ಗಜೇಂದ್ರ ಸ್ವಾಮಿ
ಶಿವಮೊಗ್ಗ, ಡಿ.22:
ಇಂದಿಗೆ ಬರೋಬ್ಬರಿ ಐದು ವರ್ಷಗಳ ಹಿಂದೆ ಅಂದರೆ 2018ರ ಡಿಸೆಂಬರ್ 22ರಂದು ಅಂದಿನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಂದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಜಿಲ್ಲಾ ಕಾಂಗ್ರೆಸ್ ಜವಾಬ್ದಾರಿ ಹೊತ್ತ ಹೆಚ್.ಎಸ್. ಸುಂದರೇಶ್ ವೈಯುಕ್ತಿಕವಾಗಿ ಅಧಿಕಾರದ ಅಪೇಕ್ಷೆಯಿಲ್ಲದೇ, ಯಾವುದೇ ಅಹಂಕಾರವಿಲ್ಲದೇ ಪಕ್ಷದ ಸರ್ವರೊಂದಿಗೂ ಸಮಾನತೆಯ ಗೌರವ ಕಾಯ್ದುಕೊಂಡು ಬಂದಿದ್ದಾರೆ.
ಬರೋಬ್ಬರಿ ಐದು ವರ್ಷಗಳ ಕಾಲ ಅಧಿಕಾರವಿಲ್ಲದಿದ್ದಾಗಲೂ ಪಕ್ಷದ ಚಟುವಟಿಕೆಗಳನ್ನು ಗಮನಿಯವಾಗಿ ಬೆಳೆಸಿ ಪಕ್ಷವನ್ನು ಬಿಜೆಪಿಯ ಮಲೆನಾಡ ಹೆಬ್ಬಾಗಿಲಿನಲ್ಲಿ ಕಟ್ಟಿ ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಸುಂದರೇಶ್ ಅವರು ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷದ ಸಕ್ರಿಯ ಚಟುವಟಿಕೆಗಳಲ್ಲಿ ಕಾರ್ಯಕರ್ತರನ್ನು ಪಾಲ್ಗೊಳ್ಳುವಂತೆ ಮಾಡುವ, ಅದರ ಜೊತೆ ಪದಾಧಿಕಾರಿಗಳನ್ನು ಜೊತೆಗೂಡಿಸುವಂತೆ ಮಾಡಿರುವ ಕೆಲಸ ಇತರೆ ಎಲ್ಲರಿಗಿಂತ ಭಿನ್ನವಾದುದು.
ಯಾರೊಂದಿಗೂ ಮುಖ ಕಟ್ಟಿಕೊಳ್ಳದೆ ಪಕ್ಷದ ವರ್ಚಸ್ಸು ಉಳಿಸಿಕೊಳ್ಳಲು ಅದಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಸುಂದರೇಶ್ ಅವರ ಶ್ರಮ ಹಾಗೂ ಅವರ ತಂಡದ ಪ್ರಯತ್ನ ಅತ್ಯಂತ ಶ್ಲಾಘನೀಯ.
ಪಕ್ಷದ ಯಾರನ್ನೇ ಆಗಲಿ ಹಿರಿಯರು, ಕಿರಿಯರು ಎಂಬ ಭೇದವಿಲ್ಲದೆ ಸಮಾನ ಗೌರವ ನೀಡಿ, ರಾಜಕಾರಣದಲ್ಲಿ ಬೆಳೆಯುವವರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಅವರ ಮತ್ತೊಂದು ವಿಶೇಷ. ಕಾಂಗ್ರೆಸ್ ಪಕ್ಷ ಕೇವಲ ಪುರುಷರಿಗೆ ಮಾತ್ರ ಸೀಮಿತವಲ್ಲ. ಮಹಿಳೆಯರೂ ಸಹ ರಾಜಕಾರಣದಲ್ಲಿ ಮುಖ್ಯಸ್ಥರು ಎಂಬುದನ್ನು ಸಾಬೀತಪಡಿಸಿಕೊಳ್ಳಲು ಸಹೋದರ ಬಾಂಧವ್ಯವನ್ನು ಬೆಳೆಸಿ ಹೆಣ್ಣು ಮಕ್ಕಳ ರಾಜಕೀಯ ಸೇರ್ಪಡೆಗೆಕ್ಕೆ ವಿಶೇಷ ದಾರಿ ಮಾಡಿಕೊಟ್ಟದ್ದು ಅವರ ಮತ್ತೊಂದು ವಿಶೇಷ.
ನಿತ್ಯ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು, ಪ್ರಮುಖರು ಪಾಲ್ಗೊಳ್ಳುವಂತೆ ಮಾಡುವಲ್ಲಿ ಸುಂದರೇಶ್ ಕೈಗೊಂಡ ಕ್ರಮ ಅತ್ಯಂತ ಗಮನೀಯವಾದದ್ದು.
ಕೇವಲ ಒಂದು ವಿಧಾನಸಭಾ ಕ್ಷೇತ್ರವನ್ನು
ಮಾತ್ರ ಗೆದ್ದಿದ್ದ ಬಿಜೆಪಿಗೆ ಮಲೆನಾಡಿನ ಹೆಬ್ಬಾಗಿಲು ದಾರಿಯಾಗಿಸಿಕೊಂಡಿದ್ದ ಸಂದರ್ಭದಲ್ಲಿ, ಐದು ವರ್ಷಗಳ ಕಾಲ ಪಕ್ಷದ ಚಟುವಟಿಕೆಗಳನ್ನು ಕೇವಲ ಶಿವಮೊಗ್ಗಕ್ಕೆ ಸೀಮಿತಗೊಳಿಸದೇ ಎಲ್ಲಾ ತಾಲೂಕುಗಳಲ್ಲಿ, ವಿಧಾನಸಭಾ ಕ್ಷೇತ್ರಗಳಲ್ಲಿ, ಚಟುವಟಿಕೆಯ ವಿರೋಧಪಕ್ಷವಾಗಿ ಬೆಳೆಸುವಲ್ಲಿ ದಿಟ್ಟ ಹೆಜ್ಜೆ ಇಟ್ಟರು.
ಸುಮಾರು 35 ವರ್ಷಗಳಿಂದ ಯಾವುದೇ ಅಧಿಕಾರವಿಲ್ಲದೆ, ನಿಸ್ವಾರ್ಥವಾಗಿ ಪಕ್ಷಕ್ಕಾಗಿ ದುಡಿದು, ಪಕ್ಷದಲ್ಲಿ ಸಂಘಟನೆ ಮಾಡಿ, ಶಿವಮೊಗ್ಗದಲ್ಲಿ ಮಕಾಡೆ ಮಲಗಿದ್ದ ಕಾಂಗ್ರೆಸನ್ನು ಬಡಿದೆಬ್ಬಿಸಿ, ಬಿಜೆಪಿಗರ ಎದೆಯಲ್ಲಿ ನಡುಕ ಹುಟ್ಟಿಸಿದ ಸುಂದರೇಶ್ ಅವರಿಗೆ ಪಕ್ಷ ಕೈ ಹಿಡಿದು ಅಧಿಕಾರ ಕೊಡಬೇಕಾಗಿದ್ದು ಆದ್ಯ ಕರ್ತವ್ಯವಲ್ಲವೇ?
ಇದು ಅವರಿಗೆ ದೈವದತ್ತವಾಗಿ ಬಂದ ಕಾಣಿಕೆ ಎನ್ನಬಹುದು. ಕಾಂಗ್ರೆಸ್ ಪಕ್ಷದಲ್ಲೇ ನಿಷ್ಠಾವಂತರಾಗಿ ಎನ್ ಎಸ್ ಯು ಐ, ಯುವ ಕಾಂಗ್ರೆಸ್ ಮೂಲಕ ಬೆಳೆದು ಕೆಪಿಸಿಸಿ, ಎಐಸಿಸಿ ನಾಯಕರ ಜೊತೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಅದನ್ನು ಬಳಸಿಕೊಂಡು ಅಧಿಕಾರ ಪಡೆಯುವ ಯಾವುದೇ ಹುಂಬತನಕ್ಕೆ ಕೈ ಹಾಕದೆ ಪಕ್ಷದ ಯಾರೇ ನಿಂತರೂ ಅವರನ್ನು ಗೆಲ್ಲಿಸಲು ಶ್ರಮಿಸಿದ ನಾಯಕ ಇವರೆಂದರೆ ತಪ್ಪಾಗಲಿಕ್ಕಿಲ್ಲ.
ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸವನ್ನು ಯಾರೇ ಮಾಡಿದರೂ ಸಹಿಸದೆ ಅವರಿಗೆ ಮುಲಾಜಿಲ್ಲದೆ ನೋಟಿಸ್ ನೀಡುವ ಮೂಲಕ ಎಚ್ಚರಿಕೆ ಗಂಟೆಯನ್ನು ಬಾರಿಸಿರುವ ಸುಂದರೇಶ್, ಪಕ್ಷ ಬೆಳೆಯಲು ನಿರಂತರವಾಗಿ ಶ್ರಮಿಸಿರುವುದು ವಿಶೇಷವೇ ಹೌದು.