ಕಳೆದ ವಾರ ದಿಲ್ಲಿಗೆ ಹೋದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದರು.ಈ ಸಂದರ್ಭದಲ್ಲಿ ಈಶ್ವರಪ್ಪ ಅವರ ಜತೆ ಮಾತನಾಡಿದ ಅಮಿತ್‌ ಷಾ,ಪಾರ್ಲಿಮೆಂಟ್‌ ಚುನಾವಣೆಗೆ ರಾಜ್ಯ ಬಿಜೆಪಿಯನ್ನು ಅಣಿಗೊಳಿಸಲು ಇರುವ ತೊಡಕುಗಳೇನು ಅಂತ ಕೇಳಿದ್ದಾರೆ.

ಅಮಿತ್‌ ಷಾ ಅವರು ಹೀಗೆ ಕೇಳಿದ್ದೇ ತಡ,ಈಶ್ವರಪ್ಪ ಅವರು ಕೂಡಾ ಮುಕ್ತವಾಗಿ ಮಾತನಾಡಿ, ನರೇಂದ್ರಮೋದಿ ಅವರನ್ನು ಮರಳಿ ಪ್ರಧಾನಿ ಹುದ್ದೆಗೇರಿಸಲು ಕರ್ನಾಟಕದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ಉತ್ಸಾಹ ನಮ್ಮ ಕಾರ್ಯಕರ್ತರಲ್ಲಿದೆ.ಆದರೆ ಅವರ ಈ ಉತ್ಸಾಹವನ್ನು ಎನ್ಕ್ಯಾಶ್‌ ಮಾಡಿಕೊಳ್ಳಲು ಮೂರು ಅಡ್ಡಿಗಳಿವೆ ಸಾರ್‌ ಎಂದಿದ್ದಾರೆ.

ಈಶ್ವರಪ್ಪ ಅವರ ಮಾತು ಕೇಳಿ ಕುತೂಹಲಗೊಂಡ ಅಮಿತ್‌ ಷಾ ಅವರು,ಮೂರು ಸಮಸ್ಯೆಗಳಿವೆಯೇ?ಅವೇನು?ಅಂತ ಕೇಳಿದರಂತೆ.ಅದಕ್ಕುತ್ತರಿಸಿದ ಈಶ್ವರಪ್ಪ:ಹೌದು ಸಾರ್‌,ಲೋಕಸಭಾ ಚುನಾವಣೆಯನ್ನು ಎದುರಿಸುವ ವಿಷಯದಲ್ಲಿ ಕರ್ನಾಟಕದ ಬಿಜೆಪಿ ಘಟಕ ಮೂರು ಸಮಸ್ಯೆಗಳನ್ನು ಎದುರಿಸುತ್ತಿದೆ.ಅದನ್ನು ನೀವು ಬಿಟ್ಟರೆ ಬೇರೆ ಯಾರೂ ಪರಿಹರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಅಷ್ಟೇ ಅಲ್ಲ,ಒಂದೊಂದಾಗಿ ಆ ಸಮಸ್ಯೆಗಳನ್ನು ವಿವರಿಸತೊಡಗಿದ ಅವರು:ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಹಲವರಿಗೆ ನಿರಾಸೆಯಾಗಿದೆ.ಹೀಗಾಗಿ ಅವತ್ತು ಟಿಕೆಟ್‌ ಪಡೆದವರು ಮತ್ತು ಟಿಕೆಟ್‌ ಪಡೆಯದವರ ಮಧ್ಯೆ ಹೊಂದಾಣಿಕೆಯ ಕೊರತೆ ಇದೆ.ನೀವು ಸರಿಪಡಿಸಬೇಕಾದ ನಂಬರ್‌ ಒನ್‌ ಸಮಸ್ಯೆ ಇದು.

ಇದೇ ರೀತಿ ಶೋಷಿತ ಸಮುದಾಯಗಳನ್ನು ಒಂದುಗೂಡಿಸುವ ವಿಷಯದಲ್ಲಿ ಆಗಿರುವ ಲೋಪವೇ ಈಗಿನ ನಂಬರ್‌ ಟೂ ಸಮಸ್ಯೆ.ಅಂದ ಹಾಗೆ ಕರ್ನಾಟಕದ ನೆಲೆಯಲ್ಲಿ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳು ದೊಡ್ಡ ಮಟ್ಟದಲ್ಲೇ ಬಿಜೆಪಿ ಜತೆಗಿವೆ.ಆದರೆ ಸಂಘಟನೆಯ ವಿಷಯದಲ್ಲಿ ಈ ಸಮುದಾಯಗಳಿಗೆ ಪ್ರಾಮಿನೆನ್ಸು ನೀಡದೇ ಇರುವುದರಿಂದ ಸಮಸ್ಯೆಯಾಗಿ ಪರಿಣಮಿಸಿದೆ.

ಇದೇ ರೀತಿ ರಾಜ್ಯಬಿಜೆಪಿ ಎದುರಿಸುತ್ತಿರುವ ಮೂರನೇ ಸಮಸ್ಯೆ ಎಂದರೆ ನಾಯಕರ ಮಟ್ಟದಲ್ಲಿರುವ ಅಸಮಾಧಾನ.ಇವತ್ತು ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿರಬಹುದು.ಮಾಜಿ ಸಚಿವ ವಿ.ಸೋಮಣ್ಣ ಇರಬಹುದು.ಇಂತವರೆಲ್ಲ ರಾಜ್ಯ ನಾಯಕತ್ವದ ವಿರುದ್ಧ ತಿರುಗಿ ಬಿದ್ದಿದ್ದಾರೆ.ತಕ್ಷಣ ಇವರನ್ನು ಸಮಾಧಾನಿಸುವ ಕೆಲಸವಾಗದೆ ಇದ್ದರೆ ಪಾರ್ಲಿಮೆಂಟ್‌ ಚುನಾವಣೆಯಲ್ಲಿ ನಿಶ್ಚಿತವಾಗಿ ನಮಗೆ ಡ್ಯಾಮೇಜ್‌ ಆಗುತ್ತದೆ.

ಹೀಗೆ ಪಕ್ಷದ ರಾಜ್ಯ ಘಟಕದಲ್ಲಿ ಉದ್ಭವಿಸಿರುವ ಈ ಮೂರು ಸಮಸ್ಯೆಗಳನ್ನು ನಿವಾರಿಸಿದರೆ ನೋ ಡೌಟ್‌ ಸಾರ್‌,ನಾವು ಪಾರ್ಲಿಮೆಂಟ್‌ ಚುನಾವಣೆಯಲ್ಲಿ ಇಪ್ಪತ್ತೆಂಟಕ್ಕೆ ಇಪ್ಪತ್ತೆಂಟೂ ಸೀಟುಗಳನ್ನು ಗೆಲ್ಲಲು ರೆಡಿ ಆಗಬಹುದು ಅಂತ ವಿವರಿಸಿದ್ದಾರೆ.

ಈಶ್ವರಪ್ಪ ಅವರ ಮಾತನ್ನು ಸಮಾಧಾನದಿಂದ ಕೇಳಿದ ಅಮಿತ್‌ ಷಾ:ಬಹಳ ಚೆನ್ನಾಗಿ ಹೇಳಿದಿರಿ ಈಶ್ವರಪ್ಪಾಜೀ,ನೀವು ಹೇಳಿದ ಈ ಮಾತನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ.ಆದಷ್ಟು ಬೇಗ ಕರ್ನಾಟಕಕ್ಕೆ ಬಂದು ಅಲ್ಲೇ ಈ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದಿದ್ದಾರೆ.ಅಷ್ಟೇ ಅಲ್ಲ,ಈಗ ನೀವು ಪಕ್ಷ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿದಿರಿ.ಆದರೆ ಇದನ್ನು ಹೊರತುಪಡಿಸಿ ಬೇರೆ ಏನಾದರೂ ಹೇಳುವುದಿದೆಯೇ?ಅಂತ ಪ್ರಶ್ನಿಸಿದ್ದಾರೆ.

ಆಗ ಅರೆಕ್ಷಣ ಸುಮ್ಮನಿದ್ದ ಈಶ್ವರಪ್ಪ ಅವರು:ಹೇಳುವುದಿದೆ ಸಾರ್‌,ಈ ಹಿಂದೆ ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ ಆರೋಪವೊಂದಕ್ಕೆ ಗುರಿ ಮಾಡಿ ನನ್ನನ್ನು ಮಂತ್ರಿ ಮಂಡಲದಿಂದ ದೂರವಿಡಲಾಯಿತು.ಮುಂದೆ ನಾನು ನಿರ್ದೋಷಿ ಎಂದು ಸಾಬೀತಾದರೂ ಮರಳಿ ನನಗೆ ಮಂತ್ರಿಗಿರಿ ನೀಡಲಿಲ್ಲ.ಕೇಳಿದರೆ ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರೆಲ್ಲ ಇವತ್ತು,ನಾಳೆ ಅಂತ ದಿನ ದೂಡುತ್ತಾ ಬಂದರು.ಇಷ್ಟಾದರೂ ನಾನು ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಿಲ್ಲ ಎಂದರು.

ಈ ಹಂತದಲ್ಲಿ ಅಮಿತ್‌ ಷಾ ಅವರು:ಯಸ್‌,ಯಸ್‌,ಐ ನೋ ಎಂದಾಗ ಪುನ: ಮುಂದುವರಿಸಿದ ಈಶ್ವರಪ್ಪ ಅವರು,ಕಳೆದ ವಿಧಾನಸಬಾ ಚುನಾವಣೆಯ ಸಂದರ್ಭದಲ್ಲೂ ನನಗೆ ಟಿಕೆಟ್‌ ನಿರಾಕರಿಸಲಾಯಿತು.ಕೇಳಿದರೆ ಚುನಾವಣಾ ರಾಜಕೀಯದಿಂದ ದೂರವಿರಿ ಎಂಬ ಸಂದೇಶ ನೀಡಲಾಯಿತು.ಆಗಲೂ ನಾನೇನೂ ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಿಲ್ಲ.ಬದಲಿಗೆ,ನನಗೆ ಟಿಕೆಟ್‌ ಕೊಡದಿದ್ದರೆ ಬೇಡ,ನನ್ನ ಮಗ ಕಾಂತೇಶ್‌ ಅವರಿಗಾದರೂ ಟಿಕೆಟ್‌ ಕೊಡಿ ಅಂತ ಹೇಳಿದೆ.ಆಗ ಸ್ವತ: ನೀವೇ:ಮಗನಿಗೆ ಬೇಡ,ನಿಮ್ಮ ಸೊಸೆ ಸ್ಪರ್ಧಿಸಲಿ.ಟಿಕೆಟ್‌ ಕೊಡುತ್ತೇವೆ ಎಂದಿರಿ.ಆದರೆ ನನಗೆ ನನ್ನ ಕುಟುಂಬದ ಹೆಣ್ಣು ಮಕ್ಕಳನ್ನು ರಾಜಕೀಯಕ್ಕೆ ತರುವುದು ಇಷ್ಟವಿಲ್ಲ ಎಂಬ ಕಾರಣಕ್ಕಾಗಿ ನಾನು ಬೇಡ ಎಂದೆ.

ಆದರೆ ಈಗ ಹೇಳುತ್ತಿದ್ದೇನೆ.ಈ ಸಲ ಪಾರ್ಲಿಮೆಂಟ್‌ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಲು ನನ್ನ ಮಗ ಕಾಂತೇಶ್‌ ಬಯಸಿದ್ದಾನೆ.ಪಕ್ಷದ ಹಿರಿಯರ ಒಪ್ಪಿಗೆ ಪಡೆದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ.ಹೀಗಾಗಿ ಈ ಬಾರಿ ಅವನಿಗೆ ಟಿಕೆಟ್‌ ಕೊಡಿ.ಹಾಗೆಯೇ ಪಕ್ಷದ ಕೆಲಸ ಮಾಡಲು ಉತ್ಸುಕನಾಗಿರುವ ನನಗೆ ಸಂಘಟನೆಯಲ್ಲಿ ಏನಾದರೂ ಜವಾಬ್ದಾರಿ ಕೊಡಿ.ಅಂದ ಹಾಗೆ ನಾನು ಯಾವತ್ತೂ ಪಕ್ಷ ನಿಷ್ಟ.ಹಾಗೆಂದ ಮಾತ್ರಕ್ಕೆ ನನಗೆ ಗವರ್ನರ್‌ ಗಿರಿ ಕೊಡಿ ಅಂತೇನೂ ನಿಮ್ಮ ಬಳಿ ಕೇಳುವುದಿಲ್ಲ ಎಂದಿದ್ದಾರೆ.

ಹೀಗೆ ಅವರಾಡಿದ ಮಾತುಗಳನ್ನು ಕೇಳಿದ ಅಮಿತ್‌ ಷಾ ಅವರು ಈಶ್ವರಪ್ಪ ಅವರ ಕೈ ಹಿಡಿದು,ನೀವು ಹೇಳಿದ್ದೆಲ್ಲ ನನ್ನ ಮನಸ್ಸಿನಲ್ಲಿರುತ್ತದೆ.ಯೋಚಿಸಬೇಡಿ ಈಶ್ವರಪ್ಪಾಜೀ ಅಂತ ಬೀಳ್ಕೊಟ್ಟರಂತೆ.

ವಿಜಯೇಂದ್ರ ಇಲ್ಲಿಗೆ
ಯತ್ನಾಳ್‌ ದಿಲ್ಲಿಗೆ


ಅಂದ ಹಾಗೆ ಕರ್ನಾಟಕದಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಅನುಸರಿಸಿದ ಸೂತ್ರವೊಂದನ್ನು ಮರಳಿ ಜಾರಿಗೊಳಿಸಲು ದಿಲ್ಲಿಯ ಬಿಜೆಪಿ ವರಿಷ್ಟರು ನಿರ್ಧರಿಸಿದ್ದಾರೆ.

ಇಪ್ಪತ್ತು ವರ್ಷಗಳ ಹಿಂದೆ,ಅಂದರೆ ೨೦೦೪ ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತಲ್ಲ?ಆ ಸಂದರ್ಭದಲ್ಲಿ ರಾಜ್ಯ ಘಟಕದ ನಾಯಕತ್ವಕ್ಕಾಗಿ ಯಡಿಯೂರಪ್ಪ ಮತ್ತು ಅನಂತಕುಮಾರ್‌ ಅವರ ನಡುವೆ ತೀವ್ರ ಪೈಪೋಟಿ ಶುರುವಾಗಿತ್ತು.

ಈ ಪೈಪೋಟಿ ಯಾವ ಮಟ್ಟಕ್ಕೆ ಹೋಯಿತೆಂದರೆ ಅನಂತಕುಮಾರ್‌ ಅವರ ಹೊಡೆತ ತಾಳಲಾಗದ ಯಡಿಯೂರಪ್ಪ,ಅದುವರೆಗೂ ತಾವು ಹೊದ್ದುಕೊಂಡಿದ್ದ ರೈತ ನಾಯಕ ಎಂಬ ಪೋಷಾಕನ್ನು ಏಕಾಏಕಿ ಕಳಚಿಟ್ಟರು.ಮತ್ತು ಅಷ್ಟೇ ಬೇಗ ಲಿಂಗಾಯತ ನಾಯಕ ಎಂಬ ಡ್ರೆಸ್ಸು ತೊಟ್ಟು ಬೆಲ್ಟ್ ಬಿಗಿ ಮಾಡಿಕೊಂಡರು.

ಅವತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಲು ಅನಂತಕುಮಾರ್‌ ತಮಗೆ ಅಡ್ಡಗಾಲು ಹಾಕಿದಾಗ ತಮ್ಮ ಹುಟ್ಟುಹಬ್ಬದ ನೆಪದಲ್ಲಿ ಯಡಿಯೂರಪ್ಪ ಭರ್ಜರಿ ಸಮಾವೇಶವೊಂದನ್ನು ನಡೆಸಿದರು.ಮತ್ತು ಈ ಸಮಾವೇಶದಲ್ಲಿ ಭಾಗವಹಿಸಿದ ಪ್ರಮುಖ ಲಿಂಗಾಯತ ಮಠಾಧೀಶರು:ತಮ್ಮ ಸಮುದಾಯವನ್ನು ಕಡೆಗಣಿಸಿದರೆ ಸಹಿಸುವುದಿಲ್ಲ ಎಂಬ ಸಂದೇಶ ಬಿಜೆಪಿ ವರಿಷ್ಟರಿಗೆ ತಲುಪುವಂತೆ ಮಾಡಿದರು.

ಯಾವಾಗ ಈ ಎಪಿಸೋಡು ನಡೆಯಿತೋ?ಇದಾದ ನಂತರ ದಿಲ್ಲಿಯ ಬಿಜೆಪಿ ನಾಯಕರು ಯಡಿಯೂರಪ್ಪ ಇಲ್ಲಿಗೆ,ಅನಂತಕುಮಾರ್‌ ದಿಲ್ಲಿಗೆ ಎಂಬ ಸೂತ್ರವನ್ನು ರಚಿಸಿದರು.ಈ ಸೂತ್ರದನುಸಾರ ಮುಂದೆ ಯಡಿಯೂರಪ್ಪ ಕರ್ನಾಟಕದಲ್ಲಿ ಬಿಜೆಪಿಯ ಸಾಮ್ರಾಟನಾಗಿ ಮೆರೆದರೆ,ಅನಂತಕುಮಾರ್‌ ಕೊನೆಯ ತನಕ ದಿಲ್ಲಿಯಲ್ಲೇ ಉಳಿದರು.

ಈಗ ರಾಜ್ಯ ಬಿಜೆಪಿ ಅನುಭವಿಸುತ್ತಿರುವ ಸಂಕಷ್ಟವೊಂದನ್ನು ಇದೇ ಸೂತ್ರದನುಸಾರ ಪರಿಹರಿಸಲು ಬಿಜೆಪಿ ವರಿಷ್ಟರು ಯೋಚಿಸಿದ್ದಾರೆ.ವಿಜಯೇಂದ್ರ ಇಲ್ಲಿಗೆ,ಯತ್ನಾಳ್‌ ದಿಲ್ಲಿಗೆ ಎಂಬುದೇ ಈ ಸೂತ್ರ.ಎಲ್ಲಿಯ ತನಕ ಯತ್ನಾಳ್‌ ರಾಜ್ಯ ರಾಜಕೀಯದಲ್ಲಿ ಉಳಿದುಕೊಳ್ಳುತ್ತಾರೋ?ಅಲ್ಲಿಯವರೆಗೂ ವಿಜಯೇಂದ್ರ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂಬುದು ವರಿಷ್ಟರ ಲೆಕ್ಕಾಚಾರ.

ಹೀಗಾಗಿ ಪಾರ್ಲಿಮೆಂಟ್‌ ಚುನಾವಣೆ ಮುಗಿದ ನಂತರ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ರಾಜ್ಯಸಭೆಗೆ ತರುವುದು,ನಂತರ ನರೇಂದ್ರಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲಿ ಅವರಿಗೆ ಜಾಗ ಕಲ್ಪಿಸುವುದು ಖುದ್ದು ಅಮಿತ್‌ ಷಾ ಅವರ ಲೆಕ್ಕಾಚಾರ.

ಹೀಗಾಗಿ,ಇತ್ತೀಚೆಗೆ ದಿಲ್ಲಿಗೆ ಆಗಮಿಸಿದ್ದ ಯತ್ನಾಳ್‌ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಬಗ್ಗೆ ಏನೇ ದೂರು ಕೊಟ್ಟರೂ:ಚುನಾವಣೆಯ ತನಕ ಮೌನವಾಗಿರಿ ಎಂಬ ಸಂದೇಶ ನೀಡಿ ವಾಪಸ್ಸು ಕಳಿಸಲಾಗಿದೆ.

ಕುಮಾರ ಪರ್ವಕ್ಕೆ ಕ್ಷಣಗಣನೆ


ಈ ಮಧ್ಯೆ ಜೆಡಿಎಸ್‌ ರಾಜ್ಯಾಧ್ಯಕ್ಷ,ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜನವರಿ ೧೭ ಇಲ್ಲವೇ ೧೮ ರಂದು ದಿಲ್ಲಿಗೆ ದೌಡಾಯಿಸಲಿದ್ದಾರೆ.ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನೆಗೂ ಮುನ್ನ ದಿಲ್ಲಿಗೆ ಬನ್ನಿ ಅಂತ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಆಹ್ವಾನ ಇದಕ್ಕೆ ಕಾರಣ.

ಹೀಗೆ ಪ್ರಧಾನಿ ಮೋದಿ ನೀಡಿರುವ ಆಹ್ವಾನದ ಹಿನ್ನೆಲೆಯಲ್ಲಿ ದಿಲ್ಲಿಗೆ ಹೋಗಲು ಕುಮಾರಸ್ವಾಮಿ ಅಣಿಯಾಗುತ್ತಿದ್ದಂತೆಯೇ ರಾಜಕೀಯ ವಲಯಗಳಲ್ಲಿ ಕುತೂಹಲಕಾರಿ ಚರ್ಚೆ ಆರಂಭವಾಗಿದೆ.ಜನವರಿ೨೨ ರ ನಂತರ ವಿಸ್ತರಣೆಯಾಗಲಿರುವ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಮಂತ್ರಿ ಮಂಡಲದಲ್ಲಿ ಕುಮಾರಸ್ವಾಮಿ ಸೇರಬಹುದೇ?ಎಂಬುದು ಈ ಚರ್ಚೆಯ ಮುಖ್ಯ ವಿಷಯ.

ಅಂದ ಹಾಗೆ ವಿಸ್ತರಣೆಯಾಗಲಿರುವ ಮೋದಿ ಸಂಪುಟಕ್ಕೆ ದೇಶದ ನಾಲ್ಕು ಮಂದಿ ಮಾಜಿ ಮುಖ್ಯಮಂತ್ರಿಗಳು ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ಸಹಜವಾಗಿಯೇ ಈ ಪಟ್ಟಿಯಲ್ಲಿಕುಮಾರಸ್ವಾಮಿ ಹೆಸರಿರಬಹುದೇ?ಎಂಬ ಕುತೂಹಲ ಹಲವರಲ್ಲಿ ಆರಂಭವಾಗಿದೆ.

ಹೀಗಾಗಿ ಈ ಸಲ ದಿಲ್ಲಿಗೆ ಹೋಗಲಿರುವ ಕುಮಾರಸ್ವಾಮಿ ವಾಪಸ್ಸು ಬೆಂಗಳೂರಿಗೆ ಬರುವ ಹೊತ್ತಿಗೆ ಕೇಂದ್ರ ಮಂತ್ರಿಯಾಗುವುದು ನಿಕ್ಕಿಯಾಗಿರುತ್ತದೆ ಎಂಬುದು ಇಂತವರ ಮಾತು.ಅದೇನೇ ಇರಲಿ,ಆದರೆ ಸಧ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರನ್ನು ಕಂಡರೆ ಕುಮಾರಸ್ವಾಮಿ ಅವರಿಗೆ ತುಂಬ ಗೌರವ.

೨೦೧೮ ರಲ್ಲಿ ಕಾಂಗ್ರೆಸ್‌ ಜತೆ ಸೇರಿ ಮೈತ್ರಿ ಸರ್ಕಾರ ರಚಿಸಿದ ನಂತರದ ದಿನಗಳಲ್ಲಿ ಒಮ್ಮೆ ತಮ್ಮನ್ನು ದೆಹಲಿಗೆ ಕರೆಸಿಕೊಂಡಿದ್ದ ಮೋದಿಯವರು ನಿಮ್ಮ ಮೈತ್ರಿ ಪಕ್ಷ ನಿಮಗೆ ಕೈ ಕೊಡುತ್ತದೆ.ಹೀಗಾಗಿ ನಮ್ಮ ಬೆಂಬಲ ಪಡೆಯಿರಿ.ಐದು ವರ್ಷ ಮುಖ್ಯಮಂತ್ರಿಯಾಗಿರಿ ಎಂದು ಗಿಣಿಗೆ ಹೇಳಿದಂತೆ ಹೇಳಿದ್ದರು.ಆದರೆ ಅವತ್ತು ನಾನೇ ಹಿಂಜರಿದೆ.ಪರಿಣಾಮ ಕಾಂಗ್ರೆಸ್‌ ನಾಯಕರ ಹೊಡೆತದಿಂದ ಸರ್ಕಾರ ಬಿದ್ದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಿತು ಎಂಬುದು ಕುಮಾರಸ್ವಾಮಿ ನೋವು.

ಅದೇ ರೀತಿ ಈ ಸಲ ಬಿಜೆಪಿ ಜತೆಗಿನ ಮೈತ್ರಿ ಮಾತುಕತೆ ಸಂದರ್ಭದಲ್ಲಿ ಮೋದಿಯವರು ಹೇಳಿದ ಒಂದು ಮಾತು ಕುಮಾರಸ್ವಾಮಿ ಅವರ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತು ಬಿಟ್ಟಿದೆ.ಅದೆಂದರೆ,ಯಾವ ಕಾರಣಕ್ಕೂ ನೀವು ನನ್ನಿಂದ ದೂರ ಹೋಗಬೇಡಿ.ನಿಮ್ಮನ್ನು ತುಂಬ ಎತ್ತರದ ಸ್ಥಾನಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನದು ಎಂಬುದು.

ಹೀಗಾಗಿ ಇಷ್ಟವೋ?ಕಷ್ಟವೋ?ಇನ್ನು ಮುಂದೆ ನರೇಂದ್ರಮೋದಿ ಏನು ಹೇಳುತ್ತಾರೋ?ಅದನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂಬ ನಿರ್ಧಾರಕ್ಕೆ ಕುಮಾರಸ್ವಾಮಿ ಬಂದಿದ್ದಾರೆ.ಇಂತಹ ಮನ:ಸ್ಥಿತಿಯಲ್ಲಿರುವ ಕುಮಾರಸ್ವಾಮಿ ಅವರನ್ನು ಮೋದಿ ಈಗಲೇ ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡು ಪಾರ್ಲಿಮೆಂಟ್‌ ಚುನಾವಣೆಯ ಅಖಾಡಕ್ಕೆ ಇಳಿಸುತ್ತಾರೋ?ಅಥವಾ ಮೊದಲು ಅಖಾಡಕ್ಕಿಳಿಸಿ ಪಾರ್ಲಿಮೆಂಟ್‌ ಚುನಾವಣೆಯ ನಂತರ ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳುತ್ತಾರೋ?ಎಂಬುದು ಸಧ್ಯದ ಕುತೂಹಲ.

ಮುಂದೇನು ಕತೆಯೋ?

ಆರ್.ಟಿ.ವಿಠ್ಠಲಮೂರ್ತಿ

By admin

ನಿಮ್ಮದೊಂದು ಉತ್ತರ

You missed

error: Content is protected !!