
ಶಿವಮೊಗ್ಗ, ಡಿಸೆಂಬರ್ ೧೬ (ಕರ್ನಾಟಕ ವಾರ್ತೆ) : ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪದ ಸರ್ವೇ ನಂಬರ್ ೫೦ರಲ್ಲಿ ಸುಮಾರು ೩೦ಎಕರೆ ಭೂಪ್ರದೇಶದಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಾದರಿಯಲ್ಲಿ ಕ್ರೀಡಾಗ್ರಾಮ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ಕ್ರೀಡಾ ಗ್ರಾಮ ನಿರ್ಮಾಣ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡಿದ ಅವರು, ಖೇಲೋ ಇಂಡಿಯಾ ಯೋಜನೆಯಡಿ ಕ್ರೀಡಾ ಗ್ರಾಮ ನಿರ್ಮಾಣ ಕಾರ್ಯ ನಡೆಯಲಿದೆ. ಹಿಂದೆ ಕೆ.ಎಸ್.ಈಶ್ವರಪ್ಪ ಅವರು ಕ್ರೀಡಾ ಸಚಿವರಾಗಿದ್ದ ಅವಧಿಯಲ್ಲಿ ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದಾಗ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಅಲ್ಲದೇ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸಕಾಲದಲ್ಲಿ ಮಾಹಿತಿ ನೀಡಿ ಸಹಕರಿಸಿದ್ದರು ಎಂದರು.
ಪ್ರಸ್ತುತ ಭಾರತೀಯ ಕ್ರೀಡಾ ಪ್ರಾಧಿಕಾರದ ಕುರಿಯನ್ ಮ್ಯಾಥ್ಯೂ, ಹರೀಶ್, ಸುರೇಶ್ ಮತ್ತು ಅಸುತೋಷ್ ಘೋಷ್ ಅವರನ್ನೊಳಗೊಂಡ ಕೇಂದ್ರದ ಕ್ರೀಡಾ ತಜ್ಞರ ತಂಡವು ಸ್ಥಳ ಪರಿಶೀಲನೆಗಾಗಿ ಆಗಮಿಸಿದ್ದು, ಅವರ ನಿರೀಕ್ಷೆಯಂತೆ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಬಸ್ನಿಲ್ದಾಣ, ತರಬೇತಿಗಾಗಿ ಬಳಸಲಾಗುತ್ತಿರುವ ನೆಹರೂ ಕ್ರೀಡಾಂಗಣ, ಪ್ರಸ್ತಾಪಿತ ಕ್ರೀಡಾ ಗ್ರಾಮಕ್ಕಿರುವ ಅಂತರ, ಸೌಲಭ್ಯಗಳು ಮತ್ತಿತರ ವಿವರಗಳನ್ನು ತಂಡಕ್ಕೆ ಒದಗಿಸಲಾಗಿದೆ ಎಂದ ಅವರು, ನಗರದ ಕ್ರೀಡಾಸಕ್ತರ ಬಹುದಿನಗಳ ಕನಸು ಶೀಘ್ರದಲ್ಲಿ ಸಾಕಾರಗೊಳ್ಳುವ ನಿರೀಕ್ಷೆ ಇದೆ ಎಂದವರು ನುಡಿದರು.
ಕ್ರೀಡಾ ಗ್ರಾಮ ನಿರ್ಮಾಣಕ್ಕೆ ಅಗತ್ಯವಾಗಿರುವ ಅನುದಾನವನ್ನು ಪ್ರಸಕ್ತ ಸಾಲಿನಲ್ಲಿಯೇ ಬಿಡುಗಡೆಗೊಳಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದ ಅವರು, ನಗರದ ಸಹ್ಯಾದ್ರಿ ಕಾಲೇಜಿನ ಅಭಿವೃದ್ಧಿ ಕಾರ್ಯಗಳಿಗೆ ಸಲ್ಲಿಸಲಾದ ೮.೫೦ಕೋಟಿ ರೂ.ಗಳಲ್ಲಿ ೪ಕೋಟಿ ರೂ.ಗಳು ಬಿಡುಗಡೆಯಾಗಿವೆ. ಅಲ್ಲದೇ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಒಳಾಂಗಣ ಕ್ರೀಡಾಂಗಣಗಳ ನಿರ್ಮಾಣಕ್ಕಾಗಿ ೩-೪ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ವಯಸ್ಕರ ಆರೋಗ್ಯ, ಯುವಕರ, ಕ್ರೀಡಾಸಕ್ತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.
ಈ ಕ್ರೀಡಾಗ್ರಾಮದಲ್ಲಿ ವಿಶೇಷವಾಗಿ ಅಥ್ಲೆಟಿಕ್, ವಾಲಿಬಾಲ್, ಫುಟ್ಬಾಲ್, ಹಾಕಿ ಜೂಡೋ, ಕುಸ್ತಿ ಸೇರಿದಂತೆ ವಿವಿಧ ಗುಂಪು ಸ್ಪರ್ಧೆಗಳಿಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಕ್ರೀಡಾಕ್ಷೇತ್ರದಲ್ಲಿನ ಅಸಾಧಾರಣ ಸಾಧಕರ ಶ್ರಮವನ್ನು ಪರಿಗಣಿಸಲಾಗಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳು ಮಂಜೂರಾಗಿದ್ದು, ಅವುಗಳ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಡಿಸೆಂಬರ್ ೧೯ರಂದು ಬೆಳಿಗ್ಗೆ ೧೧ಕ್ಕೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಏರ್ಪಡಿಸಲಾಗಿದ್ದು, ಕೇಂದ್ರ ಸಚಿವ ನಿತಿನ್ ಘಡ್ಕರಿ ಅವರು ಆನ್ಲೈನ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಅವುಗಳಲ್ಲಿ ಬಹುಮುಖ್ಯವಾಗಿ ೫೧೭ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಿವಮೊಗ್ಗ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ೧೩ರ ಬಾಕಿ ಉಳಿದ ರಸ್ತೆ ನಿರ್ಮಾಣ, ವಿದ್ಯಾನಗರದ ಬಳಿ ೪೪ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ, ೯೬ಕೋಟಿ ರೂ.ಗಳ ವೆಚ್ಚದಲ್ಲಿ ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ ದ್ವಿಪಥದ ರಸ್ತೆ ನಿರ್ಮಾಣ, ೧೯ಕೋಟಿ ರೂ.ಗಳ ವೆಚ್ಚದಲ್ಲಿ ನಿಟ್ಟೂರು-ಹೊಸನಗರ ಭಾಗದ ಶರಾವತಿ ಹಿನ್ನೀರಿನ ಜೊತೆ ಸಂಪರ್ಕವಿರುವ ಶಿಥಿಲಗೊಂಡಿರುವ ಸೇತುವೆಗಳಿಗೆ ಬದಲಾಗಿ ೭ನೂತನ ಸೇತುವೆಗಳ ನಿರ್ಮಾಣ ಹಾಗೂ ೮.೨೦ಕೋಟಿ ರೂ. ವೆಚ್ಚದಲ್ಲಿ ಆಗುಂಬೆ ಬಳಿ ೦೩ಕಿರುಸೇತುವೆಗಳ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಶ್ರೀಮತಿ ಸುವರ್ಣಶಂಕರ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಜ್ಯೋತಿಪ್ರಕಾಶ್, ಜ್ಞಾನೇಶ್ವರ, ಚನ್ನಬಸಪ್ಪ, ದತ್ತಾತ್ರಿ ಶ್ರೀಮತಿ ಸುರೇಖಾ ಮುರುಳೀಧರ್ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ
ಶಿವಮೊಗ್ಗ, ಡಿಸೆಂಬರ್ ೧೬ (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, ನೌಕರರ ಸೌಹಾರ್ಧ ಸಹಕಾರ ನಿ., ಇವುಗಳ ಸರ್ವ ಸದಸ್ಯರ ಮಹಾಸಭೆ, ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವು ಡಿಸೆಂಬರ್ ೨೫ರಂದು ಬೆಳಿಗ್ಗೆ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿವಿಧ ಇಲಾಖೆಗಳಲ್ಲಿ ಅಪೂರ್ವ ಸೇವೆ ಸಲ್ಲಿಸಿ ಸರ್ವೋತ್ತಮ ಸೇವಾ ಪುರಸ್ಕಾರಕ್ಕೆ ಬಾಜನರಾದ ನೌಕರರಿಗೆ ಅಭಿನಂದನೆ, ನೌಕರರ ಸಂಘದ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಹಾಗೂ ಕೊರೋನ ನಿಯಂತ್ರಣ ಕಾರ್ಯದಲ್ಲಿ ಅವಿರತವಾಗಿ ಶ್ರಮಿಸಿದ ಆರೋಗ್ಯ ಇಲಾಖೆಯ ನೌಕರರು ಹಾಗೂ ಕೊರೋನ ವಾರಿಯರ್ಸ್ಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಕೇಂದ್ರ ನೌಕರರ ಸಂಘದ ಪದಾಧಿಕಾರಿಗಳಿಗೆ ಅಭಿನಂದಿಸಲಾಗುವುದು ಎಂದರು.
ಈ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಉದ್ಘಾಟಿಸುವರು. ಸಂಸದ ಬಿ.ವೈ.ರಾಘವೇಂದ್ರ ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸುವರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು.
ನಿನ್ನೆ ನಡೆದ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಚಿಂತನಶೀಲ ಹೊಸ ಪ್ರತಿನಿಧಿಗಳು ಆಯ್ಕೆಯಾಗಿದ್ದು, ಅವರೆಲ್ಲರನ್ನು ಅಭಿನಂದಿಸುವುದಾಗಿ ತಿಳಿಸಿದ ಅವರು ಇತ್ತೀಚೆಗೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ ಈವರೆಗೆ ೧೨೦೦ಕ್ಕೂ ಹೆಚ್ಚಿನ ನೌಕರರಿಗೆ ಅತ್ಯಂತ ಕಡಿಮೆ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅಲ್ಲದೆ ನೌಕರರ ಬೇಡಿಕೆಗೆ ತಕ್ಕಂತೆ ನಗರಕ್ಕೆ ಸಮೀಪದಲ್ಲಿ ಇನ್ನಷ್ಟು ಬಡಾವಣೆಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೇ ಈಗಾಗಲೇ ವಿನ್ಯಾಸಗೊಳಿಸಿರುವ ಕೃಷಿ ವಿಶ್ವವಿದ್ಯಾಲಯದ ಎದುರಿನ ಬಡಾವಣೆಯಲ್ಲಿ ೩ ಎಕರೆ ವಿಸ್ತೀರ್ಣದಲ್ಲಿ ೧೦೦ಮನೆಗಳಿರುವ ಅಪಾರ್ಟ್ಮೆಂಟ್ನ್ನು ನಿರ್ಮಿಸಿ, ನಿವೇಶನದ ಬೆಲೆಯಲ್ಲಿ ಮನೆಯನ್ನು ಒದಗಿಸಲು ಉದ್ದೇಶಿಸಲಾಗಿದ್ದು, ಡಿಸೆಂಬರ್ ೨೫ರಂದೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಂಘದ ಜಗದೀಶ್ ಗೌಡಪ್ಪ ಪಾಟೀಲ, ಆರ್.ಶ್ರೀನಿವಾಸ್, ವಿ.ವಿ.ಶಿವರುದ್ರಯ್ಯ, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಆರ್.ಮೋಹನ್ಕುಮಾರ್, ಕಾರ್ಯದರ್ಶಿ ಐ.ಪಿ.ಶಾಂತರಾಜು ಸೇರಿದಂತೆ ಜಿಲ್ಲಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಐ.ಪಿ.ಶಾಂತರಾಜು, ಆರ್.ಮೋಹನ್ಕುಮಾರ್, ಡಿ.ಬಿ.ರುದ್ರಪ್ಪ, ದಿನೇಶ್, ಸತೀಶ್, ಮಾರುತಿ ಮುಂತಾದವರು ಉಪಸ್ಥಿತರಿದ್ದರು.