ಸಾಗರ : ಕಾಂತರಾಜ ವರದಿ ವಿರೋಧಿಸುವ ಲೋಕಸಭಾ ಅಭ್ಯರ್ಥಿಗಳಿಗೆ ಮತದಾರರು ಮತ ಹಾಕಬೇಡಿ. ರಾಜ್ಯಾದ್ಯಂತ ಕಾಂತರಾಜ ವರದಿ ವಿರೋಧಿಸುವ ಜನಪ್ರತಿನಿಧಿಗಳ ವಿರುದ್ದ ಪ್ರತಿಭಟನೆ ಹಾಗೂ ಜನಾಂದೋಲನ ರೂಪಿಸಲಾಗುತ್ತದೆ ಎಂದು ಮಲೆನಾಡು ಭೂರಹಿತ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂತರಾಜ ವರದಿ ಜಾರಿಗೆ ಬಂದರೆ ಧ್ವನಿ ಇಲ್ಲದವರಿಗೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವಾಗುತ್ತದೆ. ಆದರೆ ಜನಪ್ರತಿನಿಧಿಗಳು ಜಾತಿವರ್ಗಕ್ಕೆ ಸೀಮಿತವಾಗಿ ವರದಿಯನ್ನು ವಿರೋಧಿಸುತ್ತಿರುವುದು ಹಿಂದುಳಿದ ವರ್ಗಕ್ಕೆ ಮಾಡುತ್ತಿರುವ ದ್ರೋಹವಾಗಿದೆ ಎಂದರು.
ಸಂವಿಧಾನದ ಬಗ್ಗೆ ಭಾಷಣ ಮಾಡಿದರೆ ಸಿದ್ದರಾಮಯ್ಯ ಅವರ ಹೊಣೆಗಾರಿಕೆ ಮುಗಿಯುವುದಿಲ್ಲ. ತಾವೇ ಕಾಂತರಾಜ ಸಮಿತಿಯನ್ನು ರಚಿಸಿ, ೧೬೫ ಕೋಟಿ ರೂ. ಖರ್ಚು ಮಾಡಿ ತಯಾರಿಸಿರುವ ವರದಿಯನ್ನು ಜಾರಿಗೆ ತರಲು ಮೀನಾಮೇಷ ಎಣಿಸುತ್ತಿರುವ ಸಿದ್ದರಾಮಯ್ಯ ಅವರ ನಡೆಯೆ ಅನುಮಾನಾಸ್ಪದವಾಗಿದೆ. ಸಿದ್ದರಾಮಯ್ಯ ಅವರು ಹಲವು ಬಾರಿ ಕಾಂತರಾಜ ವರದಿ ಜಾರಿಗೆ ತರುತ್ತೇವೆ
ಎಂಬ ಆಶ್ವಾಸನೆ ನೀಡುತ್ತಿದ್ದಾರೆಯೆ ವಿನಃ ಅದನ್ನು ಸ್ವೀಕರಿಸುವತ್ತ ಗಟ್ಟಿಮನಸ್ಸು ಮಾಡುತ್ತಿಲ್ಲ. ಇಂತಹ ದ್ವಿಮುಖನೀತಿ ಸರಿಯಲ್ಲ. ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂತರಾಜ ವರದಿಯನ್ನು ಸ್ವೀಕರಿಸಿ ಅದನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಹಾಲಿ ಕಾಂತರಾಜ ವರದಿಯಲ್ಲಿ ಸಣ್ಣಪುಟ್ಟ ಲೋಪದೋಷಗಳಿದ್ದರೆ ಅದನ್ನು ಸರಿಪಡಿಸಲು ಅವಕಾಶ ಇರುತ್ತದೆ. ಆದರೆ ಯಾವುದೋ ಒತ್ತಡಕ್ಕೆ ಸಿಲುಕಿದಂತೆ ವರದಿಯನ್ನೇ ಸ್ವೀಕರಿಸದೆ ಇರುವ ಕ್ರಮ ಸರಿಯಲ್ಲ. ದೇಶದಲ್ಲಿ ಮೊದಲ ಬಾರಿಗೆ ಇಂತಹ ಒಂದು ಆಲೋಚನೆ ಮಾಡಿದ್ದು
ಕರ್ನಾಟಕ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಗಳಾದಾಗ ವರದಿ ಜಾರಿಗೆ ಬರುತ್ತದೆ ಎಂದು ಎಲ್ಲರೂ ನಿರೀಕ್ಷೆಯಲ್ಲಿದ್ದರು. ಆದರೆ ರಾಜ್ಯ ಸರ್ಕಾರದ ನಡೆಯ ಬಗ್ಗೆ ಈಗ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಗೋಷ್ಟಿಯಲ್ಲಿ ಅಮೃತ್ ರಾಸ್, ಸೈಯದ್ ನೂರುಲ್ಲಾ ಹಕ್ ಹಾಜರಿದ್ದರು