ಅಲಾರಾಂ ಶಬ್ದವೇ ತುಂಬಾ ತುಂಬಾ ನಾದಮಯವಾಗಿತ್ತು. ಹೊರಗಿನ ಹಕ್ಕಿಗಳ ಚಿಲಿಪಿಲಿ ಗಾನ, ಕೋಳಿಯ ಕೂಗು ಸಹ ಚೇತೋಹಾರಿಯಾಗಿತ್ತು. ದೇವಸ್ಥಾನದ ಸುಪ್ರಭಾತ, ಮಸೀದಿಯ ಅಜಾನ್, ಚರ್ಚಿನ ಪ್ರಾರ್ಥನೆ ಇಂದು ವಿಶೇಷ ಭಾವನೆಗಳನ್ನು ಉಕ್ಕಿಸುತ್ತಿತ್ತು. ದೇಹ ಮನಸ್ಸು ಹಗುರಾದಂತೆ ಅನಿಸುತ್ತಿತ್ತು. ಇಷ್ಟು ವರ್ಷಗಳ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಈ ಅನುಭವ, ಈ ಭಾವ. ಅದಕ್ಕೆ ಕಾರಣವೂ ಇದೆ…
ನನಗೆ ಅಪ್ಪ ಅಮ್ಮ ಎಂದರೆ ಪ್ರತ್ಯಕ್ಷ ದೇವರಿದ್ದಂತೆ. ಅವರ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದೇನೆ.
ಆದರೆ ಇತ್ತೀಚೆಗೆ ಆ ಒಂದು ದಿನ ” ಆ ಹುಡುಗಿ ” ಯನ್ನು ನೋಡಿದ ತಕ್ಷಣ ನನಗರಿವಿಲ್ಲದೇ ಏನೋ ವಿಚಿತ್ರ ಅನುಭವವಾಯಿತು. ಅದನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ಇದೊಂದು ಹೊಸ ತಳಮಳ.
ಅಂದಿನಿಂದ ಊಟ ಸರಿಯಾಗಿ ಸೇರುತ್ತಿಲ್ಲ,
ನನ್ನ ಅಚ್ಚುಮೆಚ್ಚಿನ ಹಣ್ಣು ಸಹ ರುಚಿಸುತ್ತಿಲ್ಲ,
ಕಾಫಿ ಟೀ ಮಾತ್ರ ಅತ್ಯಂತ ರುಚಿಕರವಾಗಿದೆ,
ಅಪರೂಪಕ್ಕೆ ಕಾಫಿ ಕುಡಿಯುತ್ತಿದ್ದವನು ಈಗ ದಿನಕ್ಕೆ ಹಲವಾರು ಬಾರಿ ಕುಡಿಯುತ್ತಿದ್ದೇನೆ,
ಕುಂಬ ಕರ್ಣನಂತೆ ನಿದ್ದೆ ಮಾಡುತ್ತಿದ್ದ ನನಗೆ ಈಗ ಕೋಳಿ ನಿದ್ದೆ ಸಾಕಾಗುತ್ತಿದೆ…..
ಕಪಾಟಿನಲ್ಲಿ ಕೈಗೆ ಸಿಕ್ಕಿದ ಬಟ್ಟೆ ತೊಡುತ್ತಿದ್ದ ನಾನು ಈಗ ಮ್ಯಾಚಿಂಗ್ ಡ್ರೆಸ್ ಹುಡುಕುತ್ತಿದ್ದೇನೆ,
ಮುಖಕ್ಕೆ ಸ್ವಲ್ಪ ಕ್ರೀಮ್ – ಪೌಡರ್ ಹಚ್ಚುತ್ತಿದ್ದೇನೆ,
ಹೌದು, ಈಗಷ್ಟೇ ಜಿಮ್ ಗೆ ಸೇರಿದ್ದೇನೆ. ಅಪ್ಪ ಅಮ್ಮ ತಂಗಿಯ ಮೇಲೆ ಸಿಡುಕುತ್ತಿದ್ದ ನಾನು ಈಗ ಸ್ವಲ್ಪ ಮೆತ್ತಗಾಗಿದ್ದೇನೆ,…..
ಆಗಾಗ ಬದುಕು ಬೇಸರವೆನಿಸುತ್ತಿತ್ತು. ಈಗ ಬದುಕು ಎಷ್ಟೊಂದು ಸುಂದರ ಎಂದು ಪ್ರತಿ ಕ್ಷಣ ಅನಿಸುತ್ತಿದೆ.
ಓದುವ ಪ್ರತಿ ಅಕ್ಷರದಲ್ಲೂ ಬೇರೇನೋ ಕಾಣುತ್ತಿದೆ, ಮೊಬೈಲ್‌ನ ಪ್ರತಿ ಒಳ ಬರುವ ಕರೆಗಳು ಏನನ್ನೋ ಕಾತರಿಸುತ್ತದೆ. ಪ್ರತಿ ನಿಮಿಷಕ್ಕೊಮ್ಮೆ ವಾಟ್ಸಾಪ್ ಸಂದೇಶ ನೋಡಬೇಕೆನ್ನುವ ಗೀಳು ಪ್ರಾರಂಭವಾಗಿದೆ,….
ಆಗೆಲ್ಲಾ ಒಂಟಿತನ ಎಂದರೆ ಹಿಂಸೆಯಾಗುತ್ತಿತ್ತು. ಎಲ್ಲಿಗೆ ಹೋದರೂ ಸ್ನೇಹಿತರು ಜೊತೆಯಲ್ಲಿ ಇರಲೇಬೇಕಿತ್ತು.ಈಗ ಗೆಳೆಯರೆಂದರೆ ಕಿರಿಕಿರಿಯಾ ಗುತ್ತಿದೆ, ಮನಸ್ಸು ಏಕಾಂತ ಬಯಸುತ್ತದೆ. ಆ ಮೌನದಲ್ಲಿ ಸಿಹಿಗನಸು ಕಾಣುವ ಆಸೆಯಾಗುತ್ತಿದೆ….
ಇಷ್ಟು ಚಿಕ್ಕ ವಯಸ್ಸಿಗೇ ಏನೋ ದೊಡ್ಡ ಖಾಯಿಲೆ ಬಂದಿರಬೇಕು ಎಂದು ಭಯವಾಗುತ್ತಿದೆ….
ಮೊದಲೆಲ್ಲಾ ಹೀಗಿರಲಿಲ್ಲ,ಆರಾಮವಾಗಿದ್ದೆ, ಈ ಬದಲಾವಣೆಗೆ ಯಾವ ವೈರಸ್ ಕಾರಣವೋ ತಿಳಿಯುತ್ತಿಲ್ಲ. ಡಾಕ್ಟರ್ ಬಳಿ ಹೋಗುವಂತ ಯಾವ ತೊಂದರೆಯೂ ಇಲ್ಲ….
ಬಹುಶಃ ಏಳೆಂಟು ತಿಂಗಳ ಹಿಂದೆ ಒಂದು ಸಮಾರಂಭದಲ್ಲಿ ಆಕೆಯನ್ನು ನೋಡಿದ್ದೆ. ನಿಜ ಹೇಳಬೇಕೆಂದರೆ ಆ ಸಮಾರಂಭಕ್ಕೂ ನನಗೂ ಸಂಬಂಧವೇ ಇರಲಿಲ್ಲ. ಗೆಳೆಯರ ಒತ್ತಾಯದ ಮೇರೆಗೆ ಹೋಗಿದ್ದೆ. ಆಗ ಆಕಸ್ಮಿಕವಾಗಿ ಆಕೆಯನ್ನು ನೋಡಿದ್ದೆ. ಮೊದಲ ನೋಟಕ್ಕೆ ಶಾಕ್ ಹೊಡೆದಂತಾಯಿತು. ನೇರ ನನ್ನ ಹೃದಯದೊಳಗೆ ಪ್ರವೇಶಿಸಿದಳು ಅನಿಸುತ್ತದೆ…
ಅವಳ ಸೌಂದರ್ಯವನ್ನು ಬಹಿರಂಗವಾಗಿ ವರ್ಣಿಸಲಾರೆ. ಅದಕ್ಕೆ ಅಕ್ಷರ ರೂಪ ನೀಡಿ ಮಿತಿ ಗೊಳಿಸಲು ನನಗೆ ಇಷ್ಟವಿಲ್ಲ….
ಅಲ್ಲಿಂದ ಆಕೆಯ ಬಗ್ಗೆ ಮಾಹಿತಿ ಪಡೆದು, ಪರಿಚಯ ಮಾಡಿಕೊಂಡು ಒಂದು ಹಂತಕ್ಕೆ ತರಲು ಸುಮಾರು ತಿಂಗಳುಗಳಾಯಿತು. ಈಗ ಆಕೆ ನನ್ನ ಅಚ್ಚುಮೆಚ್ಚಿನ ಗರ್ಲ್ ಫ್ರೆಂಡ್. ದಿನವೂ ಮೊಬೈಲ್ ಮಾತುಕತೆ ನಡೆಯುತ್ತಲೇ ಇದೆ….
ನಾಡಿದ್ದು ಫೆಬ್ರವರಿ ೧೪,
ಪ್ರೇಮಿಗಳ ದಿನವಂತೆ…..
ಅಂದು ಆಕೆಯ ಬಳಿ ರೋಸ್ ಕೊಟ್ಟು ಪ್ರೇಮ ನಿವೇದನೆ ಮಾಡಲು ಮನಸ್ಸು ಹಂಬಲಿಸುತ್ತಿದೆ. ಹಾಗೆಯೇ ತುಂಬಾ ಭಯವಾಗುತ್ತಿದೆ. ಆಕೆ ಕೋಪಗೊಂಡರೆ ಅಥವಾ ನಿರಕಾರಿಸಿದರೆ…
ಅಯ್ಯಯ್ಯೋ, ಅದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆಕೆ ಇಲ್ಲದ ಬದುಕು ಬೇಡವೇ ಬೇಡ……
ಆಕೆ ನಿರಾಕರಿಸಲಾಗದಂತೆ ಏನಾದರೂ ವಿಶಿಷ್ಠ ರೀತಿಯಲ್ಲಿ ಪ್ರಪೋಸ್ ಮಾಡುವ ಹಂಬಲ.
ಎಷ್ಟೊಂದು ಸಿನಿಮಾ ನೋಡಿದ್ದೇನೆ. ಯಾಕೋ ಈಗ ಯಾವುದೂ ನೆನಪಾಗುತ್ತಿಲ್ಲ. ಪ್ರೀತಿಯ ಹುಚ್ಚು ಇಷ್ಟೊಂದು ಅತಿರೇಕಕ್ಕೆ ಹೋಗುತ್ತದೆ ಎಂದು ಭಾವಿಸಿರಲೇ ಇಲ್ಲ. ಈಗ ಏನು ಮಾಡಲಿ. ನಾಳೆ ಸಿಕ್ಕಿರುವ ಅವಕಾಶ ಕಳೆದು ಕೊಳ್ಳಬಾರದು…
ಮನಸ್ಸು ಚಡಪಡಿಸುತ್ತಿದೆ. ಪ್ರೀತಿ ಎಂದರೆ ಇದೇನಾ !!!!!!!
ಅದರಿಂದಾಗಿಯೇ ಇಂದು ಮನಸ್ಸಿಗೆ ವಿಶೇಷ ಬೆಳಗು. ಆದರೆ ಮರು ಕ್ಷಣವೇ ಅಪ್ಪ – ಅಮ್ಮ ನೆನಪಾಗುತ್ತಿದ್ದಾರೆ. ಇನ್ನೂ ಹಾಸಿಗೆಯಲ್ಲಿ ಇರುವಾಗಲೇ ನನ್ನ ಮೂಡು ಮತ್ತೆ ಬದಲಾಗುತ್ತಿದೆ….
ಏಕೆ ಕಾಡುತ್ತಿರುವೆ ಪ್ರೀತಿ, ಕಳ್ಳಿಯಂತೆ, ಮಳ್ಳಿಯಂತೆ,
ಬಿಟ್ಟು ಬಿಡು ಪ್ರೀತಿ ನನ್ನನ್ನು ಸತಾಯಿಸದೆ,..
ನಾನಿನ್ನೂ ಪದವಿ ಓದುತ್ತಿದ್ದೇನೆ, ಐಎಎಸ್ ಮಾಡುವ ಕನಸಿದೆ,ಬಡತನದಲ್ಲೇ ನೊಂದು ಬೆಂದ ಅಪ್ಪ ಅಮ್ಮನನ್ನು ಸಲುಹಬೇಕಿದೆ,ನನ್ನನ್ನೇ ನಂಬಿರುವ ಒಬ್ಬಳೇ ತಂಗಿಯ ಮದುವೆ ಮಾಡಬೇಕಿದೆ,…ಕಾಡಬೇಡ ಪ್ರೀತಿ ನನ್ನನ್ನು ಮತ್ತೆ ಮತ್ತೆ, ನಿನ್ನ ನೋಟ, ನಿನ್ನ ನಗು, ನಿನ್ನ ನೆನಪು ಕ್ಷಣ ಕ್ಷಣ ಕೊಲ್ಲುತ್ತಿದೆ,…
ಎಲ್ಲರೂ ಹೇಳುತ್ತಾರೆ ಪ್ರೀತಿ ವಿಷವೆಂದು, ಯಾಕೋ ಭಯವಾಗುತ್ತಿದೆ,ಕಥೆಗಳನ್ನು ಹೇಳುತ್ತಾರೆ ಪ್ರೀತಿಯಿ ಹಿಂದೆ ಹೋದವರ ಪಡಿಪಾಟಲ ಬಾಳು – ಗೋಳು,ಪ್ರೀತಿ ಮಾಯೆ ಹುಷಾರು ಎನ್ನುತ್ತಾರೆ, ಅದಕ್ಕೆ ಬೇಡ ಪ್ರೀತಿ ಈ ಸೆಳೆತ ಗಿಳಿತ,….
ಆದರೂ ಇರಲಾಗುತ್ತಿಲ್ಲ ನಿನ್ನ ನೆನಯದೇ, ನೀ ಯಾರೋ, ಏನೋ ಒಂದೂ ಗೊತ್ತಿಲ್ಲ ಆದರೆ, ಆಗಲೇ ನನ್ನ ಮನ ನಿನ್ನೊಂದಿಗೆ ಬಾಳು ನಡೆಸುತ್ತಿದೆ, ನಮ್ಮ ಮಕ್ಕಳು ಮರಿಗಳೊಂದಿಗೆ ಸುತ್ತಾಡುತ್ತಿದೆ,….
ನೀನಿಲ್ಲದೆ ನಾನಿಲ್ಲ ಎಂದು ಒದ್ದಾಡುತ್ತಿದೆ, ಅದಕ್ಕೆ ಕೇಳಿಕೊಳ್ಳುತ್ತಿದ್ದೇನೆ ಕಾಡಬೇಡ ಪ್ರೀತಿ ನನ್ನನ್ನು,
ಜವಾಬ್ದಾರಿಯಿದೆ, ಬದುಕಿದೆ, ಭವಿಷ್ಯವಿದೆ, ಕನಸಿದೆ,…
ನೀನು ಅದನ್ನೆಲ್ಲಾ ಕೊಲ್ಲುತ್ತಿರುವೆ, ಅದು ನನಗೂ ಗೊತ್ತು, ಆದರೂ ನಾನೇನು ಮಾಡಲಾಗುತ್ತಿಲ್ಲ, ಮರೆಯಲಾಗುತ್ತಿಲ್ಲ,
ಪ್ರೀತಿ,
ನಿನ್ನ ನೋಟ, ನಿನ್ನ ನಗುವಿಗಾಗಿ ಕಾತರಿಸುತ್ತಿದೆ ಮನ, ಪ್ರೀತಿ,ನಿನಗಾಗಿ ನನ್ನೆಲ್ಲಾ ಕನಸುಗಳನ್ನು ತ್ಯಾಗ ಮಾಡಲು ಸಿದ್ಧವಾಗುತ್ತಿದೆ,
ಪ್ರೀತಿ,
ನಿನ್ನ ಕಲ್ಪನೆಯಲ್ಲಿ ನನ್ನ ಜವಾಬ್ದಾರಿಗಳು ಕೊಚ್ಚಿಕೊಂಡು ಹೋಗುತ್ತಿವೆ,…ಮೋಹದ ವಿರುದ್ಧ ಈಜಾಡು ಎಂದು ಆತ್ಮ ಹೇಳುತ್ತಿದ್ದರೂ,
ಪ್ರೀತಿಯ ಜೊತೆಯೇ ಈಜಾಡು ಎಂದು ಮನಸ್ಸು ಹೇಳುತ್ತಿದೆ,… ಏನೂ ಮಾಡುವುದೋ ತಿಳಿಯುತ್ತಿಲ್ಲ, ಮತ್ತೊಮ್ಮೆ ನಿನ್ನನ್ನು ಬೇಡುತ್ತೇನೆ,ಕಾಡಬೇಡ ಪ್ರೀತಿ, ಮಳ್ಳಿಯಂತೆ, ಕಳ್ಳಿಯಂತೆ ಮತ್ತೆ ಮತ್ತೆ,…..ಮನಸ್ಸು ಗೊಂದಲದ ಗೂಡು.ಉತ್ತರ ಸಿಗುತ್ತಿಲ್ಲ. ಏನು ಮಾಡಲಿ ನಾನು……ಕಾಲದ ನಿರ್ಣಯಕ್ಕೆ ಕಾಯುತ್ತಾ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.