ಹೊಸನಗರ : ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜ್ಯದ ಮತದಾರರಿಗೆ ಕಾಂಗ್ರೆಸ್ ಪಕ್ಷವು ನೀಡಿದ ಭರವಸೆಯಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಮೂಲಕ ಯಶ್ವಿಸಿಯಾಗಿ ಕಾರ್ಯನಿರ್ವಹಿಸಿದೆ ಎಂದು ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಪಟ್ಟಣಕ್ಕೆ ಆಗಮಿಸಿದ ಅವರನ್ನು ನೂರಾರು ಅಭಿಮಾನಿಗಳು ಪಟಾಕಿ ಸಿಡಿಸಿ, ಬೃಹತ್ ಮಾಲಾರ್ಪಣೆ ಮಾಡುವ ಮೂಲಕ ಭರಮಾಡಿಕೊಂಡರು. ನಂತರ, ಇಲ್ಲಿನ ಈಡಿಗರ ಸಮುದಾಯ ಭವನದಲ್ಲಿ ನಡೆದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಬೇಳೂರು, ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಮತದಾರರಿಗೆ ನೀಡದ್ದ ಐದು ಗ್ಯಾರೆಂಟಿಗಳನ್ನು ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ತಲುಪಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ರಾಜ್ಯ ಸರ್ಕಾರವು ಜಾತಿ, ಧರ್ಮ, ವರ್ಗ ಮೀರಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಶೋಷಿತರ, ದೀನ-ದಲಿತರ ಪರವಾಗಿ ನಿಂತಿದೆ ಎಂದರು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆರ್ಥಿಕ ಸದೃಢರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಬೆಲೆ ಏರಿಕೆಯಿಂದಾಗಿ ಜನಜೀವನ ನಡೆಸುವುದು ಕಷ್ಟಸಾಧ್ಯವಾಗಿರುವ ಈ ಕಾಲಘಟ್ಟದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಹಕಾರಿ ಆಗಿದ್ದು, ಮುಂಬರುವ ದಿನಗಳಲ್ಲಿ ಅವರ ಜೀವನಮಟ್ಟ ಸುಧಾರಿಸಲಿದೆ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದರು. ಯುವನಿಧಿ ಯೋಜನೆ ಹೊರತು ಪಡಿಸಿ ಸರ್ಕಾರದ ಮಿಕ್ಕೆಲ್ಲಾ ಗ್ಯಾರೆಂಟಿ ಯೋಜನೆಗಳು ಈಗಾಗಲೇ ಅರ್ಹ ಫಲಾನುಭವಿಗಳ ಕೈ ಸೇರಿವೆ. ಗ್ರಾಮೀಣ ಭಾಗದ ಯುವಜನತೆ ಶೈಕ್ಷಣಿಕವಾಗಿ ಅಷ್ಟೊಂದು ಪ್ರಗತಿ ಕಾಣದ ಕಾರಣ ಯುವನಿಧಿ ಯೋಜನೆ ಕುಂಟುತ್ತ ಸಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಯುವಜನತೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದೇ ಆದಲ್ಲಿ ಯುವನಿಧಿಯ ಫಲಾನುಭವಿ ಆಗುವುದಲ್ಲಿ ಅನುಮಾನ ಬೇಡ ಎಂದರು.

‘ಗ್ಯಾರಂಟಿ’ ರಾಜ್ಯ ಸರ್ಕಾರದ ಮಹತ್ವಾಂಕ್ಷೆ ಯೋಜನೆ ಆಗಿದ್ದು, ಅರ್ಹರಿಗೆ ಯೋಜನೆಯ ಫಲ ಶೀಘ್ರವಾಗಿ ತಲುಪಿಸಲು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಮಿತಿಗಳನ್ನು ಸರ್ಕಾರ ರಚಿಸಿದೆ. ಈ ಎಲ್ಲಾ ಗ್ಯಾರಂಟಿ ಯೋಜನೆಗಳಿಂದ ಕುಟುಂಬ ಒಂದಕ್ಕೆ ವಾರ್ಷಿಕ ಸರಾಸರಿ ರೂ ಅರವತ್ತು ಸಾವಿರ ಹಣ ಫಲಾನುಭವಿಗಳಿಗೆ ಉಳಿತಾಯ ಆಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಆರ್ಥಿಕ ಸಬಲತೆ ಹೆಚ್ಚುತ್ತಿದೆ. ಕುಟುಂಬ ನಿರ್ವಹಣೆ ಸುಗಮವಾಗಿದೆ. ವಿದ್ಯಾವಂತ ನಿರುದ್ಯೋಗಿಗಳಿಗೆ ಯುವನಿಧಿ ಸಹಕಾರಿ ಆಗಿದೆ. ಶಕ್ತಿಯೋಜನೆಯಿಂದ ಮಹಿಳೆಯರು ರಾಜ್ಯ ವ್ಯಾಪಿ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುವ ಮೂಲಕ ಅವರ ಆತ್ಮಶಕ್ತಿ ಹೆಚ್ಚಾಗುತ್ತಿದೆ. ಉಚಿತ ವಿದ್ಯುತ್ ನೀಡಿಕೆಯು ಹಣ ಉಳಿತಾಯಕ್ಕೆ ಕಾರಣವಾಗಿದೆ. ಉಚಿತ ಅಕ್ಕಿಯ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಅಗುವ ಮೂಲಕ ಅವರ ನೈತಿಕಶಕ್ತಿ ಹೆಚ್ಚಿಸಿದೆ ಎಂದರು.

57 ಸಾವಿರ ಕೋಟಿ ರೂ. ಅನುದಾನದ ಉಚಿತ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಸರ್ಕಾರವು ಶೀಘ್ರದಲ್ಲೇ ಐದು ಸಾವಿರ ಸರ್ಕಾರಿ ಬಸ್ಸುಗಳ ಖರೀದಿಗೆ ಮುಂದಾಗಿದೆ. ಹೊಸನಗರ ತಾಲೂಕಿನಲ್ಲೂ ಕನಿಷ್ಟ ಇಪ್ಪತ್ತು ಕೆಂಪು ಸರ್ಕಾರಿ ಬಸ್‌ಗಳ ಚಾಲನೆಗೆ ತಾವು ಬದ್ದರಾಗಿರುವುದಾಗಿ  ಬೇಳೂರು ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಲೂಕಿನ ಕಟ್ಟಡ ಕಾರ್ಮಿಕ ಸಂಘದ ವಿದ್ಯಾವಂತ ಮಕ್ಕಳಿಗೆ ಸರ್ಕಾರದ ಉಚಿತ ಲ್ಯಾಪ್‌ಟಾಪ್ ಹಾಗೂ ಕಂದಾಯ ಇಲಾಖೆಯ ವಿವಿಧ ಸಾಮಾಜಿಕ ಭದ್ರತಾ ಪತ್ರಗಳನ್ನು ಅರ್ಹ ಫಲಾನುಭವಿಗಳಿಗೆ ಅವರು ವಿತರಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರಶ್ಮಿ ಹಾಲೇಶ್, ಇಒ ನರೇಂದ್ರ ಕುಮಾರ್, ಬಿಇಒ ಕೃಷ್ಣಮೂರ್ತಿ, ಸಿಪಿಐ ಗುರಣ್ಣ ಎಸ್ ಹೆಬ್ಬಾಳ್, ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಮಳಲಿ ಶ್ರೀನಿವಾಸ್, ಮಾರುತಿಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಚಿದಂಬರ್, ಸಿಡಿಪಿಓ ಮೊದಲಾದವರಿ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!