ಶಿವಮೊಗ್ಗ, ಫೆ.19: ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ರಾಜ್ಯ ಸರ್ಕಾರಿ ನೌಕರರ ಮಹಾಸಮ್ಮೇಳನವನ್ನು ಫೆ.27 ರಂದು ಬೆಳಗ್ಗೆ 11 ಗಂಟೆಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೌಕರರಿಗೆ ಆಶಯ ನುಡಿಗಳನ್ನಾಡಿದ್ದಾರೆ, ಎಲ್ಲಾ ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದರು.

ಎರಡೂವರೆ ಲಕ್ಷಕ್ಕೂ ಹೆಚ್ಚ ನೌಕರರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ 100 ಬಸ್ ಮತ್ತು ಇತರೆ ವಾಹನಗಳಲ್ಲಿ ನೌಕರರು ಹೊರಡಲಿದ್ದಾರೆ. ಭಾಗವಹಿಸುವವ ನೌಕರರಿಗೆ ಓಓಡಿ ಹಾಗೂ ಸಾಂದರ್ಭಿಕ ರಜೆಯನ್ನು ಸರ್ಕಾರ ಮಂಜೂರು ಮಾಡಿದೆ ಎಂದರು.

7 ನೇ ವೇತನ ಆಯೋಗದಿಂದ ವರದಿ ಪಡೆದು ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವುದು, ಎನ್ ಪಿಎಸ್ ರದ್ದು ಮಾಡಿ ಓಪಿಎಸ್ ಮರು ಸ್ಥಾಪಿಸುವ ಸಲುವಾಗಿ ಮೊದಲನೆ ಹಂತದಲ್ಲಿ ಎನ್ ಪಿಎಸ್ ನೌಕರರ ವೇತನದಲ್ಲಿ ಕಟಾವಣೆಯಾಗುತ್ತಿರುವ ವಂತಿಗೆಯನ್ನು ಏಪ್ರಿಲ್ 2024 ರಿಂದ ಕಡಿತಗೊಳಿಸದಂತೆ ಸರ್ಕಾರಿ ಆದೇಶ ಹೊರಡಿಸುವುದು, ಆರೋಗ್ಯ ಸಂಜೀವಿನಿ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸುವುದು ಪ್ರಮುಖ ಬೇಡಿಕೆಯಾಗಿದೆ ಎಂದರು.

ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನೌಕರರ ಸೇವೆ ಹಾಗೂ ಕಾರ್ಯದಕ್ಷತೆ ಕುರಿತು, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ನೌಕರರ ಒತ್ತಡ ನಿರ್ವಹಣೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಸರ್ಕಾರದ ಉನ್ನತ ಅಧಿಕಾರಿಗಳು ಆಡಳಿತದಲ್ಲಿ ರಾಜ್ಯ ಸರ್ಕಾರಿ ನೌಕರರು ಭಾಗವಹಿಸುವಿಕೆ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಸರ್ಕಾರಿ ನೌಕರರ ಸಂಘ ನಡೆದು ಬಂದ ದಾರಿ ಹಾಗೂ ಸಂಘದ ಸಾಧನೆಗಳ ಕುರಿತು ನೌಕರರ ಸೇನೆ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಮೋಹನ್‍ಕುಮಾರ್, ಡಿ.ಟಿ.ಕೃಷ್ಣಮೂರ್ತಿ, ನರಸಿಂಹಮೂರ್ತಿ, ಪ್ರಸನ್ನ, ಆರ್.ಪಾಪಣ್ಣ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!