ಶಿವಮೊಗ್ಗ, ಮಾರ್ಚ್ ೧೮ : : ಭಾರತ ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ನಡೆಸಲು ಭಾರತ ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸಿದ್ದು, ನೀತಿ ಸಂಹಿತೆಯು ೨೦೨೪ರ ಮಾಚ್-೧೬ ರಿಂದ ಜೂನ್ ೦೬ರವರೆಗೆ ಜಾರಿಯಲ್ಲಿರುವುದರಿಂದ ಎಲ್ಲಾ ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಸ್ತ್ರ/ಆಯುಧಗಳನ್ನು ಹೊಂದಿರುವವರು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶಿಸಿದ್ದಾರೆ.
ಠೇವಣಿಯಲ್ಲಿ ಇಡಲಾಗುವ ಶಸ್ತ್ರ/ಆಯುಧಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಯ ಅಧಿಕಾರಿಗಳು ಸುರಕ್ಷಿತವಾಗಿ ಇಟ್ಟುಕೊಳ್ಳುವುದಲ್ಲದೇ ಠೇವಣಿ ಮಾಡಿದ ಶಸ್ತ್ರ/ಆಯುಧ ಪರವಾನಿಗೆದಾರರಿಗೆ ಸೂಕ್ತ ರಸೀದಿಯನ್ನು ನೀಡುವಂತೆ ಸೂಚಿಸಿರುವ ಅವರು ಚುನಾವಣೆ ಫಲಿತಾಂಶ ಘೋಷಿಸಿದ ನಂತರ ಅಂದರೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಡಿಪಾಜಿಟ್ ಮಾಡಿದ ಪರವಾನಿಗೆಯನ್ನು ಹಿಂದಿರುಗಿಸಲು ಸೂಚಿಸಿದ್ದಾರೆ. ಚುನಾವಣೆಯು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಯಬೇಕಾಗಿರುವುದರಿಂದ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
ಧಾರ್ಮಿಕ ಸಂಸ್ಥೆಗಳು, ಸರ್ಕಾರಿ/ಅರೆಸರ್ಕಾರಿ ಮತ್ತು ಸರ್ಕಾರೇತರ ಖಾಸಗಿ ಸಂಸ್ಥೆಗಳಲ್ಲಿ ಭದ್ರತೆಗಾಗಿ ಆಯುಧಗಳನ್ನು ಹೊಂದಿರುವವರು ಹಾಗೂ ವೈಯುಕ್ತಿಕವಾಗಿ ಜೀವ ಬೆದರಿಕೆ ಹೊಂದಿರುವವರು ಆಯುಧಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುವ ಅನಿವಾರ್ಯತೆಗಳು ಇದ್ದಲ್ಲಿ ಇಂತಹ ಶಸ್ತ್ರ ಪರವಾನಿಗೆದಾರರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಅರ್ಜಿ ಸಲ್ಲಿಸತಕ್ಕದ್ದು, ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಗಳನ್ನು ಎಲ್ಲಾ ಪೊಲೀಸ್ ಠಾಣಾಧಿಕಾರಿಗಳು ತಮ್ಮ ಮೇಲಾಧಿಕಾರಿಗಳಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆಗಳನ್ನು ಸಲ್ಲಿಸುವುದು. ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಗಳನ್ನು ಜಿಲ್ಲಾ ಸ್ಕ್ರೀನಿಂಗ್ ಕಮಿಟಿ ಸದಸ್ಯರಾದ ಜಿಲ್ಲಾ ಪೊಲೀಸ್ ಅಧೀಕ್ಷಕರು ಈ ಅರ್ಜಿಗಳನ್ನು ಕಮಿಟಿ ಮುಂದೆ ಮಂಡಸಿ ಅರ್ಜಿಗಳ ಅರ್ಹತೆಯ ಮೇರೆಗೆ ಪರಿಶೀಲಿಸಿ ಸಮಿತ ನಿರ್ನಯದಂತೆ ವಿನಾಯಿತಿ ನೀಡುವ ಬಗ್ಗೆ ಕ್ರಮವಹಿಸುವಂತೆ ಆದೇಶದಲ್ಲಿ ತಿಳಿಸಿದೆ.
ಶಿವಮೊಗ್ಗ ಜಿಲ್ಲೆಯ ಚುನಾವಣಾ ಘೋಷಿತ ಯಾವುದೆ ಪ್ರದೇಶಗಳಲ್ಲಿ ಹೊರಗಿನ ಅಥವಾ ಯಾವುದೇ ವ್ಯಕ್ತಿಗಳು ಶಸ್ತ್ರ/ಬಂದೂಕು ಹಿಡಿದುಕೊಂಡು ತಿರುಗಾಡುವುದನ್ನು ನಿಷೇಧಿಸಿದೆ. ೧೧೧-ಶಿವಮೊಗ್ಗ ಗ್ರಾಮಾಂತರ, ೧೧೨-ಭದ್ರಾವತಿ, ೧೧೩- ಶಿವಮೊಗ್ಗ, ೧೧೪- ತೀರ್ಥಹಳ್ಳಿ, ೧೧೫-ಶಿಕಾರಿಪುರ, ೧೧೬-ಸೊರಬ ಹಾಗೂ ೧೧೭-ಸಾಗರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಬ್ಯಾಂಕುಗಳು ಮತ್ತು ಫ್ಯಾಕ್ಟರಿಗಳ ಭದ್ರತೆಗೋಸ್ಕರ ಆಯುಧಗಳನ್ನು ಹೊಂದಿರುವವರಿಗೆ ಈ ಆದೇಶದಿಂದ ವಿನಾಯಿತಿ ನೀಡಿದೆ.