ಶಿವಮೊಗ್ಗ, ಡಿ.31:
ಕೊರೊನಾದ ಇಂದಿನ ದಿನಮಾನಗಳಲ್ಲಿ ಜಿಲ್ಲಾ ಮಟ್ಟದ ಪತ್ರಿಕೆಗಳು ಉಳಿಯುವುದೇ ಕಷ್ಟವಾಗಿದೆ. ರಾಜ್ಯ ಸರ್ಕಾರ ಕೂಡಲೇ ರಾಜ್ಯಮಟ್ಟದ ಪತ್ರಿಕೆಗಳಿಗೆ ಜಾಹೀರಾತು ನೀಡುವಂತೆ ಜಿಲ್ಲಾ ಮಟ್ಟದ ಪತ್ರಿಕೆಗಳಿಗೂ ಜಾಹೀರಾತು ನೀಡಬೇಕು ಎಂದು ಹಿರಿಯ ಸಂಪಾದಕ ಎಸ್.ಚಂದ್ರಕಾತ್ ಇಂದಿಲ್ಲಿ ಒತ್ತಾಯಿಸಿದರು.
ಅವರು ಇಂದು ಬೆಳಗ್ಗೆ ತುಂಗಾ ತರಂಗ ಕನ್ನಡ ದಿನಪತ್ರಿಕೆ ಎಂದಿನಂತೆ ಹೊರತಂದಿರುವ ೨೦21ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ, ಇಂದಿನ ದಿನಗಳಲ್ಲಿ ಕಾಗದ ಹಾಗೂ ಮುದ್ರಣದ ವೆಚ್ಚ ದುಬಾರಿಯಾಗಿದ್ದು, ನಿಗದಿತ ಕಾಯ್ದೆಯಂತೆ ಜಿಲ್ಲಾ ಮಟ್ಟದ ಹಾಗೂ ಸ್ಥಳೀಯ ಪತ್ರಿಕೆಗಳನ್ನು ಉಳಿಸಲು ರಾಜ್ಯ ಸರ್ಕಾರ ವಿಶೇಷ ಜಾಹೀರಾತುಗಳ ರೂಪದಲ್ಲಿ ನೆರವು ನೀಡುವ ಅಗತ್ಯವಿದೆ ಎಂದು ಹೇಳಿದರು.
ಪತ್ರಿಕೆ ನಡೆಸುವುದೇ ಕಷ್ಟವಾದ ಇಂದು ತುಂಗಾ ತರಂಗ ಕ್ಯಾಲೆಂಡರ್ ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯ. ಇಲ್ಲಿನ ಜಾಹೀರಾತುಗಳು ಸ್ಥಳೀಯ ಪತ್ರಿಕೆಗಳ ಉಳಿವಿಗೆ ಪ್ರೇರಕವಾಗಿವೆ ಎಂದು ಆ ಪತ್ರಿಕಾ ಬಳಗವನ್ನು ಪ್ರಶಂಸಿದರು.
ಮಾಜಿ ನಗರಸಭಾ ಅಧ್ಯಕ್ಷ ಹಾಗೂ ಉದ್ಯಮಿ ಎಲ್.ಸತ್ಯನಾರಾಯಣ ರಾವ್ ಅವರು ಮಾತನಾಡುತ್ತಾ, ಕಳೆದ ದಶಕದಿಂದ ತುಂಗಾ ತರಂಗ ಪತ್ರಿಕೆಯ ಹೊಸ ಬಳಗ ಪತ್ರಿಕೆಯನ್ನು ಉಚಿತವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರತೆ ಕಾಯ್ದುಕೊಂಡು ನೀಡುತ್ತಿದೆ. ಇದು ಪತ್ರಿಕಾ ಶಕ್ತಿಯನ್ನು ಹೆಚ್ಚಿಸುತ್ತಿದೆಯಾದರೂ ಸಹ ಆರ್ಥಿಕವಾಗಿ ಧೈರ್ಯ ನೀಡುವಂತಹ ಕೆಲಸವನ್ನು ಸರ್ಕಾರ ಹಾಗೂ ಜನ ನಾಯಕರು ಮಾಡಬೇಕಿದೆ ಎಂದರು.
ಉದ್ಯಮಿ, ಸಮಾಜಸೇವಕ ಸುರೇಶ್ ಬಾಳೆಗುಂಡಿ ಅವರು ಮಾತನಾಡಿ, ಸಾಮಾಜಿಕ ಜಾಲತಾಣವನ್ನು ಸದ್ಬಳಕೆ ಮಾಡಿಕೊಂಡು ತುಂಗಾ ತರಂಗ ಪತ್ರಿಕೆ ಸೇರಿದಂತೆ ಬಹುತೇಕ ಪತ್ರಿಕೆಗಳು ಕ್ಷಣ ಮಾತ್ರದಲ್ಲಿ ನಿಖರ ಸುದ್ದಿಗಳನ್ನು ನೀಡುತ್ತಿರುವುದು ಪ್ರಶಂಶನೀಯ. ತುಂಗಾ ತರಂಗ ವಿಭಿನ್ನತೆಗಳಲ್ಲಿ ಏಕತೆ ಹುಡುಕುತ್ತಾ, ಚಿಕ್ಕ ಪತ್ರಿಕೆಯಾದರೂ ಚೊಕ್ಕ ಹಾಗೂ ಹೆಚ್ಚು ಮಾಹಿತಿಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಯ ಇನ್ಸ್‌ಪೆಕ್ಟರ್ ಮಾದಪ್ಪ, ನಿವೃತ್ತ ಹಿರಿಯ ಪತ್ರಕರ್ತರಾದ ಕೆ.ಬಿ.ರಾಮಪ್ಪ ಹಾಗೂ ಜೇವಿಯರ್ ಡೇವಿಡ್ ಅವರು ೨೦೨೧ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಪತ್ರಿಕೆಯ ಸಂಪಾದಕ ಎಸ್.ಕೆ.ಗಜೇಂದ್ರ ಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ೨೦೧೧ರಿಂದ ತುಂಗಾ ತರಂಗ ಪತ್ರಿಕೆ ಹೊಸ ಬಳಗದಿಂದ ವಿನೂತನವಾಗಿ ಹೊರಬರುತ್ತಿರುವುದನ್ನು ಗಮನಿಸುತ್ತಿದ್ದೀರಿ. ಕಷ್ಟ, ನಷ್ಟದ ಬಗ್ಗೆ ಚಿಂತಿಸದೇ ಪ್ರತಿ ವರ್ಷದಂತೆ ಈ ವರ್ಷವೂ ಉಚಿತ ಕ್ಯಾಲೆಂಡರ್ ನೀಡುತ್ತಿದೆ ಇದರಲ್ಲಿ ದಿನದ ಸಮಗ್ರ ಮಾಹಿತಿ ಚಿಕ್ಕ ಚೌಕಟ್ಟಿನಲ್ಲಿಯೇ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಕೆ.ಬಿ.ರಾಮಪ್ಪ, ಜೇವಿಯರ್ ಡೇವಿಡ್, ಎಸ್.ಚಂದ್ರಕಾಂತ್ ಮತ್ತು ಫೋಟೋಗ್ರಾಫಿಯಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಶಿವಮೊಗ್ಗ ನಾಗರಾಜ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಥುರಾ ಪ್ಯಾರಡೈಸ್‌ನ ಮಾಲೀಕರಾದ ಎನ್.ಗೋಪಿನಾಥ್, ತುಂಗಾ ತರಂಗ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಡಿ.ಬಿ.ವಿಜಯ ಕುಮಾರ್, ಮಾನವ ಹಕ್ಕುಗಳ ಕಮಿಟಿಯ ರಾಜ್ಯಾಧ್ಯಕ್ಷ ಕೆ.ನಾಗರಾಜ್ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರದಲ್ಲಿ ಶಿವಮೊಗ್ಗ ಪತ್ರಕರ್ತರು, ಮಾನವ ಹಕ್ಕುಗಳ ಕಮಿಟಿಯ ಪದಾಧಿಕಾರಗಳು ಹಾಗೂ ಪತ್ರಿಕೆಯ ಅಭಿಮಾನಿಗಳು ಉಪಸ್ಥಿತರಿದ್ದರು.