ಶಿವಮೊಗ್ಗ,ಜ.೨೪: ವಿಪ್ರ ಯುವ ಪರಿಷತ್ ವತಿಯಿಂದ ಜ.೨೬ರಿಂದ ೨೮ರವರೆಗೆ ಗೋಪಾಳದ ಲಗಾನ್ ಕಲ್ಯಾಣ ಮಂದಿರದಲ್ಲಿ ತೇರಾ ಕೋಟಿ ಶ್ರೀರಾಮ ತಾರಕ ಜಪ ಸಾಂಗತ ಯಜ್ಞ ಏರ್ಪಾಡಿಸಲಾಗಿದೆ ಎಂದು ಪರಿಷತಿನ ಅಧ್ಯಕ್ಷ ರಾಘವೇಂದ್ರ ಉಡುಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಪ್ರ ಯುವ ಪರಿಷತ್, ಕಳೆದ ಒಂದು ವರ್ಷದಿಂದ ಹೆಬ್ಬಳ್ಳಿಯ ಶ್ರೀ ದತ್ತಾವಧೂತ ಮಹಾರಾಜರ ಅನುಗ್ರಹದಿಂದ ೧೩ ಕೋಟಿ ರಾಮನಾಮ ಜಪ ಪೂರೈಸಿದೆ. ಇದರ ಅಂಗವಾಗಿ ದತ್ತಾವಧೂತ ಮಹಾರಾಜರ ದಿವ್ಯಾ ಸಾನಿಧ್ಯದಲ್ಲಿ ಈ ಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜ.೨೬ರಿಂದ ೨೮ರವರೆಗೆ ನಡೆಯಲಿರುವ ಈ ಕಾರ್ಯಕ್ರಮಗಳಲ್ಲಿ ಪ್ರತಿದಿನ ಗಣಪತಿ ಪೂಜೆ, ಹೋಮ, ಪ್ರಕಾರಶುದ್ಧಿ, ಪುಣ್ಯಃ, ಪೂಜೆ ಕಾರ್ಯಕ್ರಮಗಳು ನಡೆಯುತ್ತವೆ. ೨೬ರ ಸಂಜೆ ೬ ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳುತ್ತದೆ. ರಾತ್ರಿ ೮ಕ್ಕೆ ಶ್ರೀಕ್ಷೇತ್ರ ಹೆಬ್ಬಳ್ಳಿಯಿಂದ ಶ್ರೀಮಹಾರಾಜರ ಪಾದುಕೆ ಪರಿವಾರದೊಂದಿಗೆ ಮಹಾರಾಜರ ಪುರ ಪ್ರವೇಶ ಆಗಲಿದೆ ಎಂದರು.
೨೭ ಶನಿವಾರ ಬೆಳಿಗ್ಗೆ ೭ ರಿಂದ ರಾಮ ತಾರಕಯಾಗ ಪ್ರಾರಂಭಗೊಳ್ಳಲಿದೆ. ೧೩ ಕುಂಡದಲ್ಲಿ ಋತ್ವಿಜರಿಂದ ಯಾಗ ನಡೆಯಲಿದೆ. ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮಿಗಳು ದಕ್ಷಿಣಾಮ್ನಾಯ ಶಾರದಪೀಠ ಶ್ರೀ ಕ್ಷೇತ್ರ ಕೂಡ್ಲಿ, ಶ್ರೀ ಅರ್ಜುನ್ ಅವಧೂತ್ ಮಹಾರಾಜರು ಮೈಸೂರು, ಶ್ರೀ ಪರಂಪರಾ ಅವಧೂತ ಶ್ರೀ ಸತೀಶ್ ಶರ್ಮಾಜಿ ಅರಸೀಕೆರೆ ಹಾಗೂ ಶ್ರೀ ವಿನಯಾನಂದ ಸರಸ್ವತಿ ರಾಮಕೃಷ್ಣ ಆಶ್ರಮ ಶಿವಮೊಗ್ಗ ಇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದರು.
೧೧:೩೦ಕ್ಕೆ ಸೀತಾರಾಮ ಕಲ್ಯಾಣ ನಡೆಯಲಿದ್ದು, ನಂತರ ಗುರುಗಳ ಆಶೀರ್ವಚನ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. ಸಂಜೆ ೪ ರಿಂದ ೫ ರವರೆಗೆ ರಾಮನ್ ಸಿಸ್ಟರ್ ಇವರಿಂದ ವೀಣಾ ವಾದನ, ಸಂಜೆ ೬:೦೦ ರಿಂದ ರಾಮಕೃಷ್ಣ ಹೆಗಡೆ ಇವರ ಭಾಗವತಿಕೆಯಲ್ಲಿ ಲವಕುಶ ಪ್ರಸಂಗ ಯಕ್ಷಗಾನ ನಡೆಯಲಿದೆ. ನಂತರ ೮:೩೦ ಕ್ಕೆ ಶೇಜಾರುತಿ ಪ್ರಸಾದ ವಿನಿಯೋಗವಾಗಲಿದೆ.
೨೮ರ ಭಾನುವಾರ ಬೆಳಗ್ಗೆ ೭ರಿಂದ ಪುನಃ ರಾಮ ತಾರಕ್ ಯಾಗ ಗೋ ಪೂಜೆಯೊಂದಿಗೆ ಮುಂದುವರೆಯಲಿದ್ದು, ೧೦:೩೦ಕ್ಕೆ ಪೂರ್ಣಾಹುತಿ ನಂತರ ೧೧ ಗಂಟೆಗೆ ಶ್ರೀರಾಮನಿಗೆ ಪಟ್ಟಾಭಿಷೇಕ ನಡೆಯಲಿದೆ. ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದಂಗಳವರು ಭೀಮನ ಕಟ್ಟೆ, ಶ್ರೀ ಶ್ರೀ ರಾಜಶೇಖರಾನಂದ ಸ್ವಾಮಿಗಳು, ಶ್ರೀ ವಜ್ರದೇಹಿ ಮಠ ಮಂಗಳೂರು, ಇವರುಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರುಗಳಾದ ಚನ್ನಬಸಪ್ಪ, ಶಾರದ ಪೂರಾನಾಯ್ಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು, ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಅರುಣ್ ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲಾ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ ಎಂದರು.
ದಿನಾಂಕ ೨೭ ಹಾಗೂ ೨೮ರಂದು ಶ್ರೀದತ್ತಾವಧೂತ ಮಹಾರಾಜರಿಂದ ರಾಮ ತಾರಕ ಮಂತ್ರ ಉಪದೇಶ ಹಾಗೂ ಮಹಾರಾಜರ ಪಾದ ಪೂಜೆಗೆ ಅವಕಾಶವಿರುತ್ತದೆ. ಭಕ್ತಾದಿಗಳು ಈ ದಿವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಮನ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವೆಂಕಟೇಶರಾವ್, ಸುಬ್ರಹ್ಮಣ್ಯ ಭಟ್, ಜಿ.ಕೆ. ಮಾಧವಮೂರ್ತಿ,ಪ್ರದೀಪ್, ಸುಮುಖ, ವಿನಯ್, ಹರ್ಷ ಮೊದಲಾದವರು ಇದ್ದರು.