ಸಾಗರ : ಶರಾವತಿ ನದಿಗೆ ಅಣೆಕಟ್ಟು ಕಟ್ಟಿ ನಾಡಿನ ಜನತೆಗೆ ಬೆಳಕು ಕೊಡುತ್ತಾರೆ ಎಂದು ಸಂತಸದಲ್ಲಿದ್ದೆವು, ಆದರೆ ಅದು ಇಂದಿಗೂ ಸಂಕಟವಾಗಿಯೇ ಮುನ್ನಡೆದಿದೆ. ಅವ್ಯಾಹತವಾಗಿ ಪರಿಸರ ನಾಶ, ಪಶ್ಚಿಮ ಘಟ್ಟದ ಶ್ರೇಣಿಗಳಲ್ಲಿ ಹವಾಮಾನದ ವೈಪರಿತ್ಯದ ಸಮಸ್ಯೆ ಈಗ ನಮ್ಮನ್ನು ಕಾಡುತ್ತಿದೆ ಎಂದು.ಸಾಹಿತಿ ಡಾ. ನಾ.ಡಿಸೋe ಕಳವಳ ವ್ಯಕ್ತಪಡಿಸಿದರು.ಕಾಡುತ್ತಿದೆ ಎಂದು ಸಾಹಿತಿ ಡಾ. ನಾ.ಡಿಸೋe ಕಳವಳ ವ್ಯಕ್ತಪಡಿಸಿದರು
ತಮ್ಮ ಸ್ವಗೃಹದಲ್ಲಿ ಡಿಸೆಂಬರ್ ಕೊನೆಯಲ್ಲಿ ಜನಸ್ಪಂದನ ಟ್ರಸ್ಟ್ ಮತ್ತು ಸುವ್ವಿ ಪಬ್ಲಿಕೇಷನ್ಸ್ ವಿವಿಧ ಸಂಘಟನೆಗಳ ಸಹಕಾರದಲ್ಲಿ ಆಯೋಜಿಸಿರುವ ತಮ್ಮ ಸಮಗ್ರ ಕೃತಿ ಬಿಡುಗಡೆ ಹಾಗೂ ಸಾಹಿತ್ಯೋತ್ಸವದ ರಾಷ್ಟ್ರೀಯ ವಿಚಾರ ಸಂಕೀರ್ಣದ ಬಿತ್ತಿಚಿತ್ರ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಒಬ್ಬ ಸಾಹಿತಿಗೆ ತಾನು ರಚಿಸಿದ ಕಥೆ, ನಾಟಕ, ಕಾವ್ಯ, ಕಾದಂಬರಿ ಎಲ್ಲವೂ ಅವನ ಜೀವಿತಾವಧಿಯಲ್ಲಿಯೇ ಸಮಗ್ರ ಕೃತಿಯಾಗಿ ಹೊರಹೊಮ್ಮುವುದು ಶ್ರೇಷ್ಟ ಸಂಗತಿಯಾಗಿದೆ. ಇಂತಹ ಒಂದು ವಿಶಿಷ್ಟ ಪ್ರಯತ್ನವನ್ನು ಸುವ್ವಿ ಪಬ್ಲಿಕೇಷನ್ ಮಾಡುತ್ತಿದೆ, ನನ್ನ ಎಲ್ಲಾ ಕಾದಂಬರಿಗಳು ೬ ಸಾವಿರ ಪುಟಗಳಲ್ಲಿ ೯ ಮಾಲಿಕೆಯಲ್ಲಿ ಹೊರಬರುತ್ತಿರುವುದು ವಿಶೇಷವಾದುದು ಎಂದರು
.
ಶರಾವತಿ ಕಣಿವೆಯ ಪ್ರದೇಶದಲ್ಲಿಯೇ ಸರ್ಕಾರಿ ನೌಕರಿಯನ್ನು ನಾನು ನಿರ್ವಹಿಸಲು ಆರಂಭಿಸಿದೆ. ಇಲ್ಲಿ ನಡೆಯುವ ಎಲ್ಲಾ ಆಕಾಶದ ಕೆಳಗಿನ ಸತ್ಯಗಳನ್ನು ಯಥಾವತ್ತಾಗಿ ನನ್ನ ಕಥೆ, ಕಾದಂಬರಿಗಳಲ್ಲಿ ಮೂಡಿಸಿದೆ. ಅಲ್ಲಿ ಆಗುವ ತಪ್ಪುಗಳನ್ನು ನಾನು ಬರೆದಾಗ ಅಧಿಕಾರಿಗಳು ತಾವು ಒಬ್ಬರಿಗೊಬ್ಬರು ಚರ್ಚೆ ಮಾಡುತ್ತಿದ್ದರೇ ಹೊರತು ನನ್ನ ಬಳಿ ಪ್ರಶ್ನಿಸುವ ಧೈರ್ಯ ಮಾಡುತ್ತಿರಲಿಲ್ಲ. ೭೫ ವರ್ಷಗಳಿಂದಲೂ ಶರಾವತಿ ಕಣಿವೆಯ ಸಮಸ್ಯೆ ಹೇಗಿತ್ತೋ ಅದು ಇವತ್ತಿಗೂ ಮುಂದುವರೆದಿದೆ ಮುಗಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶರಾವತಿ ನದಿ ಮತ್ತು ಪರಿಸರದ ಕುರಿತು ನಮ್ಮೆಲ್ಲ ಕಥೆಗಳು ಜೀವ ತುಂಬಿಕೊಳ್ಳುತ್ತವೆ, ಇಂದಿಗೂ ನಾನು ಆ ಆಲೋಚನಾ ಕ್ರಮದಿಂದ ಹೊರಬಂದಿಲ್ಲ. ಇದು ನನ್ನ ಮನಸ್ಸಿನಲ್ಲಿ ಇಂದಿಗೂ ದಟ್ಟವಾಗಿ ಬೇರೂರಿದೆ. ಇತ್ತೀಚೆಗೆ ಶರಾವತಿ ನದಿ ಬತ್ತಿದ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಳ್ಳಲು ಬೇರೆ ಬೇರೆ ಊರುಗಳಿಗೆ ತೆರಳಿದ ಸಂತ್ರಸ್ತರು ತಮ್ಮ ಊರುಗಳಿಗೆ ಬಂದು ಅಲ್ಲಿ ನೆಟ್ಟ ತೆಂಗಿನಮರ, ಇದ್ದ ಮನೆಗಳ ಪಳೆಯುಳಿಕೆ, ಪಾಳು ಬಿದ್ದ ಪ್ರದೇಶಗಳನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತರು. ನನ್ನ ಎಲ್ಲಾ ಕಥೆ, ಕಾದಂಬರಿಗಳನ್ನು ಸಮಗ್ರವಾಗಿ ಹೊರತಂದಿರುವ ಸುವ್ವಿ ಪ್ರಕಾಶನದ ಪ್ರಯತ್ನ ಮೆಚ್ಚುವಂತದ್ದು ಎಂದರು.
ಸುವ್ವಿ ಪ್ರಕಾಶನದ ಮುಖ್ಯಸ್ಥ ಬಿ.ಎನ್.ಸುನೀಲ್ ಕುಮಾರ್ ಮಾತನಾಡಿ, ಕನ್ನಡ ನಾಡಿನ ಸಾಹಿತಿಗಳಲ್ಲಿ ನುಡಿದಂತೆ ನಡೆದುಕೊಂಡು ಬಂದವರು ಬೆರಳೆಣಿಕೆಯಷ್ಟು, ನುಡಿದಂತೆ ನಡೆದವರ ಸಾಲಿನಲ್ಲಿ ನಾ.ಡಿಸೋe ನಿಲ್ಲುತ್ತಾರೆ. ಅವರ ಎಷ್ಟೋ ಕಥೆಗಳ ಮೂಲ ಪ್ರತಿಗಳು ಅವರಲ್ಲೇ ಲಭ್ಯವಿರಲಿಲ್ಲ, ಅಂತಹವುಗಳನ್ನು ಸಂಗ್ರಹಿಸಿ ಸಮಗ್ರ ಕೃತಿಯೊಂದನ್ನು ಹೊರತಂದಿದ್ದೇವೆ. ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣ ನಡೆಸಿ ಕನ್ನಡದ ಕಥೆ ಮತ್ತು ಕಾದಂಬರಿ ಲೋಕಕ್ಕೆ ಅವರು ನೀಡಿರುವ ಕೊಡುಗೆಯನ್ನು ನಾವುಗಳು ಸ್ಮರಿಸಬೇಕು ಅದಕ್ಕಾಗಿ ನಮ್ಮ ಈ ಪ್ರಯತ್ನ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಹುಚ್ಚರಾಯಪ್ಪ, ಫಿಲೋಮಿನಾ ಡಿಸೋಜ ಹಾಜರಿದ್ದರು.