ಶಿವಮೊಗ್ಗ : ಶ್ರಮ ಮತ್ತು ಎದುರಾಗುವ ಸೋಲುಗಳೆ ಮೌಲ್ಯಾಧಾರಿತ ಜೀವನ ನಡೆಸಲು ಪ್ರೇರಕ ಶಕ್ತಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಎನ್.ಚಂದನ್ ಅಭಿಪ್ರಾಯಪಟ್ಟರು.

ನಗರದ ಹೆಚ್.ಎಸ್.ರುದ್ರಪ್ಪ ಪದವಿಪೂರ್ವ ಕಾಲೇಜಿನ ವತಿಯಿಂದ ಬುಧವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿವಿಧ ವಿದ್ಯಾರ್ಥಿ ಸಂಘಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸೋಲುಗಳಿಂದ ಎದೆಗುಂದುವ ಅವಶ್ಯಕತೆಯಿಲ್ಲ, ಆತ್ಮವಿಶ್ವಾಸದಿಂದ ಎದುರಿಸಿ. ನಮ್ಮೊಳಗಿನ ಅಂಜಿಕೆಯೇ ನಮ್ಮ ದೊಡ್ಡ ಶತ್ರು. ಯುವ ಸಮೂಹದ ಮನಸ್ಥಿತಿಗಳು ಬದಲಾಗಬೇಕಿದೆ. ಬದುಕನ್ನು ರೂಪಿಸಿಕೊಳ್ಳುವ, ದೇಶವನ್ನು ಮುನ್ನಡೆಸುವ ಜವಾಬ್ದಾರಿಗಳು ನಿಮ್ಮ ಮೇಲಿದ್ದು ಜವಾಬ್ದಾರಿಯುತ ನಡೆ ನಿಮ್ಮದಾಗಬೇಕಿದೆ ಎಂದು ಹೇಳಿದರು.

ಸ್ಪರ್ಧಾತ್ಮಕ ಯುಗದಲ್ಲಿ ನಮಗೆ ಬೇಕಾದ ಎಲ್ಲವೂ ಸಿಗುವುದಿಲ್ಲ. ಹೊಸತನದ ಪ್ರಯೋಗಗಳಿಂದ ನಮ್ಮ ದೈನಂದಿನ ‌ಜೀವನ ಸುಲಭಗೊಂಡಿದೆ. ಅಂತೆಯೇ ನಾವೀನ್ಯ ಪ್ರಯೋಗಾತ್ಮಕ ಗುಣ ಮತ್ತು ಸಾಧಿಸುವ ಗುರಿ ಹಂಬಲ ಬೇಕಿದೆ. ವ್ಯಕ್ತಿತ್ವ ವಿಕಸನಕ್ಕೆ ಸಾಧ್ಯವಾಗುವ ಎಲ್ಲಾ ಅವಕಾಶಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಿ.

ಅಪ್ರಾಪ್ತ ವಯಸ್ಕರರು ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅಂತಹ ನಿರ್ಲಕ್ಷ್ಯದ ಅವಘಡಗಳನ್ನು ಕಾನೂನು ಎಂದಿಗೂ ಸಹಿಸುವುದಿಲ್ಲ. ದುರಾದೃಷ್ಟವಶಾತ್ ಅಪ್ರಾಪ್ತ ಯುವ ಸಮೂಹದ ತಪ್ಪುಗಳಿಂದ ನಿಜವಾಗಿಯೂ ಶಿಕ್ಷೆಗೆ ಒಳಗಾಗುತ್ತಿರುವುದು ಪೋಷಕರು ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ವಕೀಲರಾದ ರಾಘವೇಂದ್ರ ಮಾತನಾಡಿ, ಪೋಕ್ಸೊದಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ವಿಷಾದನೀಯ. ಮೊಬೈಲ್ ಗೀಳಿಗೆ ಬೀಳದೆ ಜ್ಞಾನದ ವಿಕಸನಕ್ಕಾಗಿ ಹೊಸತನದ ಅರಿವಿಗಾಗಿ ಮಾತ್ರ ಬಳಸಿ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಎಸ್.ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸಿಬಿಆರ್ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಪಟು ಕೆ.ಪ್ರಜ್ಞಾ ಅವರನ್ನು ಸನ್ಮಾನಿಸಲಾಯಿತು.

By admin

ನಿಮ್ಮದೊಂದು ಉತ್ತರ

error: Content is protected !!