ಶಿವಮೊಗ್ಗ,ಮಾ.13:
ಶಿವಮೊಗ್ಗದ ಎನ್.ಯು. ಆಸ್ಪತ್ರೆಯಲ್ಲಿ ರಕ್ತದ ಗುಂಪು ಹೊಂದಾಣಿಕೆಯಾಗದ ವ್ಯಕ್ತಿಗಳಿಗೂ ಕೂಡ ಕಿಡ್ನಿ ಟ್ರಾನ್ಸ್ ಪ್ಲಾಂಟ್ (ಮೂತ್ರ ಪಿಂಡ ಕಸಿ) ಮಾಡಬಹುದು. ಈಗಾಗಲೇ 10ಕ್ಕೂ ಹೆಚ್ಚು ಮೂತ್ರ ಪಿಂಡ ಕಸಿಯನ್ನು ನಾವು ಯಶಸ್ವಿಯಾಗಿ ಮಾಡಿದ್ದೇವೆ ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ. ಪ್ರವೀಣ್ ಮಾಳವದೆ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದ ಮೂತ್ರಿ ಪಿಂಡ ಸಮಸ್ಯೆಗಳ ರೋಗಿಗಳಿಗೆ ಎನ್.ಯು. ಆಸ್ಪತ್ರೆ ದಾರಿ ದೀಪವಾಗಿದೆ. ಕಳೆದ 2023ರ ಏಪ್ರಿಲ್ ನಿಂದ ಇಲ್ಲಿಯವರೆಗೆ 10 ಮೂತ್ರ ಪಿಂಡ ಕಸಿಯನ್ನು ಅತಿ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಮಾಡಿದ್ದೇವೆ. ಮಲೆನಾಡಿಗರ ಪಾಲಿಗೆ ಇದೊಂದು ಸಂತಸದ ಸುದ್ದಿಯೇ ಆಗಿದೆ. ದೂರದ ಆಸ್ಪತ್ರೆಗಳಿಗಿಂತ ಹೆಚ್ಚು ನಿಖರವಾಗಿ ಮತ್ತು ಯಶಸ್ವಿಯಾಗಿ ನಾವು ಶಸ್ತ್ರ ಚಿಕಿತ್ಸೆ ಮಾಡಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದೇವೆ ಎಂದರು.
ಇದುವರೆಗೂ ಮೂತ್ರ ಪಿಂಡ ಕಸಿಯಲ್ಲಿ ರಕ್ತದ ಗುಂಪು ಒಂದೇ ಆಗಬೇಕಿತ್ತು. ಆದರೆ ಈಗ ಹೊಸ ಸಾಧ್ಯತೆ ಆವಿಷ್ಕಾರದ ಮೂಲಕ ಹೊಂದಾಣಿಕೆಯಾಗದ ರಕ್ತದ ಗುಂಪಿನ ವ್ಯಕ್ತಿಗಳಿಗೆ ಮೂತ್ರಪಿಂಡ ಕಸಿ ಮಾಡುತ್ತೇವೆ. ಇದೊಂದು ಅತ್ಯುತ್ತಮ ಬೆಳವಣಿಗೆಯಾಗಿದೆ. ಇದಲ್ಲದೇ, ಮೂತ್ರ ಪಿಂಡಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಚಿಕಿತ್ಸೆ ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿದೆ. ವಿಶ್ವ ಕಿಡ್ನಿ ದಿನ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಹೊಸ ಸಾಧ್ಯತೆಗಳನ್ನು ಪರಿಚಯಿಸುತ್ತಿದ್ದೇವೆ. ನಮ್ಮ ಆಸ್ಪತ್ರೆಯ ಧ್ಯೇಯ ಮತ್ತು ವಿಶ್ವ ಕಿಡ್ನಿ ದಿನದ ಧ್ಯೇಯ ಎರಡೂ ಒಂದೇ ಆಗಿದೆ ಎಂದರು.
ಶಸ್ತ್ರ ಚಿಕಿತ್ಸ ಡಾ. ಪ್ರದೀಪ್ ಎಂ.ಜಿ. ಮಾತನಾಡಿ, ಎನ್.ಯು. ಆಸ್ಪತ್ರೆಯಲ್ಲಿ 24*7 ಲಭ್ಯವಿರುವ ವೈದ್ಯಕೀಯ ತೀವ್ರ ನಿಗಾ ಘಟಕವನ್ನು ಸ್ಥಾಪಿಸಿದ್ದೇವೆ. ಆ ಮೂಲಕ ಆಸ್ಪತ್ರೆಯ ಸಮರ್ಥ ವೈದ್ಯರ ತಂಡ ಎಲ್ಲಾ ಸಮಯದಲ್ಲಿಯೂ ರೋಗಿಗೆ ಅಗತ್ಯವಿರುವ ಸಮಗ್ರ ಚಿಕಿತ್ಸಾ ಸೇವೆ ನೀಡುತ್ತದೆ. ಜೊತೆಗೆ ಮೂತ್ರ ಪಿಂಡಕ್ಕೆ ಸಂಬಂಧಿಸಿದಂತೆ ಜಾಗೃತಿಯನ್ನು ಸಹ ಮೂಡಿಸಲಾಗುತ್ತಿದೆ. ಇಲ್ಲಿ ಅತ್ಯಾಧುನಿಕ ಸೌಲಭ್ಯಗಳಿವೆ. ತಜ್ಞ ವೈದ್ಯರಿದ್ದಾರೆ. ಸೂಕ್ತ ಚಿಕಿತ್ಸೆಯೂ ಇದೆ ಎಂದರು.
ಹೆಚ್ಚಿನ ವಿವರಗಳಿಗೆ 63644 09651, 63644 66240 ಸಂಪರ್ಕಿಸಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಡಾ. ಅನುಷಾ, ಡಾ. ಅಭಿಲಾಶ್, ಪಿ.ಆರ್.ಒ. ರಫೀಕ್ ಇದ್ದರು.