ಶಿವಮೊಗ್ಗ,ಡಿ.೨೬:ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿರುವ ತಮಿಳ್ ತಾಯ್ ಸಮುದಾಯ ಭವನದಲ್ಲಿ ಸಮಾಜದ ಕೆಲವರಿಗೆ ಆಗಿರುವ ಅನ್ಯಾಯವಾಗಿದ್ದು, ಅಲ್ಲಿ ಸರ್ವಾಧಿಕಾರಿ ಧೋರಣೆ ಇದೆ ಎಂದು ಸಂಘದ ಸದಸ್ಯ ಎಸ್.ನವೀನ್ ಆರೋಪಿಸಿದರು.
ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ತಮಿಳ್ ತಾಯ್ ಸಮುದಾಯ ಭವನದ ಸ್ಥಾಪಕ ಸದಸ್ಯನಾಗಿದ್ದೇನೆ. ಸ್ಥಾಪಕ ಸದಸ್ಯರ ಕಡೆಯವರಿಗೆ ಇಬ್ಬರಿಗೆ ಸಮುದಾಯ ಭವನದಲ್ಲಿ ರಿಯಾಯಿತಿ ದರದಲ್ಲಿ ಬಾಡಿಗೆ ಕೊಡಬೇಕೆಂಬ ನಿಯಮವಿದೆ. ಅದನ್ನು ಉಲ್ಲಂಘಿಸಿ ಭವನದ ಆಡಳಿತ ಮಂಡಳಿ ವರ್ತಿಸಿದ್ದರಿಂದ ಆದ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಹೀಗೆ ನನಗೆ ದಿನಾಂಕವನ್ನು ಗೊತ್ತು ಪಡಿಸಿ ನಂತರ ಬೇರೆಯವರಿಗೆ ಬುಕ್ ಮಾಡಿದ್ದಾರೆ. ಇದರಿಂದ ನನಗೆ ಏನು ಮಾಡಬೇಕು ಎಂಬುವುದು ತೋಚದಾಗಿದೆ. ಸಂಘದ ಸದಸ್ಯರಿಗೆ ಹೀಗಾದರೆ ಹೇಗೆ ? ಸಮುದಾಯ ಭವನದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಇತರೆಯವರು ಸರ್ವಾಧಿಕಾರಿ ಧೋರಣೆ ತಾಳಿದ್ದಾರೆ. ನಾನು ಮದುವೆಗೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇನೆ. ಈಗ ಛತ್ರ ಇಲ್ಲದೇ ಇದ್ದರೆ ಹೇಗೆ ಮದುವೆ ಮಾಡವುದು ಎಂದು ಪ್ರಶ್ನೆ ಮಾಡಿದರು.
ನನ್ನ ಹಾಗೆಯೇ ಯಾವುದೇ ಸದಸ್ಯರಿಗೆ ಈಗಾಗಬಾರದು. ಗೊತ್ತಿಲ್ಲದೆ ದಿನಾಂಕವನ್ನು ಕೊಡಬಾರದು, ಕೊಟ್ಟಮೇಲೆ ಬೇರೆ ಯಾರಿಗೂ ದಿನಾಂಕ ಕೊಡಬಾರದು ಎನ್ನುವುದು ನನ್ನ ಅಭಿಲಾಷೆಯಾಗಿದೆ ಎಂದರು.
ಇದಲ್ಲದೆ, ಸಮಾಜದ ಹಿತಕಾಯಬೇಕಾದ ಕೆಲವರು ಹಿರಿಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳುತ್ತಾರೆ. ಸರ್ವಾಧಿಕಾರಿ ಧೋರಣೆ ನಡೆಸುತ್ತಾರೆ. ಸಂಘವನ್ನು ಸ್ವಂತ ಆಸ್ತಿ ಎಂಬಂತೆ ವರ್ತಿಸುತ್ತಿದ್ದಾರೆ. ಬೈಲದ ಪ್ರಕಾರ ನಡೆದುಕೊಂಡಿಲ್ಲ. ೧೩ ವರ್ಷವಾದರೂ ಸರ್ವ ಸದಸ್ಯರ ಸಭೆ ಕರೆದಿಲ್ಲ. ಹಣ ದುರುಪಯೋಗವಾದ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ಈಗಿರುವ ಪದಾಧಿಕಾರಿಗಳು ವಾರ್ಷಕ ಮಹಾಸಭೆ ಕರೆದು ಲೆಕ್ಕಪತ್ರ ಮಂಡಿಸಬೇಕು ಎಂದು ಒತ್ತಾಯಿಸಿದರು.
ಈ ದೂರಿನಲ್ಲಿ ನನ್ನ ಯಾವುದೇ ದುರುದ್ದೇಶವಿಲ್ಲ. ಹಾಗೂ ಆಡಳಿತ ಮಂಡಳಿಯ ನಿರ್ದೇಶಕರ ಮೇಲೆ ನನಗೆ ವೈಯಕ್ತಿಕ ದ್ವೇಷ ಇರುವುದಿಲ್ಲ. ನಮ್ಮ ಸಮಾಜದ ಯಾರಿಗೂ ಅನ್ಯಾಯವಾಗಬಾರದು ಎನ್ನುವುದು ನನ್ನ ಇಚ್ಛೆಯಾಗಿದೆ. ಇತ್ತೀಚೆಗೆ ಕೂಡ ಕೆಲವು ನಿರ್ದೇಶಕರ ತಂತ್ರಗಳಿಗೆ ಬಲಿಯಾಗಿ ಆಡಳಿತ ಮಂಡಳಿಯಿಂದ ಮಾಜಿ ಅಧ್ಯಕ್ಷರು ಹೊರಗೆ ಬಂದಿದ್ದಾರೆ. ಈಗಾಗಲೇ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಿ. ಶಿಲ್ಪಿಮಂಜುನಾಥ್, ಶೇಖರ್, ಹರೀಶ್ ಇದ್ದರು.