ಶಿವಮೊಗ್ಗ, ಡಿ.24:
ಕಾಡ ಮತ್ತು ನೀರಾವರಿ ಇಲಾಖೆಯ ಸಹಭಾಗಿತ್ವದಲ್ಲಿ ನಡೆಯುತ್ತಿರುವ ನಾಲೆಗಳಲ್ಲಿ ತುಂಬಿಕೊಂಡಿರುವ ಹೂಳನ್ನು ಎತ್ತುವ ಕಾಮಗಾರಿಯನ್ನು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು ಪ್ರಾಧಿಕಾರದ ವ್ಯಾಪ್ತಿಯ ಭದ್ರಾವತಿ ತಾಲೂಕು ಗೊಂದಿ ಬಲ ಭಾಗದ ನಾಲೆಯ ಬಾರಂದೂರು, ಮೊಸರಳ್ಳಿ, ಸೀಗೆಬಾಗಿ, ವೀರಾಪುರ, ಕಾಗೆಹಳ್ಳ, ಕುಮರಿ ನಾರಾಯಣಪುರ, ಹೊಸಳ್ಳಿ ಮತ್ತಿನ್ನೀತರ ಭಾಗಗಳಲ್ಲಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ತೆರಳಿ ವೀಕ್ಷಿಸಿದರು.
ಅಧಿಕಾರ ವಹಿಸಿಕೊಂಡ ನಂತರ ಭದ್ರಾವತಿ ಭಾಗದ ರೈತರು ಕಛೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಗೂ ಭದ್ರಾವತಿಯ ಹಲವಾರು ಭಾಗಗಳಲ್ಲಿ ಪ್ರವಾಸ ಕೈಗೊಂಡು ರೈತರನ್ನು ಅವರಿರುವ ಜಾಗಕ್ಕೆ ನೇರವಾಗಿ ಭೇಟಿ ಮಾಡಿದಾಗ ಕಾಲುವೆಗಳಲ್ಲಿ ಎತ್ತೆಚ್ಛವಾಗಿ ಹೂಳು ತುಂಬಿಕೊಂಡಿರುವ ಬಗ್ಗೆ ರೈತರು ವಿಶೇಷವಾಗಿ ನನ್ನ ಗಮನ ಸೆಳೆದಿದ್ದರು.
ಇಂದು ಹೂಳೆತ್ತುವ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದಾಗ ಹಲವಾರು ರೈತರು ನೀರಾವರಿ ಇಲಾಖೆ ಮತ್ತು ಕಾಡ ಅಧಿಕಾರಿಗಳ ಮೇಲೆ ಸಾಕಷ್ಟು ದೂರು ನೀಡಿದರು.
ಇಲಾಖೆಯ ವತಿಯಿಂದ ಯಾವುದೇ ರೀತಿಯ ಹೊಸ ಕಾಮಗಾರಿಗೆ ಚಾಲನೆ ನೀಡದೆ ಇರುವುದರಿಂದ ನಮಗೆ ಸಾಕಷ್ಟು ತೊಂದರೆಯಾಗಿರುವ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡರು.
ಇದಕ್ಕೆ ಉತ್ತರಿಸಿದ ಪವಿತ್ರಾ ರಾಮಯ್ಯ ಅವರು ಕೋವಿಡ್-19 ಮಹಾಮಾರಿಯಿಂದ ದೇಶಕ್ಕೆ ದೇಶವೇ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ದೇಶಕ್ಕೆ ಎಲ್ಲಾ ರೀತಿಯ ಕೊಡುಗೆ ನೀಡಿರುವ ರೈತ ವರ್ಗ ತಾಳ್ಮೆಯಿಂದ ವರ್ತಿಸಬೇಕು.
ರಾಜ್ಯದಲ್ಲಿರುವುದು ರೈತ ಕುಟುಂಬದಿಂದ ಬಂದು ನಿರಂತರ ಹೋರಾಟದ ಮೂಲಕ ಈ ನಾಡಿನ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಇದ್ದು, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳ ಬಗ್ಗೆ ಅವರ ಗಮನದಲ್ಲಿದೆ ಎಂದ ಅವರು ರೈತ ಸಂಘದ ಮೂಲಕ ಬಂದಿರುವ ನನಗೂ ಕೂಡ ನಿಮ್ಮ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿದೆ ಎಂದರು.
ಈಗಾಗಲೇ ಮುಖ್ಯಮಂತ್ರಿಗಳ ಬಳಿಗೆ ತೆರಳಿ ಕಾಡ ಪ್ರಾಧಿಕಾರದ ಸಂಪೂರ್ಣ ಮಾಹಿತಿ ನೀಡಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ಶೀಘ್ರದಲ್ಲೇ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ರೈತರಿಗೆ ಮನವರಿಕೆ ಮಾಡಿದರು.
ಈ ಒಂದು ವರ್ಷ ಅನ್ನದಾತರು ಸರ್ಕಾರದ ಜೊತೆ ನಿಲ್ಲಬೇಕು, ಆರ್ಥಿಕವಾಗಿ ಸಬಲರಾಗಿರುವ ರೈತ ವರ್ಗದವರು ನಿಮ್ಮ ಕೈಲಾದ ಸಣ್ಣ ಪುಟ್ಟ ಕೆಲಸಗಳನ್ನು ಸ್ವಯಂ ಪ್ರೇರಿತರಾಗಿ ಮಾಡಿಕೊಂಡು ಸರ್ಕಾರಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು, ನಾವೆಲ್ಲರೂ ಒಂದೇ ಕುಟುಂಬ ಎಂಬ ಭಾವನೆ ನಮ್ಮಲ್ಲಿರಬೇಕು ಎಂದು ಕಿವಿ ಮಾತು ಹೇಳಿದರು.
ಇದಕ್ಕೆ ಮನಪೂರ್ವಕವಾಗಿ ಒಪ್ಪಿಕೊಂಡ ರೈತರು ನಿಮ್ಮ ಸಲಹೆಯಂತೆ ಕೈಲಾದ ಸಣ್ಣ ಪುಟ್ಟ ಕೆಲಸಗಳನ್ನು ಸ್ವಯಂ ಪ್ರೇರಿತರಾಗಿ ಮಾಡಿಕೊಳ್ಳುತ್ತೇವೆ, ನಿಮ್ಮ ಗಮನಕ್ಕೂ ತರುತ್ತೇವೆ ಈ ಮೂಲಕ ಜಿಲ್ಲೆಗೆ ಮಾದರಿಯಾಗುತ್ತೇವೆ, ಮುಖ್ಯಮಂತ್ರಿಗಳೊಂದಿಗೆ ನಾವು ಟೊಂಕ ಕಟ್ಟಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.
ಈಗಾಗಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರೊಂದಿಗೆ ನರೇಗಾ ಯೋಜನೆಯಡಿ ಹೂಳು ತೆಗೆಯುವ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಮನವಿ ಸಲ್ಲಿಸಿದ್ದು ಅವರಿಂದ ಕೂಡ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಕ್ಕಿದೆ.ಕಳೆದ ವಾರ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ದೇಶನ ನೀಡಿರುವ ಫಲವಾಗಿ ಹೂಳು ಎತ್ತುವ ಕಾಮಗಾರಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ನರೇಗಾ ಮೂಲಕವೂ ಕಾಮಗಾರಿ ನಡೆಯಲಿದೆ, ಇದಕ್ಕೆ ಶಾಶ್ವತ ಪರಿಹಾರ ದೊರಕಲಿದೆ ಎಂದು ವಿಶ್ವಾಸ ತುಂಬಿದರು.
ಈ ಸಂದರ್ಭದಲ್ಲಿ ಕಾಡ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು, ರೈತ ಮುಖಂಡರು ಉಪಸ್ಥಿತರಿದ್ದರು.