ಶಿವಮೊಗ್ಗ: ಶಿವಮೊಗ್ಗ ಐತಿಹಾಸಿಕ ಶ್ರೀ ಕೋಟೆ ಮಾರಿಕಾಂಬ ಜಾತ್ರೆಗೆ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ. ಈಗಾಗಲೇ ಇಡೀ ನಗರದಲ್ಲಿ ಕಟೌಟ್ ಗಳು, ಫ್ಲೆಕ್ಸ್ ಗಳು ವಿಜೃಂಭಿಸುತ್ತಿವೆ. ದೀಪಾಲಂಕಾರ ಕಂಗೊಳಿಸುತ್ತಿದೆ.
ಮುಖ್ಯವಾಗಿ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಅವರು ಹೂವಿನ ಅಲಂಕಾರದ ಜವಾಬ್ದಾರಿ ಹೊತ್ತುಕೊಂಡಿದ್ದು, ಈಗಾಗಲೇ ಅಲಂಕಾರ ಮಾಡಲೆಂದೇ ಬೆಂಗಳೂರಿನಿಂದ ಸುಮಾರು 40ಕ್ಕೂ ಅಧಿಕ ಮಂದಿ ಆಗಮಿಸಿದ್ದು,
ಸ್ಥಳೀಯರ ಜೊತೆಗೂಡಿ ದೇವಸ್ಥಾನ ಮತ್ತು ಗಾಂಧಿ ಬಜಾರ್ ಗಳಲ್ಲಿ ಹೂವಿನ ಅಲಂಕಾರವನ್ನು ಮಾಡುತ್ತಿದ್ದಾರೆ. ಹೂವು, ಕುಂಕುಮದ ಪ್ಯಾಕೇಟ್ ಗಳನ್ನು ಸಿದ್ಧಪಡಿಸಲಾಗುತ್ತಿದೆ. ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಈ ಕಾರ್ಯ ನಡೆಯುತ್ತಿದೆ.
ದೇವಸ್ಥಾನ ಸಮಿತಿಯವರು ಈಗಾಗಲೇ ಎಲ್ಲಾ ಇಲಾಖೆಗಳೊಡನೆ ಸಭೆ ನಡೆಸಿ ಜಾತ್ರೆ ಸುಗಮವಾಗಿ ಮತ್ತು ಸಂಭ್ರಮದಿಂದ ನಡೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕುಡಿಯುವ ನೀರು, ದೇವರ ದರ್ಶನಕ್ಕೆ ಬ್ಯಾರಿಕೇಡ್ ಅಳವಡಿಕೆ, ಸರದಿ ಸಾಲಿನಲ್ಲಿ ಬರುವವರಿಗೆ ನೆರಳಿನ ವ್ಯವಸ್ಥೆ, ಶಾಮಿಯಾನ ಅಳವಡಿಕೆ ಭರದಿಂದ ಸಾಗಿದೆ.
ಗಾಂಧಿ ಬಜಾರ್ ನ ದ್ವಾರ ಬಾಗಿಲಿನಲ್ಲಿ 45 ಅಡಿ ಎತ್ತರದ ಚಾಮುಂಡೇಶ್ವರಿ ಮೂರ್ತಿ ನಿರ್ಮಾಣ ಮಾಡಲಾಗಿದ್ದು, ಇದು ಚಲಿಸುವ ರೀತಿಯಲ್ಲಿರುವುದರಿಂದ ಜನರನ್ನು ಭಕ್ತರನ್ನು ಆಕರ್ಷಿಸಲಿದೆ. ಸ್ವಚ್ಛತೆಗೆ ಮತ್ತು ಕುಡಿಯುವ ನೀರಿಗೆ ಆದ್ಯತೆ ಕೊಡುವ ದೃಷ್ಟಿಯಿಂದ ಈಗಾಗಲೇ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ದೇವಸ್ಥಾನ ಸಮಿತಿಯವರು ಚರ್ಚೆ ಮಾಡಿದ್ದಾರೆ. ಪೊಲೀಸ್ ಇಲಾಖೆ ಕೂಡ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲು ಸಿದ್ಧತೆ ಮಾಡಿಕೊಂಡಿದೆ.
ಒಟ್ಟಾರೆ ಮಾ. 12 ರಿಂದ 15 ರವರೆಗೆ 5 ದಿನಗಳ ಕಾಲ ನಡೆಯುವ ಮಾರಿಕಾಂಬ ಜಾತ್ರೆಯ ಯಶಸ್ಸಿಗೆ ಸಕಲ ಸಿದ್ಧತೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ.