ಶಿವಮೊಗ್ಗ,ಮಾ.12:
ಇಲ್ಲಿನ ಗಾಂಧಿಬಜಾರಿನ ತವರುಮನೆಗೆ ಬಂದ ಶ್ರೀಮಾರಿಕಾಂಬೆಯನ್ನು ಬ್ರಾಹ್ಮಣ ಸಮಾಜ ನಾಡಿಗ ಕುಟುಂಬದವರು ಮಂಗಳವಾದ್ಯದೊಂದಿಗೆ ಬರಮಾಡಿಕೊಂಡು ವಿಶೇಷ ಪೂಜೆಯನ್ನು ನೆರವೇರಿಸಿದರು.
ಸುಮಾರು ಬೆಳಗಿನ ಜಾವ 5 ಗಂಟೆಗೆ ಶ್ರೀಮಾರಿಕಾಂಬೆ ತವರುಮನೆಗೆ ಆಗಮಿಸಿದಳು. ನಾಡಿಗ ಕುಟುಂಬ ಮುತೈದೈಯರು ಮಂಗಳದ್ರವ್ಯಾಧಿಗಳೊಂದಿಗೆ ಮೆರವಣಿಗೆಯಲ್ಲಿ ಬಾಸಿಂಗದ ಜೊತೆಗೆ ಬಂದು ಮಾರಿಕಾಂಬೆಗೆ ಉಡಿ ತುಂಬಿ ಪೂಜೆ ಸಲ್ಲಿಸಿದರು. ಅಲ್ಲಿ ತುಂಬಾ ಹೊತ್ತು ಜನಜಂಗುಳಿಯಲ್ಲಿ ಕಾಲ ಕಳೆಯಿತು.
ನಂತರ ವಿಶ್ವಕರ್ಮ ಸಮಾಜದವರು ಸಾರ್ವಜನಿಕವಾಗಿ ಪೂಜೆಯನ್ನು ಆರಂಭಿಸಿದರು. ಬೆಳಿಗ್ಗೆ ಏಳೂ ನಲವತ್ತಕ್ಕೆ ಅಮ್ಮ ದರುಶನ ತೋರಿದಳು.
ದೇವಿಯೂ ಇಂದು ರಾತ್ರಿ 10 ಗಂಟೆಯವರೆಗೂ ತವರುಮನೆಯಲ್ಲಿಯೇ ಇದ್ದು, ಲಕ್ಷಾಂತರ ಮುತೈದೈಯರಿಂದ ಮಡ್ಲಕ್ಕಿ ಸ್ವೀಕರಿಸುವಳು. ನಂತರ ಅವಳ ಪಯಣ ಕೋಟೆ ಶ್ರೀಮಾರಿಕಾಂಬಾ ಗದ್ದುಗೆಯತ್ತ ಸಾಗಲಿದೆ. ಆ ಮಧ್ಯೆ ಉಪ್ಪಾರ ಸಮಾಜದವರು ಗದ್ದುಗೆಗೆ ತಂದು ಪ್ರತಿಷ್ಠಾಪಿಸುತ್ತಾರೆ. ಅಷ್ಟರೊಳಗೆ ಗಂಗಾಮತಸ್ಥ ಸಮಾಜದವರು ಗಂಗಾ ಪರಮೇಶ್ವರಿ ದೇವಸ್ಥಾನದಿಂದ ಗಂಗಾಪೂಜೆಯೊಂದಿಗೆ ಅಮ್ಮನವರನ್ನು ಮಂಗಳವಾದ್ಯದೊಂದಿಗೆ ಎದುರುಗೊಂಡು ಗದ್ದುಗೆಗೆ ಕಳಿಸಿಕೊಡುತ್ತಾರೆ.
ತವರುಮನೆಗೆ ಬಂದಿದ್ದ ಮಾರಿಕಾಂಬೆ ಅಮ್ಮನವರ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಇಂದು ಭಕ್ತರು ಸರತಿಯ ಸಾಲಿನಲ್ಲಿ ನಿಂತುಕೊಂಡಿದ್ದರು. ಕೆಲವರು ಮದ್ಯ ರಾತ್ರಿಯಿಂದ, ಮತ್ತೆ ಕೆಲವರು ಬೆಳಗ್ಗೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ಜನ ನಿಂತಿದ್ದರು. ಗಾಂಧಿಬಜಾರಿನಿಂದ ಬಿ.ಹೆಚ್.ರಸ್ತೆಯ ಸೈನ್ಸ್ ಮೈದಾನದವರೆಗೂ ಸರತಿ ಸಾಲಿತ್ತು. ಅಮ್ಮನವರ ಪೂಜೆ ಅರ್ಧ ಗಂಟೆ ತಡವಾಗಿ ಆರಂಭವಾಗಿದ್ದರಿಂದ ಸರತಿ ಸಾಲು ಮತ್ತಷ್ಟು ಉದ್ದವಾಯಿತು. ಸುಮಾರು 4-5 ಗಂಟೆಗಳ ನಂತರ ಅಮ್ಮನವರ ದರ್ಶನ ಸಿಕ್ಕಿತ್ತು.
ತವರು ಮನೆಯಿಂದ ಬಂದಿದ್ದ ಅನೇಕ ಹೆಣ್ಣು ಮಕ್ಕಳು ದೇವಿಯ ದರ್ಶನ ಪಡೆದು ಕೃತಾರ್ಥರಾದರು. ಸೀರೆ, ಮಂಡ್ಲಕ್ಕಿ ನೀಡಿ ಉಡಿ ತುಂಬುವ ಮೂಲಕ ದೇವಿಯ ದರ್ಶನ ಪಡೆದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಅಲ್ಲಲ್ಲಿ ಪಾನಕ, ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಎಂದಿನಂತೆ ಪೊಲೀಸ್ ಬಂದೋಬಸ್ತ್ ಇತ್ತು. ವಿಶೇಷ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿತ್ತು. 200 ರೂ. ಶುಲ್ಕದ ವಿಶೇಷ ದರ್ಶನ ಪಡೆಯಲು ಕೂಡ ಸರತಿ ಸಾಲಿತ್ತು. ಅಂಗವಿಕಲರಿಗೆ ಮತ್ತು ತುಂಬುಗರ್ಭಿಣಿಯರಿಗೆ ನೇರ ಅವಕಾಶ ಉಚಿತವಾಗಿಯೇ ಕಲ್ಪಿಸಲಾಗಿತ್ತು.
ಕುಸ್ತಿ ಪಂದ್ಯಾವಳಿ/ ಸಂಸರ ದರುಶನ
ಶಿವಮೊಗ್ಗ,ಮಾ.12: ಸಂಸದ ಬಿ.ವೈ.ರಾಘವೇಂದ್ರ ಅವರು ಇಂದು ಗಾಂಧಿಬಜಾರ್ನಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀಮಾರಿಕಾಂಬೆಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಅವರೊಂದಿಗೆ ವಿಧಾನಪರಿಷತ್ ಶಾಸಕರಾದ ಡಿಎಸ್ ಅರುಣ್, ಭಾರತಿ ಶೆಟ್ಟಿ, ಪ್ರಮುಖರಾದ ಸಂತೋಷ್ , ಮಾಲತೇಶ್, ದಿವಾಕರ್ ಶೆಟ್ಟಿ, ರಾಜೇಶ್ ಕಾಮತ್ ಮತ್ತಿತರರು ಇದ್ದರು.
ರಾಜ್ಕ ಮಟ್ಟದ ಕುಸ್ತಿ ಪಂದ್ಯಾವಳಿಯೂ ನಡೆಯಲಿದೆ. ಮಾ.15ರ ಮಧ್ಯಾಹ್ನ 3ಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಿದರೆ, ಮಾ.16ರಂದು ಮಧ್ಯಾಹ್ನ 3ಕ್ಕೆ ಸಂಸದ ಬಿ.ವೈ. ರಾಘವೇಂದ್ರ ಬಹುಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಬಹುಮಾನ ವಿತರಿಸುವರು. ಮಾ.17ರಂದು ಕೂಡ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ. ಈ ಸಮಾರಂಭವನ್ನು ಸಚಿವ ಎಸ್.ಮಧುಬಂಗಾರಪ್ಪ ಉದ್ಘಾಟಿಸುವರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು ಹಾಜರಿರುತ್ತಾರೆ ಎಂದು ಕುಸ್ತಿ ಸಮಿತಿ ಸಂಚಾಲಕ ಎನ್.ಉಮಾಪತಿ ತಿಳಿಸಿದ್ದಾರೆ.
ನಾಳೆ ಬೆಳಿಗ್ಗೆ 4 ಗಂಟೆಯ ಸುಮಾರಿಗೆ ವಿದ್ಯಾನಗರದ ಕರ್ಲ ಹಟ್ಟಿಯ ಹರಿಜನ ಸಮಾಜದವರು ಬೇವಿನ ಉಡುಗೆಯೊಂದಿಗೆ ಆಗಮಿಸಿ ಅಮ್ಮನವರನ್ನು ಗದ್ದುಗೆಗೆ ಪ್ರತಿಷ್ಠಾಪಿಸುತ್ತಾರೆ. ನಂತರ ವಿವಿಧ ಸಮಾಜದವರು ಪೂಜೆ ಸಲ್ಲಿಸುತ್ತಾರೆ. ಮಾ.16ರ ತನಕ ಲಕ್ಷಾಂತರ ಭಕ್ತರು ಮಾರಿಕಾಂಬೆಯ ದರ್ಶನ ಪಡೆಯಲಿದ್ದಾರೆ. ಮಾ.16ರ ರಾತ್ರಿ ಮಹಾಮಂಗಳರಾತಿ ನಂತರ ಅಮ್ಮನವರನ್ನು ವನಪ್ರವೇಶಕ್ಕೆ ಕಳುಹಿಸಿಕೊಡುವ ಮೂಲಕ ಹಬ್ಬಕ್ಕೆ ತೆರೆ ಬೀಳಲಿದೆ.