ಶಿವಮೊಗ್ಗ,ಮಾ.18:
ಸುಳ್ಳು ಹೇಳುವುದೇ ಕಾಂಗ್ರೆಸ್ ಹುಟ್ಟುಗುಣವಾಗಿದೆ. ದಿನಕ್ಕೊಂದು ಸುಳ್ಳು, ಕ್ಷಣಕ್ಕೊಂದು ಸುಳ್ಳನ್ನು ಹೇಳುತ್ತಾ ಬರುತ್ತಿದ್ದಾರೆ. ಹೊಸ ಹೊಸ ಸುಳ್ಳುಗಳೇ ಅವರ ಅಭ್ಯಾಸವಾಗಿದೆ. ಜನರಿಂದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ಸಿಗರು ಭ್ರಷ್ಟಚಾರದಲ್ಲಿ ತೊಡಗಿ ಕೇಂದ್ರದ ಕಾಂಗ್ರೆಸ್ಸಿಗೆ ಹಣ ನೀಡುವ ಎಟಿಎಂ ಆಗಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಎಂದು ಆರೋಪಿಸಿದರು.
ಅವರು ಇಂದು ಮದ್ಯಾಹ್ನ ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ಬಡತನ ತೊಲಗಿಸಲು, ಭ್ರಷ್ಟಚಾರ ದೂರ ಮಾಡಲು, ಕೃಷಿ ಕಾರ್ಮಿಕರಿಗೆ, ಯುವಕರಿಗೆ ಶಕ್ತಿ ತುಂಬಲು ಕರ್ನಾಟಕದ ೨೮ ಸ್ಥಾನಗಳು ಸೇರಿದಂತೆ ಇಡೀ ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು 400 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ಕಳೆದ 10 ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ, ಬಡವರ ಕಲ್ಯಾಣ ಮಾಡಿದೆ. ಸಮರ್ಥ ಬಲಿಷ್ಟ ರಾಷ್ಟ್ರವನ್ನು ಕಟ್ಟಿದೆ. ರಾಷ್ಟ್ರದ ಬಗ್ಗೆ ಕಾಂಗ್ರೆಸ್ಸ್‌ನಲ್ಲಿ ಅಜೆಂಡಾವೇ ಇಲ್ಲ ಎಂದು ದೂರಿದರು.
ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಅವರು ಶಿವಮೊಗ್ಗದ ಜನತೆಗೆ ನನ್ನ ನಮಸ್ಥಾರಗಳು ಸಿಗಂಧೂರು ದೇವಿಗೆ ನನ್ನ ಪ್ರಣಾಮಗಳು, ಇದು ರಾಷ್ಟ್ರ ಕವಿ ಕುವೆಂಪು ಹುಟ್ಟಿದ ನಾಡು, ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ನನ್ನ ಮೇಲೆ ಇರಲಿ, ಬಿಜೆಪಿಗೆ ಅಪಾರ ಬೆಂಬಲ ಕೊಡಿ. ಕರ್ನಾಟಕದ ಅಭಿವೃದ್ಧಿಗಾಗಿ ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲು ಪ್ರಾರ್ಥನೆ ಮಾಡಿ ಶಕ್ತಿ ತುಂಬಿ ಎಂದರು.
ಶಿವಮೊಗ್ಗದಲ್ಲಿ ಬಿ.ಎಸ್.ಯಡಿಯೂರಪ್ಪನವರು ಕಟ್ಟಿ ಬೆಳೆಸಿದ್ದಾರೆ. ನಗರ ಸಭೆಯಲ್ಲಿ ಸ್ಪರ್ಧಿಸಲು ಹಿಂದೆ ಮುಂದೆ ನೋಡುತ್ತಿದ್ದ ಬಿಜೆಪಿಯನ್ನು ಈಗ ಅಲ್ಲಿ ಕಟ್ಟಿ ಪಕ್ಷವನ್ನು ಬೆಳೆಸಿದ್ದಾರೆ. ಈಗ ಶಿವಮೊಗ್ಗ ಬಿಜೆಪಿಯ ತಪೋಭೂಮಿಯೇ ಆಗಿದೆ. ಕರ್ನಾಟಕದಲ್ಲಿ ೨೮ ಕ್ಷೇತ್ರಗಳನ್ನು ಎನ್‌ಡಿಎ ನೇತೃತ್ವದ ಬಿಜೆಪಿ ಗೆಲ್ಲಬೇಕು ಎಂದರು.
ನಾರಿ ಶಕ್ತಿಯ ಬಗ್ಗೆ ಇಂಡಿಯಾ ಗ್ರೂಪ್‌ನವರು ಅವಹೇಳನ ಮಾಡುತ್ತಿದ್ದಾರೆ. ಅದಕ್ಕೆ ತಕ್ಕ ಉತ್ತರವನ್ನು ನಾರಿಯರು ತಕ್ಕ ಉತ್ತರ ನೀಡಬೇಕು. ಬಿಜೆಪಿಯನ್ನು ಗೆಲ್ಲಿಸಬೇಕು. ಕರ್ನಾಟಕದ ವಿಶ್ವಕವಿ ಕುವೆಂಪುರವರೇ ನಾರಿಯನ್ನು ಹಾಡಿಹೊಗಳಿದ್ದಾರೆ. ಅಂತಹ ನಾಡಿನಲ್ಲಿರುವ ನಾರಿಯರು ಇಂಡಿಯ ಗ್ರೂಪ್‌ರವರ ಹೇಳಿಕೆಗೆ ತಕ್ಕ ಉತ್ತರಕೊಡಿ.
ಶಿವಮೊಗ್ಗದ ಬಿ.ವೈ.ರಾಘವೇಂದ್ರ, ದಾವಣಗೆರೆಯ ಗಾಯಿತ್ರಿ ಸಿದ್ದೇಶ್, ಚಿಕ್ಕಮಗಳೂರಿನ ಕೋಟಾ ಶ್ರೀನಿವಾಸ್ ಪೂಜಾರಿ, ಬೆಂಗಳೂರು ಗ್ರಾಮಾಂತರದ ಡಾ. ಮಂಜುನಾಥ್ ಸೇರಿದಂತೆ ಎಲ್ಲಾ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಪ್ರಧಾನಿ ಮೋದಿಯವರಿಗೆ ನಾನು ಮಾತುಕೊಡುತ್ತೇನೆ. ಕರ್ನಾಟಕದ ಎಲ್ಲಾ28 ಕ್ಷೇತ್ರಗಳನ್ನು ಗೆದ್ದು ಆ ಸಂಸದರನ್ನು ನಿಮ್ಮ ಬಳಿಗೆ ಕರೆದುಕೊಂಡು ಬರುತ್ತೇನೆ ಎಂದು ವಾಗ್ದಾನ ಮಾಡಿದರು.
ಚುನಾವಣಾ ರಣಾ ಕಹಳೆ ಮೊಳಗಿದೆ. ಕೇಂದ್ರ ಸರ್ಕಾರದ ಸಾಧನೆಗಳು, ಅಭಿವೃದ್ಧಿಗಳು ಮೋದಿಯ ರಾಷ್ಟ್ರ ಭಕ್ತಿ ಇವೆಲ್ಲವೂ ಬಿಜೆಪಿಯನ್ನು ಗೆದ್ದೆ ಗೆಲ್ಲುಸುತ್ತವೆ. ಶ್ರೀರಾಮ ಮಂದಿರ ಸ್ಥಾಪನೆ, ೩೭೦ನೇ ವಿಧಿ ರದ್ದು, ಕರೋನದ ನಂತರವು ದೇಶದ ಆರ್ಥಿಕತೆ ಭದ್ರವಾಗಿದ್ದು, ಪ್ರಪಂಚದಲ್ಲಿಯೇ ಭಾರತ ೫ನೇ ಬಲಿಷ್ಟ ರಾಷ್ಟ್ರವಾಗಿದ್ದು, ಭಾರತದ ಹೆಮ್ಮೆಯ ಸಾಧನೆಯಾಗಿದೆ. ಇದು ವಿಶ್ವಗುರು ಪ್ರಧಾನಿಯವರ ಕೊಡುಗೆ ಎಂದರು.
೧೦ ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಒಂದೇ ಒಂದು ದಿನವು ವಿಶ್ರಾಂತಿ ಪಡೆಯಲಿಲ್ಲ. ಇಡೀ ದೇಶವನ್ನೇ ಸುತ್ತಿದ್ದರು ಭ್ರಷ್ಟಚಾರ ತೊಲಗಿಸಿದರು. ಆತಂಕವಾದವನ್ನು ಎದುರಿಸಿದರು. ಹಾಗೆಯೇ ಮಲೆನಾಡಿಗೆ ಅನೇಕ ಕೊಡುಗೆಯನ್ನು ಅವರು ನೀಡಿದ್ದಾರೆ. ಕಳೆದ ಬಾರಿ ವಿಮಾನ ನಿಲ್ದಾಣ ಉದ್ಘಾಟನೆಗೆ ಬಂದಾಗ ಹಲವು ಯೋಜನೆಗಳನ್ನು ಅವರು ಪ್ರಕಟಿಸಿದರು. ಅದರ ಪರಿಣಾಮವಾಗಿ ಮಲೆನಾಡಿನ ಆರ್ಥಿಕ ಚಟುವಟಿಕೆಗಳು ಇಂದು ಗರಿಗೆದುರಿವೆ ಎಂದರು.
ಮೋದಿಯವರು ರೈತರ ಮೊಗದಲ್ಲಿ ಹರ್ಷತಂದವರು. ಕೇಂದ್ರ ಸರ್ಕಾರದ ಸಮ್ಮಾನ್ ಯೋಜನೆಯಲ್ಲಿ ಪ್ರತಿ ರೈತರಿಗೆ ವರ್ಷಕ್ಕೆ ಆರು ಸಾವಿರ ನೀಡಿದರು. ಇದರ ಜೊತೆಗೆ ನಾನು ಮುಖ್ಯಮಂತ್ರಿಯಾಗಿದ್ದಾಗ ನಾಲ್ಕು ಸಾವಿರ ರೂ. ಸೇರಿಸಿ ಪ್ರತಿ ವರ್ಷ ರೈತರಿಗೆ 10 ಸಾವಿರ ರೂ.ಗಳನ್ನು ನೀಡುತ್ತಿದ್ದೇವು. ಆದರೆ ಈ ಕಾಂಗ್ರೆಸ್ ಸರ್ಕಾರ 4 ಸಾವಿರ ರೂ. ನಿಲ್ಲಿಸಿದೆ ಎಂದರು.
ವೇದಿಕೆಯಲ್ಲಿ ಗಣ್ಯರಾದ ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ, ಕೋಟಾ ಶ್ರೀನಿವಾಸ ಪೂಜಾರಿ, ಕುಮಾರ ಬಂಗಾರಪ್ಪ, ಸಿ.ಟಿ.ರವಿ, ಡಾ. ಮಂಜುನಾಥ್, ಸಿದ್ದೇಶ್, ಸಿದ್ದೇಶ್ ಗಾಯಿತ್ರಿ, ಎಸ್.ಎನ್. ಚೆನ್ನಬಸಪ್ಪ, ಡಿ.ಎಸ್.ಅರುಣ್, ಭಾರತೀಶೆಟ್ಟಿ, ಶಾರದಾ ಪೂರ‍್ಯಾನಾಯ್ಕ್, ಶಾರದ ಅಪ್ಪಾಜಿ, ಕೆ.ಬಿ.ಪ್ರಸನ್ನಕುಮಾರ್, ಹರೀಶ್, ದತ್ತಾತ್ರಿ, ಆರ್.ಕೆ.ಸಿದ್ರಾಮಣ್ಣ, ಅಶೋಕ್ ನಾಯಕ್, ಆರಗಜ್ಞಾನೇಂದ್ರ, ಹರತಾಳು ಹಾಲಪ್ಪ, ಟಿ.ಡಿ.ಮೇಘರಾಜ್, ನವೀನ್,ಅಂಬಿಕಾ, ಶಿಲ್ಪ, ಗಾಯಿತ್ರಿ ಮಲ್ಲಪ್ಪ, ರಾಧ ಮೋಹನ್, ಕೆ.ನಾರಾಯಣ್, ಬ್ರಿಜೇಶ್, ಗುರುರಾಜ್ ಬೈಂದೂರು ಸೇರಿದಂತೆ ಹಲವರಿದ್ದರು.