ಅಯೋಧ್ಯೆಯಲ್ಲಿ ಆಯೋಜಿಸಿದ್ದ 61ನೇ ಅಖಿಲ ಭಾರತ ಸಂಸ್ಕೃತ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ಮಹಿಷಿ ವಂಶರಾಮ ಭಟ್ಟ ಪ್ರಥಮ ಸ್ಥಾನ ಪಡೆದಿದ್ದು, ಚಿನ್ನದ ಪದಕ, ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು. ಅಯೋಧ್ಯೆಯ ಶ್ರೀರಾಮನ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ ಜೀ, ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಶ್ರೀನಿವಾಸ ವರಖೇಡಿ ಇದ್ದರು.
ಶಿವಮೊಗ್ಗ,ಮಾ.25:
ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ಅಯೋಧ್ಯೆಯಲ್ಲಿ ಆಯೋಜಿಸಿದ್ದ 61ನೇ ಅಖಿಲ ಭಾರತ ಶಾಸ್ತ್ರೀಯ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಮಹಿಷಿ ವಂಶರಾಮ ಭಟ್ಟ ಭಾರತೀಯ ವಿಜ್ಞಾನ ಭಾಷಣ ಸ್ಪರ್ಧೆ ( ಸಾಖ್ಯ ಯೋಗ – ವಿಷಯ)ಯಲ್ಲಿ ಪ್ರಥಮ ಸ್ಥಾನದೊಂದಿಗೆ ಸ್ವರ್ಣ ಪದಕ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗೆ ಪ್ರಶಂಸಾ ಪತ್ರದೊಂದಿಗೆ 12,000 ರೂ.ನಗದು ಬಹುಮಾನವನ್ನೂ ನೀಡಿ ಗೌರವಿಸಲಾಗಿದೆ.
ಹಾಸನ ಜಿಲ್ಲೆ ಹೊಳೆನರಸೀಪುರದ ಶ್ರೀಮನ್ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಧರ್ಮ ವಿದ್ಯಾಪೀಠದ ವಿದ್ಯಾರ್ಥಿಯಾಗಿರುವ ಈತ ಅತ್ಯಮೋಘವಾಗಿ ವಿಷಯ ಮಂಡಿಸಿ ಬಂಗಾರದ ಪದಕ ಗಳಿಸುವುದರೊಂದಿಗೆ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾನೆ ಎಂಬುದು ವಿಶೇಷ. ಗುರುಗಳಾದ ಪಂಡಿತ ವಿಜಯ ವಿಠಲಾಚಾರ್ಯರಲ್ಲಿ ನ್ಯಾಯ, ಮೀಮಾಂಸಾ, ವ್ಯಾಕರಣ, ವೇದಾಂತಾದಿ ಶಾಸ್ತ್ರ ಪಾಠ ಕಲಿಯುತ್ತಿರುವ ಈತ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮಹಿಷಿಯ ಶ್ರೀ ಸತ್ಯಸಂಥ ತೀರ್ಥರ ವೃಂದಾವನ ಕ್ಷೇತ್ರದ ಅರ್ಚಕ ಪಂಡಿತ ಕುಮಾರಾಚಾರ್ಯ ಮತ್ತು ವಿಜಯಲಕ್ಷ್ಮೀ ದಂಪತಿಗಳ ಪುತ್ರ.
ರಾಜ್ಯಕ್ಕೆ ಹೆಮ್ಮೆ :
ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗದ 30ಕ್ಕೂ ಹೆಚ್ಚು ಸಂಸ್ಕೃತ ಪಾಠಶಾಲೆ, ಗುರುಕುಲಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾರಂಭದಲ್ಲಿ ಅಯೋಧ್ಯೆಯ ಶ್ರೀರಾಮನ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ ಜೀ, ಶ್ರೀ ರಾಮಜನ್ಮಭೂಮಿ ನ್ಯಾಸದ ಅಧ್ಯಕ್ಷ ನೃತ್ಯ ಗೋಪಾಲದಾಸ ಸ್ವಾಮೀಜಿ, ರಾಮ ಜನ್ಮಭೂಮಿ ನ್ಯಾಸ ಕ್ಷೇತ್ರದ ಮಹಾಸಚಿವ ಚಂಪತ್ ರಾಯ, ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಶ್ರೀನಿವಾಸ ವರಖೇಡಿ ಬಹುಮಾನ ವಿತರಿಸಿದರು. ದೇಶದ ವಿವಿಧ ಭಾಗದ ಹಿರಿಯ ವಿದ್ವಾಂಸರು ತೀರ್ಪುಗಾರರಾಗಿ ಆಗಮಿಸಿದ್ದರು.
ರಾಜ್ಯದ ಪ್ರತಿನಿಧಿ:
ವಂಶರಾಮ ಭಟ್ಟ ಬೆಂಗಳೂರಿನ ಸಂಸ್ಕೃತ ವಿವಿಯಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದ. ಕರ್ನಾಟಕವನ್ನು ಪ್ರತಿನಿಧಿಸಿದ ಈತನಿಗೆ ರಾಷ್ಟ್ರಮಟ್ಟದಲ್ಲೂ ಮಾನ್ಯತೆ ದೊರಕಿರುವುದನ್ನು ಹೆಮ್ಮೆಯ ಸಂಗತಿ.