ಸಾಗರ : ಇಲ್ಲಿನ ಟೀಚರ‍್ಸ್ ಲೇಔಟ್‌ನಲ್ಲಿ ಫೆ. ೫ರಂದು ರೇವತಿ ಎಂಬುವವರ ಮನೆ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಟೀಚರ‍್ಸ್ ಲೇಔಟ್ ನಿವಾಸಿ ರೇವತಿ ರಾಜೇಶ್ ಎಂಬುವವರು ಫೆ. ೫ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಮನೆಗೆ ಬಂದಾಗ ಯಾರೋ ಮನೆ ಬಾಗಿಲಿಗೆ ಹಾಕಿದ್ದ ಬೀಗ ಮುರಿದಿರುವುದು ಪತ್ತೆಯಾಗಿದೆ. ರೇವತಿ ಅವರು ಮನೆ ಒಳಗೆ ಹೋಗಿ ನೋಡಿದಾಗ ಮನೆ ಗಾಡ್ರೇಜ್‌ನಲ್ಲಿದ್ದ ೭೨ಸಾವಿರ ರೂ. ಮೌಲ್ಯದ ೧೮ ಗ್ರಾಂ ತೂಕದ ಎರಡು ಬಂಗಾರದ ಬಳೆ, ೧೫ಸಾವಿರ ರೂ. ಮೌಲ್ಯದ ೫೦೦ ಗ್ರಾಂ ತೂಕದ ಬೆಳ್ಳಿ ವಸ್ತುಗಳು, ಕಳ್ಳತನ ಮಾಡಿಕೊಂಡು ಹೋಗಿರುವುದು ಪತ್ತೆಯಾಗಿದೆ.
ರೇವತಿ ಅವರು ಕಳ್ಳತನ ಸಂಬಂಧ ನಗರ ಠಾಣೆಗೆ ದೂರು ಸಲ್ಲಿಸಿದ್ದರು. ಇದಕ್ಕಾಗಿ ವಿಶೇಷ ತಂಡ ರಚಿಸಲಾಗಿತ್ತು. ಕಳ್ಳತನಕ್ಕೆ ಸಂಬಂಧಪಟ್ಟಂತೆ ಸವಣೂರು ವಾಸಿ ಅಮೀರ್ ಖಾನ್ ಮತ್ತು ಬೆಳಗಾವಿ ವಾಸಿ ವಿಶಾಲ್ ಸಿರ್‌ಖಾನೆ ಎಂಬುವವರನ್ನು ಬಂಧಿಸಿ ಕಳ್ಳತನ ಮಾಡಿದ ವಸ್ತುಗಳ ಜೊತೆಗೆ ಕಳ್ಳತನಕ್ಕೆ ಬಳಸಿದ್ದ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡಿವೈಎಸ್‌ಪಿ ಗೋಪಾಲಕೃಷ್ಣ ಟಿ. ನಾಯಕ್ ಹಾಗೂ ವೃತ್ತ ನಿರೀಕ್ಷಕ ಸೀತಾರಾಮ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ನಾಗರಾಜ್, ಸಿಬ್ಬಂದಿಗಳಾದ ರತ್ನಾಕರ್, ಕೃಷ್ಣಮೂರ್ತಿ, ಮೆಹಬೂಬ್ ಸಾಬ್, ವಿಕಾಸ್, ವಿಶ್ವನಾಥ್ ಪಾಲ್ಗೊಂಡಿದ್ದರು.
ಸಾಗರ ಉಪವಿಭಾಗ ವ್ಯಾಪ್ತಿಯಲ್ಲಿ ಕಳೆದ ೮ ತಿಂಗಳಿನಿಂದ ೨೪ ಕಳವು ಪ್ರಕರಣ ದಾಖಲಾಗಿತ್ತು. ೨೪ ಪ್ರಕರಣಗಳನ್ನು ಪತ್ತೆ ಮಾಡಿ ೪೧ ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿತರಿಂದ ೨೪೩೧೭೨೯ ರೂ. ಮೌಲ್ಯದ ಕಳವು ಮಾಲನ್ನು ವಶಕ್ಕೆ ಪಡೆಯಲಾಗಿದೆ.