರ ಮಕ್ಕಳು ಶೌಚಾಲಯವಿಲ್ಲದೆ ಹಾಗೂ ಶಾಲೆಯಲ್ಲಿ ವ್ಯವಸ್ಥಿತ ಮೂಲಭೂತ ಸೌಕರ್ಯಗಳಿಲ್ಲದೆ ನರಕ ಯಾತನೆ ಅನುಭವಿಸುತ್ತಿದ್ದಾರೆ. ವಿರೂಪಾಕ್ಷಪ್ಪ ಹಿಂದೆ ಈ ಶಾಲೆಯ ಪಕ್ಕದಲ್ಲಿ ಅವರ ತಾಯಿಯ ಹೆಸರಿಗೆ ಉಚಿತವಾಗಿ 40*80 ಅಳತೆಯ ನಿವೇಶನವನ್ನು ಕಂಬದಾಳು ಹೊಸೂರಿನ ಗ್ರಾಮ ಪಂಚಾಯಿತಿ ಮೂಲಕ ಇಂದಿರಾ ಆವಾಜ್ ಯೋಜನೆಯಲ್ಲಿ ಪಡೆದಿದ್ದು, ಅದನ್ನು ಮಾರಿದ್ದಾರೆ. ಈಗ ಜಾಗವನ್ನು ಕಬಳಿಸುವ ಉದ್ದೇಶದಿಂದ 30-10- 2018 ರಂದು ಶಾಲಾ ದತ್ತು ಯೋಜನೆ ನಿರ್ವಹಣಾ ಸಮಿತಿ ಹೆಸರಿನಲ್ಲಿ ಶಾಲೆಗೆ ಬಂದು ಈ ಸಮಿತಿಗೆ ಕಾರ್ಯದರ್ಶಿಯಾಗಿ, ಅವರ ಪತ್ನಿ ಗಾಯಿತ್ರಿ ವಿರುಪಾಕ್ಷಪ್ಪ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ವಂಚಿಸಿದ್ದಾರೆ.

ಶಾಲೆ ದತ್ತು ಪಡೆದು, ಜಾಗ ಒತ್ತುವರಿ ಮಾಡಿಕೊಂಡ ಆರೋಪವೊತ್ತ ವಿರೂಪಾಕ್ಷಪ್ಪ


ಹಿಂದೆ ಇದೇ ಶಾಲೆಯಲ್ಲಿದ್ದ ಈಗ ನಿವೃತ್ತರಾಗಿರುವ ಮುಖ್ಯ ಶಿಕ್ಷಕ ಶಿವಾನಾಯಕ ಅವರಿಗೆ 2014ರ ಆಗಸ್ಟ್ 20ರಂದು ಅರ್ಜಿ ಬರೆದುಕೊಂಡು ಶಾಲಾ ಮಕ್ಕಳಿಗೆ ತಂತ್ರಜ್ಞಾನ ಶಿಕ್ಷಣ, ಎನ್‌ಸಿಸಿ, ಸ್ಕೌಟ್, ಸೇವಾದಳ, ಕ್ರೀಡಾ ಆದ್ಯತೆ, ವ್ಯಕ್ತಿತ್ವ ವಿಕಸನ, ಎಸ್ಸಿ ಎಸ್ಟಿ ಮಕ್ಕಳ ಅಭಿವೃದ್ಧಿ, ಅವಶ್ಯ ಕೊಠಡಿಗಳ ನಿರ್ಮಾಣಕ್ಕೆ ದಾನಿಗಳ ಸಹಾಯ ಪಡೆದು ಕಾರ್ಯಕ್ರಮ ಮಾಡುವುದಾಗಿ ಹೇಳಿ ವಂಚಿಸಿದ್ದಾರೆಂದು ಆರೋಪಿಸಿದ್ದಾರೆ.
ಶಾಲಾ ಅಭಿವೃದ್ದಿಗೆ ಇಂತಹ ಹಲವು ಯೋಜನೆಗಳನ್ನು ನೀಡುತ್ತೇವೆ ಎಂದು ವಂಚಿಸಿರುವ ಅವರು ಭದ್ರಾವತಿಯ ಅಂದಿನ ಬಿಇಓ ಅವರ ದಾರಿ ತಪ್ಪಿಸಿ 2018ರಲ್ಲಿ ಇದನ್ನು ಕಚೇರಿಯಲ್ಲಿ ನೋಂದಾಯಿಸಿಕೊಂಡು, ಶಾಲೆಗೆ ಬಂದು ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ಮೂಲಕ ಹೆಣ್ಣು ಮಕ್ಕಳ ಶೌಚಾಲಯ ಮಾಡಲು 3.7 ಲಕ್ಷ ಹಣ ಪಡೆದು ವಂಚಿಸಿದ್ದಾರೆ. ಅಂತೆಯೇ ಶಾಲಾ ಕಟ್ಟಡ ದುರಸ್ತಿ ಕಾಮಗಾರಿ ಸುಣ್ಣಬಣ್ಣಕ್ಕಾಗಿ 2.09 ಲಕ್ಷ, ಶಾಲೆ ಹಿಂಭಾಗದ ಕಾಂಪೌಂಡ್ ನಿರ್ಮಾಣಕ್ಕಾಗಿ 6.4 ಲಕ್ಷ ಹಣವನ್ನು ಪಡೆದಿದ್ದಾರೆ. ಅದೇ ಹೆಸರಿನಲ್ಲಿ ಶಾಲೆಯ ಜಾಗವನ್ನು ಒತ್ತುವರಿ ಮಾಡಿಕೊಂಡು, ಸುಳ್ಳು ದಾಖಲೆ ನೀಡಿ ಆ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಇವರ ಜಾಗಕ್ಕೆ ಸೇರಿಕೊಂಡಂತೆ ಸರ್ಕಾರಿ ಹಣದಲ್ಲಿ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


ವಿರೂಪಾಕ್ಷಪ್ಪ ಶಾಲೆಯ ಪಕ್ಕದಲ್ಲಿರುವ ಜಾಗವನ್ಬು ತಮ್ಮ ಹೆಂಡತಿ ಹೆಸರಿಗೆ ಮಾಡಿಕೊಂಡಿರುವ ನಿವೇಶನಕ್ಕೆ ಕಾಂಪೌಂಡ್ ಕಟ್ಟಿಕೊಳ್ಳಲು ಈ ಹಣವನ್ನು ಬಳಸಿಕೊಂಡಿದ್ದಾರೆ. ಇಲ್ಲಿಯವರೆಗೂ ಜೇಬಿ ನಿಂದ ಒಂದು ಪೈಸೆಯನ್ನು ಸಹ ಹಾಕದೆ, ಯಾವುದೇ ಕಾರ್ಯಕ್ರಮ ನಡೆಸದೆ ಮಕ್ಕಳಿಗೆ, ಶಾಲೆಗೆ ಗ್ರಾಮಸ್ಥರಿಗೆ ವಂಚಿಸಿರುವ ಈ ಕಮಿಟಿಯ ವಿರೂಪಾಕ್ಷಪ್ಪ, ಗಾಯತ್ರಿ ವಿರುಪಾಕ್ಷಪ್ಪ ಹಾಗೂ ಸಮಿತಿಯ ತಮ್ಮಡಿಹಳ್ಳಿಯ ಪ್ರಸಾದ್ ಅವರನ್ನು ಶಾಲೆಯಿಂದ ಹೊರಗೆ ಕಳಿಸಬೇಕು ಎಂದು ಒತ್ತಾಯಿಸಿದ್ದಾರೆ.


ದತ್ತು ಯೋಜನಾ ಅಡಿ ಅಭಿವೃದ್ದಿ ಮಾಡುತ್ತಿರುವುದಾಗಿ ಶಾಲೆಯ ಮುಂಭಾಗದಲ್ಲಿ ದೊಡ್ಡದಾಗಿ ಬೋರ್ಡ್ ಹಾಕಿಕೊಂಡು ಶಾಲೆಯ ಭೂಮಿಯನ್ನು ತನ್ನ ಹಾಗೂ ತನ್ನ ಪತ್ನಿ ಹೆಸರಿನಲ್ಲಿ ದೋಚಿರುವ ಈ ವಿರುಪಾಕ್ಷಪ್ಪರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈಗ ಪ್ರಸ್ತುತ ಇರುವ ಸರ್ಕಾರಿ ಶಾಲೆಯ ಜಾಗ ಗುಂಡುತೋಪು ಜಾಗವಾಗಿದ್ದು, ಅಲ್ಲಿನ 1.24 ಎಕರೆ ಭೂಮಿಯಲ್ಲಿ ಈ ದತ್ತು ಸಮಿತಿಯ ಹೆಸರಿನಲ್ಲಿ ಬಂದ ವಿರೂಪಾಕ್ಷಪ್ಪ ಅವರು ಹಾಗೂ ಅವರ ಪತ್ನಿ ಗಾಯತ್ರಿ ಅವರು ತಲಾ ಒಂದೊಂದು ನಿವೇಶನವನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಸುಮಾರು 20 ಗುಂಟೆ ಜಾಗವನ್ನು ಕಬಳಿಸಿದ್ದಾರೆ. ಇದರ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸಿ ಶಾಲಾ ಜಾಗವನ್ನು ಉಳಿಸಬೇಕು. ಇದಕ್ಕೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಹಾಗೂ ವಿಶೇಷವಾಗಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ಶಿವಮೊಗ್ಗ ಹಾಗೂ ಉಪ ವಿಭಾಗ ಭದ್ರಾವತಿ ಅವರ ವಿರುದ್ಧವೂ ಸಹ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.


ಗ್ರಾಮ ಪಂಚಾಯಿತಿಯವರು ದಾಖಲೆಗಳನ್ನು ಸರಿಯಾಗಿ ನೋಡದೆ ಬೇಕಾಬಿಟ್ಟಿ ನಿವೇಶನವನ್ನು ಕೊಟ್ಟದ್ದಲ್ಲದೆ, ಸರ್ಕಾರಿ ಶಾಲೆಯ ಕೆಲಸ ಆಗದಿದ್ದರೂ ಇದಕ್ಕೆ ಅನುಮತಿ ನೀಡಿ ಹಣ ಕಬಳಿಸಲು ಪ್ರೇರಣೆ ನೀಡಿದ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಸಹ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!