ಸಾಗರ : ಸಂವಿಧಾನ ಬದಲಾಯಿಸುವ ಪ್ರಸ್ತಾಪ ತೆಗೆಯುತ್ತಿರುವ ನೀಚರಿಗೆ ದಲಿತ ಸಂಘರ್ಷ ಸಮಿತಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದ್ದಾರೆ.
ಇಲ್ಲಿನ ಅಣಲೆಕೊಪ್ಪದ ಡಿ.ಎಸ್.ಎಸ್. ಸಮುದಾಯ ಭವನದಲ್ಲಿ ಗುರುವಾರ ದಲಿತ ಸಂಘರ್ಷ ಸಮಿತಿಯ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಬಣದ ೫೦ನೇ ವರ್ಷದ ಸಂಭ್ರಮಾಚರಣೆಯನ್ನು ಕಂಜರ್ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ ಎಲ್ಲರಿಗೂ ಒಟ್ಟಾಗಿ ಬದುಕುವ ಸಮಾನತೆಯ ಹಕ್ಕು ನೀಡಿದೆ. ಅಂತಹ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ನೀಡುತ್ತಿರುವ ಹೇಳಿಕೆ ಅಕ್ಷಮ್ಯದ್ದಾಗಿದೆ. ದಲಿತ ಸಂಘರ್ಷ ಸಮಿತಿಗಳು ಇಂತಹ ಹೊತ್ತಿನಲ್ಲಿ ಸಂವಿಧಾನ ಬದಲಾವಣೆ ಪ್ರಸ್ತಾಪ ಮಾಡುತ್ತಿರುವವರಿಗೆ ಎಚ್ಚರಿಕೆ ನೀಡಬೇಕು. ಅಂಹತವರಿಗೆ ಬುದ್ದಿ ಕಲಿಸದೆ ಹೋದರೆ ಅವರು ತಮ್ಮ ಮಾತನ್ನು ನಿಲ್ಲಿಸುವುದಿಲ್ಲ. ಭಾರತದ ಸಂವಿಧಾನ ಅತ್ಯಂತ ಶ್ರೇಷ್ಟವಾಗಿದ್ದು ಸಮಾನತೆ ಹಕ್ಕು ನೀಡಿದೆ. ಸಂವಿಧಾನದ ಆಶಯಕ್ಕೆ ತಕ್ಕಂತೆ ಬದುಕು ನಡೆಸುವುದು ನಮ್ಮೆಲ್ಲರ ಆದ್ಯಕರ್ತವ್ಯ ಎಂದು ಹೇಳಿದರು.
ಪ್ರೊ. ಬಿ. ಕೃಷ್ಣಪ್ಪನವರು ದಲಿತ ಸಮುದಾಯಕ್ಕದ ಧ್ವನಿಯಾಗಬೇಕು ಎನ್ನುವ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಐದು ದಶಕಗಳ ಹಿಂದೆ ಕಟ್ಟಿದ್ದಾರೆ. ಇಂದು ದಲಿತ ಸಂಘರ್ಷ ಸಮಿತಿಯಲ್ಲಿ ಅನೇಕ ಬಣಗಳಿವೆ. ಎಷ್ಟೆ ಬಣಗಳಿದ್ದರೂ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವ ಸಂದರ್ಭ ಬಂದಾಗ ಎಲ್ಲರೂ ಒಟ್ಟಾಗಿ ಇರಬೇಕು. ಸಮುದಾಯದಲ್ಲಿ ಅನೇಕ ಪ್ರತಿಭಾಂತರು ಇದ್ದಾರೆ. ಅವರಿಗೆ ನಿಮ್ಮ ಸಂಘಟನೆಗಳು ಸೂಕ್ತ ಮಾರ್ಗದರ್ಶನ ನೀಡುವಂತೆ ಆಗಬೇಕು. ಸಮುದಾಯದ ಯಾವೊಬ್ಬ ಮಗುವೂ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಿ ಎಂದು ಕರೆ ನೀಡಿದರು.
ದಲಿತ ಸಂಘಟನೆಯ ಹಿರಿಯ ಮುಖಂಡ ಶಿವಾನಂದ ಕುಗ್ವೆ ಮಾತನಾಡಿ, ಐದು ದಶಕಗಳ ಹಿಂದೆ ದಲಿತ ಚಳುವಳಿಗೆ ನನ್ನಂತಹ ಅನೇಕ ಜನರು ರಾಜ್ಯದಾದ್ಯಂತ ಸೇರುವಲ್ಲಿ ಪ್ರೊ. ಬಿ. ಕೃಷ್ಣಪ್ಪ ಅವರ ಪಾತ್ರ ಪ್ರಮುಖವಾಗಿದೆ. ರಾಜ್ಯದಲ್ಲಿ ಅನೇಕ ಚಳುವಳಿಗಳು ಹುಟ್ಟಿದ್ದು, ಹಾಗೇ ನೇಪಥ್ಯಕ್ಕೂ ಸರಿದಿದೆ. ಆದರೆ ಪ್ರೊ. ಬಿ. ಕೃಷ್ಣಪ್ಪ ಅವರು ಹುಟ್ಟು ಹಾಕಿರುವ ದಲಿತ ಚಳುವಳಿ ಐದು ದಶಕ ಕಳೆದರೂ ತನ್ನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅದೇ ಧ್ವನಿಯಲ್ಲಿ ನೊಂದವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ದಲಿತ ಸಂಘರ್ಷ ಸಮಿತಿಗಳು ಮಾಡುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು. ಪ್ರೊ. ಬಿ.ಎಲ್.ರಾಜು ಉಪನ್ಯಾಸ ನೀಡಿದರು. ಸಮಿತಿ ತಾಲ್ಲೂಕು ಸಂಚಾಲಕ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಚಾಲಕ ಗುರುಮೂರ್ತಿ, ಪ್ರಮುಖರಾದ ನಾರಾಯಣ ಮಂಡಗಳಲೆ, ಚಂದ್ರಪ್ಪ ಎಲ್., ಎಂ. ಏಳುಕೋಟಿ, ಸೈಯದ್ ಜಾಕೀರ್, ಮೋಹನ್ ಮೂರ್ತಿ, ಶಿವಪ್ಪ, ರಂಗಪ್ಪ ಹೊನ್ನೆಸರ, ನಾರಾಯಣ ಗೋಳಗೋಡು ಇನ್ನಿತರರು ಹಾಜರಿದ್ದರು.