ಶಿವಮೊಗ್ಗ: ಅಧಿಕಾರ ದಾಹ ಬಿಟ್ಟು ರಾಜ್ಯವನ್ನು ಭಯೋತ್ಪಾದಕರಿಂದ ರಕ್ಷಿಸಿ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.


ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಡೀ ರಾಜ್ಯ ಕೊಲೆಗಡುಕರ, ಗೂಂಡಾಗಳ, ಭಯೋತ್ಪಾದಕರ ಕೇಂದ್ರ ಸ್ಥಾನವಾಗುತ್ತಿದೆ. ಭಯೋತ್ಪಾದಕರನ್ನು ಬೆಂಬಲಿಸುವ ಇಲ್ಲವೇ ಓಲೈಸುವ ಕೆಲಸ ನಡೆಯುತ್ತಿದೆ. ಮುಸ್ಲಿಂ ಗೂಂಡಾಗಳಂತೂ ಎಗ್ಗಿಲ್ಲದೇ ಮೆರೆಯುತ್ತಿದ್ದಾರೆ. ದೇಶದ್ರೋಹಿಗಳ ಅಟ್ಟಹಾಸ ಮುಗಿಲುಮುಟ್ಟುತ್ತಿದೆ.

ಕಾಂಗ್ರೆಸ್ ಸರ್ಕಾರ ಇದೆಲ್ಲ ನೋಡಿಕೊಂಡು ನಿಷ್ಕ್ರಿಯವಾಗಿದೆ. ರಾಜ್ಯಕ್ಕೆ ಇಂತಹ ದುಸ್ಥಿತಿ ಬರಬಾರದು ಎಂದು ಕಟುವಾಗಿ ಟೀಕಿಸಿದರು.
ಶಾಂತಿಪ್ರಿಯವಾದ ಈ ರಾಜ್ಯದಲ್ಲಿ ಎಲ್ಲೆಡೆ ಬಾಂಬ್ ಬೆದರಿಕೆ ಹಾಕಲಾಗುತ್ತಿದೆ. ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕುತ್ತಾರೆ ಎಂದರೆ ಈ ಗೂಂಡಾಗಳು ಎಲ್ಲಿಯವರೆಗೆ ಬೆಳೆದಿದ್ದಾರೆ. ಈ ಸರ್ಕಾರದಲ್ಲಿ ನಮಗೆ ರಕ್ಷಣೆ ಇದೆ ಎಂದುಕೊಳ್ಳುತ್ತಿದ್ದಾರೆ. ಇತಿಹಾಸದಲ್ಲೇ ಕಂಡರಿಯದ ರಾಜಭವನಕ್ಕೂ ಬಾಂಬ್ ಹಾಕುವ ಬೆದರಿಕೆ ಹಾಕುತ್ತಿದ್ದಾರೆ ಎಂದರೆ ಪರಿಸ್ಥಿತಿ ಊಹಿಸಿಕೊಳ್ಳಬಹುದು. ಕರ್ನಾಟಕ ಭಯೋತ್ಪಾದಕರನ್ನು ಸಾಕುವ ರಾಜ್ಯವಾಗಿದೆ ಎಂದರು.


ಈ ರಾಜ್ಯ ಸರ್ಕಾರಕ್ಕೆ ಮುಸ್ಲಿಂ ಗೂಂಡಾಗಳನ್ನು ಭಯೋತ್ಪಾದಕರನ್ನು ಮಟ್ಟ ಹಾಕಲು ಆಗದಿದ್ದರೆ, ಅಸಹಾಯಕರಾಗಿದ್ದರೆ ಕೇಂದ್ರ ಸರ್ಕಾರಕ್ಕೆ ತಿಳಿಸಲಿ. ಅಲ್ಲಿ ಸಿಂಹಗಳಿವೆ. ಇಂತಹ ನರಿಗಳನ್ನು ಅಡಗಿಸುವ ಶಕ್ತಿ ಮೋದಿ ಸರ್ಕಾರಕ್ಕೆ ಇದೆ. ಇಂತಹ ಘಟನೆಗಳನ್ನೆಲ್ಲ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಿ ಎಂದರು.


ಭಯೋತ್ಪಾದಕರೆಂದರೆ ಹೆಚ್ಚಾಗಿ ಮುಸ್ಲಿಮರೇ ಇದ್ದಾರೆ. ಇವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಜಮೀರ್ ನಂತಹ ರಾಷ್ಟ್ರದ್ರೋಹಿಯೊಬ್ಬ ತೆಲಂಗಾಣಕ್ಕೆ ಹೋಗಿ ಮುಸ್ಲಿಂ ಸಂಘಟನೆಯನ್ನು ಬಲಪಡಿಸುತ್ತಾನೆ. ಕಾಂಗ್ರೆಸ್ ಗೆ ಮತ ಹಾಕಿ ಕರ್ನಾಟಕದಲ್ಲಿ ಮುಸ್ಲಿಂ ಆಗಿರುವ ಖಾದರ್ ಅವರನ್ನು ವಿಧಾನಸಭೆ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಇಲ್ಲಿನ ಎಲ್ಲಾ ಶಾಸಕರು ಅವರಿಗೆ ತಲೆ ತಗ್ಗಿಸಿ ಹೋಗುತ್ತಾರೆ. ಹಾಗೆಯೇ ನಿಮ್ಮ ರಾಜ್ಯದಲ್ಲೂ ಮಾಡುತ್ತೇವೆ ಎಂದು ನಿರ್ಭಯವಾಗಿ ಹೇಳುತ್ತಾನೆ. ಇಂತಹವರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಸಹಿಸಿಕೊಂಡಿದ್ದಾರೆ ಎಂದರು.


ಇದರ ಮುಂದುವರೆದ ಭಾಗವಾಗಿ ಭದ್ರಾವತಿಯಲ್ಲಿ ಗೋಕುಲ್ ಎಂಬ ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆಯಾಗಿದೆ. ಇದುವರೆಗೂ ಆತನ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಿಲ್ಲ. ಅಲ್ಲಿನ ಶಾಸಕರ ಮಗನ ಕುಮ್ಮಕ್ಕು ಇದೆ ಎಂದು ಗೊತ್ತಾಗಿದೆ. ಭದ್ರಾವತಿಯೂ ಸೇರಿದಂತೆ ಇಡೀ ರಾಜ್ಯದಲ್ಲಿ ಕಳ್ಳತನ. ದರೋಡೆ, ಬೆದರಿಕೆ, ಹಲ್ಲೆಯಂತಹ ಘಟನೆಗಳು ನಡೆಯುತ್ತಲೇ ಇವೆ. ಪೊಲೀಸ್ ಇಲಾಖೆ ಕಣ್ಮುಚ್ಚಿಕೊಂಡು ಕುಳಿತಿದೆ. ಕಾಂಗ್ರೆಸ್ ಸರ್ಕಾರ ಮೌನವಹಿಸಿದೆ. ನಿಮ್ಮ ಮೌನ ಇದಕ್ಕೆ ಸಹಮತ ನೀಡುತ್ತದೆ ಎಂದ ಅವರು, ಭದ್ರಾವತಿ ಘಟನೆಗೆ ಸಂಬಂಧಿಸಿದಂತೆ ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕು. ಅಷ್ಟೇ ಅಲ್ಲ, ಅದರ ಹಿಂದಿರುವವರನ್ನೂ ಬಂಧಿಸಬೇಕು ಎಂದರು.
ಸುಪ್ರೀಂ ಕೋರ್ಟ್ ನಿಂದ ಇಡೀ ಭಾರತವೇ ಹೆಮ್ಮೆ ಪಡುವಂತಹ, ಸಂಭ್ರಮಿಸುವಂತಹ ತೀರ್ಪು ಹೊರಗೆ ಬಿದ್ದಿದೆ. ಆರ್ಟಿಕಲ್ ೩೭೦ ರದ್ದು ಮಾಡಿರುವುದನ್ನು ಕೋರ್ಟ್ ಎತ್ತಿ ಹಿಡಿದಿದೆ. ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕ ಜಯವಾಗಿದೆ. ನೆಹರೂ ಸಂವಿಧಾನ ತಿದ್ದುಪಡಿ ಮಾಡಲು ಅಂಬೇಡ್ಕರ್ ಅವರಿಗೆ ಹೇಳಿದ್ದರು. ಆದರೆ, ಅವರು ಒಪ್ಪಿರಲಿಲ್ಲ. ಎನ್.ಎಸ್. ಗೋಪಾಲಸ್ವಾಮಿ ಅಯ್ಯಂಗಾರ್ ಅವರ ಸಹಾಯ ಪಡೆದು ೩೭೦ನೇ ವಿಧಿಯನ್ನು ಸಂವಿಧಾನಕ್ಕೆ ಸೇರಿಸಲು ಯಶಸ್ವಿಯಾದರು. ಅಂದಿನಿಂದಲೂ ಇಂದಿನ ಸಿದ್ಧರಾಮಯ್ಯನವರೆಗೂ ಮುಸ್ಲಿಮರ ಓಲೈಕೆ ಮುಂದುವರೆದಿದೆ ಎಂದರು.


ಶಾಸಕ ಯತ್ನಾಳ್ ಬಿಜೆಪಿಗೆ ಕಿರಿಕಿರಿ ಮಾಡುತ್ತಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಕೆಲವರು ಹಾಗೆ ಮಾಡುತ್ತಾರೆ. ಅವರ ಕಟ್ಟಾ ಹಿಂದೂ ಹೋರಾಟಗಾರರು. ಉತ್ತರ ಕುಮಾರ ಪೌರುಷದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಮಗ ಕೆಟ್ಟವನು ಎಂದು ಮನೆ ಬಿಟ್ಟು ಕಳಿಸಲು ಆಗುವುದಿಲ್ಲ. ತಟ್ಟಿ ಬುದ್ದಿ ಹೇಳಬೇಕು. ಅವರನ್ನು ಜೀರ್ಣಿಸಿಕೊಳ್ಳುವ ಶಕ್ತಿ ಬಿಜೆಪಿಗಿದೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಶಿವರಾಜ್, ಬಿ.ಕೆ. ಶ್ರೀನಾಥ್, ಜಗದೀಶ್, ಧರ್ಮಪ್ರಸಾದ್, ಕೆ.ವಿ. ಅಣ್ಣಪ್ಪ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!