ಗಜೇಂದ್ರಸ್ವಾಮಿ
ಶಿವಮೊಗ್ಗ, ಫೆ.21:
ರುಚಿಗೆ ತಕ್ಕಷ್ಟು ಉಪ್ಪು ಇದ್ದರೆ ಅಡುಗೆ ಚೆಂದ. ಚಹಾಕ್ಕೆ ತಕ್ಕಷ್ಟು ಸಕ್ಕರೆ ಇದ್ದರೆ ಅದರ ರುಚಿ ಚೆಂದ. ಆದರೆ ಎರಡೂ ಅತಿಯಾದರೆ ಇನ್ನಿಲ್ಲದ ಬಾಧೆ ತಪ್ಪಿದ್ದಲ್ಲ.
ಇಂತಹದೊಂದು ಪೀಠಿಕೆಯನ್ನು ಹಾಕಲು ಕಾರಣವಿಷ್ಟೇ. ಉತ್ತರ ಭಾರತದ ತಿನಿಸುಗಳಿಗೆ ಚಿಟಿಕೆಯಷ್ಟು ಬಳಸುತ್ತಿದ್ದ “ಅಜಿನೋ ಮೋಟೋ” ಅಂದರೆ ಟೆಸ್ಟಿಂಗ್ ಪೌಡರ್ ಶಿವಮೊಗ್ಗದ ಎಲ್ಲೆಡೆ ಅದರಲ್ಲೂ ರಸ್ತೆಗಳಲ್ಲಿ ಮಾರಾಟ ಮಾಡುವ ಕಡೆ ಮಿತಿಮೀರಿ ಬಳಸುತ್ತಿದ್ದು, ಅದರ ರುಚಿಯನ್ನು ತಿನ್ನುವ ಜನ ಸದ್ದಿಲ್ಲದೆ ಆರೋಗ್ಯದ ದುರ್ವಿಧಿಯನ್ನು ತಂದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕ ವಲಯ ಆಕ್ಷೇಪಿಸಿದೆ.
ಶಿವಮೊಗ್ಗ ಫುಡ್ ಕೋರ್ಟ್ ನ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಹೋಟೆಲ್ ಗಳು, ಯಥೇಚ್ಛವಾಗಿ ಹೆಚ್ಚಿರುವ ಫ್ರೀಡಂ ಪಾರ್ಕ್ ಎದುರಿನ ತಿನಿಸುಗಳ ಅಂಗಡಿಗಳು ಅತಿ ಹೆಚ್ಚು ಟೆಸ್ಟಿಂಗ್ ಪೌಡರ್ ಬಳಸುತ್ತಿವೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ದುಬಾರಿ ಶೋಕಿ ದರದ ಹೋಟೆಲ್ ಗಳಲ್ಲೂ ಸಹ ಚಿಟಿಕೆಯಷ್ಟು ಬೀಳಬೇಕಾದ ಟೆಸ್ಟಿಂಗ್ ಪೌಡರ್ ಗಾತ್ರ ಸದ್ದಿಲ್ಲದೆ ಹೆಚ್ಚುತಿದ್ದು ಅದು ರುಚಿ ನೀಡುತ್ತದೆ. ಆದರೆ ಜನರ ಆಹಾರವನ್ನು ಆರೋಗ್ಯವನ್ನು ಹದಗೆಡಿಸುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಟೇಸ್ಟಿಂಗ್ ಪೌಡರ್ ಹೆಚ್ಚಾಗಿ ಬಳಸುವುದರಿಂದ ಸದ್ದಿಲ್ಲದೆ ಕ್ಯಾನ್ಸರ್, ಕಿಡ್ನಿ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತವೆ ಎಂದು ಇದೇ ಹೋಟೆಲ್ ಮಾಲೀಕರೊಬ್ಬರು ತಿಳಿಸಿದ್ದಾರೆ.
ಏನೇ ಆಗಲಿ ಅತಿಯಾದ ಟೆಸ್ಟಿಂಗ್ ಪೌಡರ್ ಬಳಕೆ ಒಂದೆಡೆ ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ತರುತ್ತಿದೆ.
ಕರಿದ ಎಣ್ಣೆ ಅವಾಂತರ!
ಅಂತೆಯೇ ಫಾಮೋಯಿಲ್ ಎಣ್ಣೆಯನ್ನು ಒಮ್ಮೆ ಮಾತ್ರ ಕರೆಯಬಹುದು. ಆದರೆ ಅದನ್ನು ಎರಡು ಮೂರು ದಿನ ಕರೆದರೆ ಅದು ವಿಷವಾಗುತ್ತದೆ ಎಂಬ ಸತ್ಯ ಅಂಗಡಿ ಮಾಲೀಕನಿಗೂ ಗೊತ್ತಿಲ್ಲ. ಅದರ ಬೋಂಡಾ ಸವಿಯುವ, ಕಬಾಬ್ ಮೆಲ್ಲುವ ಜನರಿಗೆ ಗೊತ್ತೇ ಇಲ್ಲ ಅಂತೆ.
ನಾಪತ್ತೆಯಾದ ಇಲಾಖೆ
ಇನ್ನೊಂದು ವಿಷಯ. ಶಿವಮೊಗ್ಗದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧ ಪಟ್ಟಂತೆ ಈ ಆಹಾರ ವ್ಯವಸ್ಥೆ ನೋಡಿಕೊಳ್ಳಲು ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಕೆಲಸ ಮಾಡುತ್ತಿದೆ. ನಾವು ಹಿಂದೆ ಕಂಡಂತೆ ಕನಿಷ್ಠ ತಿಂಗಳಿಗೊಮ್ಮೆಯಾದರೂ ಒಂದಿಷ್ಟು ಹೋಟೆಲ್, ಗೂಡಂಗಡಿ ಹಾಗೂ ತಳ್ಳುಗಾಡಿಗಳಲ್ಲಿ ಆಹಾರ ಮಾರುವವರ ಬಳಿ ಪರಿಶೀಲನೆ ನಡೆಸುತ್ತಿದ್ದು ಕಂಡು ಬರುತ್ತಿತ್ತು.
ಇತ್ತೀಚಿನ ದಿನಗಳಲ್ಲಿ ಅಂತಹ ಯಾವುದೇ ಪರಿಶೀಲನೆ ನಡೆಯದಿರುವುದು ಆಹಾರ ಸುರಕ್ಷಿತ ಇಲಾಖೆ ನಾಪತ್ತೆಯಾಗಿದೆ ಎಂಬ ಅನುಮಾನವನ್ನು ಹುಟ್ಟಿಸುತ್ತಿದೆ.
ಏನಾದರೂ ಆಗಲಿ ಆಹಾರ ಆರೋಗ್ಯವನ್ನು ಹದಗೆಡಿಸದಿರಲಿ. ಅದನ್ನು ನೋಡಿಕೊಳ್ಳುವವರು ಇತ್ತ ಗಮನಿಸಲಿ. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಒಮ್ಮೆ ಇದರತ್ತ ಗಮನ ಹರಿಸಿ ದಿಡೀರ್ ದಾಳಿ ನಡೆಸಿ ಎಲ್ಲೆಡೆ ಆಹಾರ ಪರಿಶೀಲನೆಯನ್ನು ಮಾಡುವ ಅಗತ್ಯ ಕಂಡುಬರುತ್ತದೆ.