ಶಿವಮೊಗ್ಗ,ಜ.೧೩:ಯುವನಿಧಿ ಹೆಸರಿನಲ್ಲಿ ಯುವಜನತೆಯ ಕಣ್ಣಿಗೆ ಮಣ್ಣೆರೆಚ್ಚುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಇಂದಿಲ್ಲಿ ಆರೋಪಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಅಲೆಯಲ್ಲಿ ಅಧಿಕಾರಕ್ಕೆ ಬಂದಿದ್ದು, ಜನರ ತೆರಿಗೆ ಹಣ್ಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ನಾಲ್ಕು ಗ್ಯಾಂಟಿಗಳು ವಿಫಲವಾಗಿದ್ದರೂ

ಕೂಡ ೫ನೇ ಗ್ಯಾರಂಟಿಯಾದ ಯುವ ನಿಧಿ ಗ್ಯಾರಂಟಿಯನ್ನು ಯಾವ ಪೂರ್ವ ಸಿದ್ಧತೆ ಇಲ್ಲದೇ ಚುನಾವಣಾ ಪೂರ್ವದಲ್ಲಿ ಆಶ್ವಾಸನೆ ನೀಡಿದಂತೆ ಜಾರಿಯಲ್ಲಿ ನೀಡುತ್ತಿಲ್ಲ. ಕೇವಲ ಈ ವರ್ಷ ಉತ್ತೀರ್ಣರಾದವರಿಗೆ ಅದರಲ್ಲೂ ೬ ತಿಂಗಳ ನಂತರ ಜಾರಿಗೊಳಿಸುವುದಾಗಿ ಹೇಳುತ್ತಿರುವುದು ವಿದ್ಯಾವಂತ ಯುವಕರಿಗೆ ಮೋಸ ಮಾಡಿದಂತಾಗಿದೆ ಎಂದರು.


೨೦೨೩ರಲ್ಲಿ ಪದವಿ ಪಡೆದಿರಬೇಕು ಎನ್ನುವುದಾದರೆ, ಅದಕ್ಕೂ ಹಿಂದಿನವರು ಎಲ್ಲಿಗೆ ಹೋಗಬೇಕು. ಅದರಲ್ಲೂ ರಾಜ್ಯದಲ್ಲಿ ೬ ವಿವಿಗಳಿವೆ. ಈ ಎಲ್ಲ ವಿವಿಗಳ ಪದವಿಗಳ ಫಲಿತಾಂಶವು ಸುಮಾರು ೪ ತಿಂಗಳು ವಿಳಂಬವಾಗಿದೆ. ರಾಜ್ಯ ಸರ್ಕಾರದ ನಿಯಮದಂತೆ ಪದವಿ ಪಡೆದು ೬ ತಿಂಗಳಾದ ಬಳಿಕ ಅರ್ಜಿ ಹಾಕಲು ಅರ್ಹ ಎನ್ನುವುದಾದರೆ, ಅರ್ಜಿ ಹಾಕಲು ಈ ವರ್ಷ ಪಾಸಾದವರು ಅರ್ಹರೇ ಆಗುವುದಿಲ್ಲ. ಆಗಾಗಿ ಇದು ಯುವಕರನ್ನು ನಡುನೀರಿನಲ್ಲಿ ಕೈಬಿಟ್ಟಂತಾಗಿದೆ ಎಂದರು.


ರಾಜ್ಯ ಸರ್ಕಾರದ ಎಲ್ಲಾ ಗ್ಯಾರಂಟಿಗಳಿಗೂ ಕೂಡ ನಿಯಮಗಳನ್ನು ಹಾಕಲಾಗುತ್ತಿದೆ. ಈ ನಿಯಮಗಳನ್ನು ಹಾಕಲು ಪ್ರಮುಖವಾದ ಕಾರಣ ಫಲಾನುಭವಿಗಳನ್ನು ಕಡಿಮೆ ಮಾಡುವುದೇ ಆಗಿದೆ. ಅಲ್ಲದೇ ಗ್ಯಾರಂಟಿಗಳಿಂದ ರಾಜ್ಯಕ್ಕೆ ಆರ್ಥಿಕ ಹೊರೆಯಾಗುತ್ತದೆ ಇದರಿಂದ ಅಭಿವೃದ್ಧಿಯೇ ಇಲ್ಲವಾಗಿದೆ. ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯ ಸರ್ಕಾರ ಎಂದರು.


ಫ್ರೀಡಂ ಪಾರ್ಕ್‌ನ್ನು ತೆರವುಗೊಳಿಸಿದ್ದು, ನಾವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಅವರಿಗೆ ಮಾಹಿತಿಯ ಕೊರತೆ ಇದೆ. ಇದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಮಾಡಿದ ಕೆಲಸವಾಗಿದೆ. ೨೦೧೦-೧೧ರ ಬಜೆಟ್‌ನಲ್ಲಿಯೇ ಬಿ.ಎಸ್.ಯಡಿಯೂರಪ್ಪನವರು ಸುಮಾರು ೩೪ ಕೋಟಿಗಳನ್ನು ಜೈಲು ನಿರ್ಮಾಣಕ್ಕಾಗಿ ಸೋಗಾನೆ ಸರ್ವೇನಂ. ೧೨೬ರ ೪೯.೩೬ ಎಕರೆ ಜಮೀನನ್ನು ವಶಪಡಿಸಿಕೊಂಡಿದ್ದರು. ಮತ್ತು ಹಣ ಬಿಡುಗಡೆ ಮಾಡಿದ್ದರು ಎಂದರು.


ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ಆಯೋಧ್ಯೆಗೆ ಹೋಗುವುದಾಗಿ ಹೇಳಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷ ಜೀವಂತವಾಗಿ ಇರಬೇಕು ಎಂದರೇ, ಹಿಂದುತ್ವವನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆಗಾಗಿ ಕಾಂಗ್ರೆಸ್ ಹಿಂದುತ್ವದ ಕಡೆ, ವಾಲುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಡಿ.ಮೇಘರಾಜ್, ಜಗದೀಶ್, ಮಧುಸೂದನ್, ಸಂತೋಷ್ ಬಳ್ಳಕೆರೆ ವಿನ್ಸಂಟ್, ಅಣ್ಣಪ್ಪ, ಮಾಲತೇಶ್ ಮುಂತಾದವರು ಇದ್ದರು.


ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಹೆಸರನ್ನು ಇಡುವುದಕ್ಕೆ ನಮ್ಮ ವಿರೋಧವೇನಿಲ್ಲ. ಈ ಹಿಂದೆ ೨೦೧೯ರಲ್ಲಿ ಶಿವರಾತ್ರೇಶ್ವರ ೧೯೫೯ನೇ ಜಯಂತಿಯ ಮಹೋತ್ಸವವನ್ನು ಆಚರಿಸುವಾಗ ಈ ಜಾಗಕ್ಕೆ ಅಲ್ಲಮಪ್ರಭು ಹೆಸರಿಡಬೇಕು ಎಂದು ಸುತ್ತೂರು ಜಗದ್ಗುರುಗಳೇ ಸೂಚಿಸಿದ್ದರು. ಹಾಗಾಗಿ ಆ ಹೆಸರನ್ನೇ ಇಡಬೇಕು. ಶಾಸಕ ಎಸ್.ಎನ್.ಚೆನ್ನಬಸಪ್ಪನವರು ಸಹಜವಾಗಿ ಸ್ವಾತಂತ್ರ್ಯ ಪ್ರೇಮಿಗಳು, ಹಿಂದೂ ಕಟ್ಟಾ ಅಭಿಮಾನಿಗಳು, ಅವರು ಬೇರೊಂದು ಹೆಸರು ಸೂಚಿಸಿದ್ದಾರೆ. ಅದನ್ನು ಕೂಡ ಪರಿಗಣಿಸಿ ಮುಂದೆ ಬೇರೆ ಯಾವುದಾದರೂ ಜಾಗಕ್ಕೆ ಆ ಹೆಸರಿಡಸಲಾಗುವುದು ಎಂದು ರಾಘವೇಂದ್ರ ತಿಳಿಸಿದ್ದಾರೆ.
ಈ ವಿಚಾರ ಕುರಿತಂತೆ ಸಚಿವ ಮಧುಬಂಗಾರಪ್ಪನವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವರ ಗಮನ ಸೆಳೆದಿದ್ದು, ಮತ್ತು ಮುಖ್ಯಮಂತ್ರಿಗಳು ಅಲ್ಲಮಪ್ರಭು ಹೆಸರಿಡಲು ಘೋಷಣೆ ಮಾಡಿರುವುದನ್ನು ನಾನು ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತೇನೆ ಎಂದರು.

By admin

ನಿಮ್ಮದೊಂದು ಉತ್ತರ

You missed

error: Content is protected !!