ಶಿವಮೊಗ್ಗ,ಡಿ.೦೭: ಸನಾತನ ಧರ್ಮಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಮತ್ತು ಆರಗಜ್ಞಾನೇಂದ್ರ ರವರು ಚರ್ಚೆಗೆ ಬರಲಿ ನಾನು ಸಿದ್ಧ ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಸವಾಲು ಹಾಕಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸನಾತನ ಧರ್ಮದ ಬಗ್ಗೆ ನನ್ನ ಅಭಿಪ್ರಾಯ ಹೇಳಿದ್ದೇನೆ. ನಾನು ಹಲವು ಪುಸ್ತಕಗಳನ್ನು ಓದಿದ್ದೇನೆ. ಸನಾತನ ಧರ್ಮಕ್ಕೆ ನಿಘಂಟುವಿನಲ್ಲಿ ಏನು ಅರ್ಥವಿದೆ ಎಂದು ಗಮನಿಸಿದ್ದೇನೆ. ನಾನು ಯಾವತ್ತೂ ಸನಾತನ ಧರ್ಮದ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ಅಷ್ಟಕ್ಕೂ ಸನಾತನ ಧರ್ಮಕ್ಕೆ ಪ್ರತೇಕ ಕೃತಿಯೂ ಇಲ್ಲ.

ಅದನ್ನು ಬರೆದವರು ಇಲ್ಲ. ಅನಾದಿಕಾಲದಿಂದ ಬಂದಿದ್ದನ್ನೆ ನಾವು ಸನಾತನ ಧರ್ಮ ಎಂದು ಹೇಳುತ್ತೇವೆ ಎಂದರು.
ವೇದ, ಉಪನಿಷತ್ತು, ಮನಸೃತಿ ಸೇರಿದರೆ ಸನಾತನ ಧರ್ಮವಾಗುತ್ತದೆ ಎನ್ನುವುದಾದರೆ ಅದರ ಆಚರಣೆಗಳೆಲ್ಲವೂ ನಿಜ ಎನ್ನುವುದಾದರೆ ಅಲ್ಲಿರುವ ನ್ಯೂನತೆ ಅಸಮಾನತೆಯನ್ನು ಪ್ರಶ್ನೆ ಮಾಡಬೇಕಲ್ಲವೇ. ನಾನು ಒಬ್ಬ ಹಿಂದೂನೇ ಮನುಷ್ಯತ್ವವನ್ನು ವಿರೋಧ ಮಾಡುವ ಯಾವ ಧರ್ಮವೂ ಶ್ರೇಷ್ಟವಲ್ಲ. ಎಲ್ಲಿ ನ್ಯೂನತೆ ಇದೆಯೂ ಅದನ್ನು ತೆಗೆದು ಹಾಕಬೇಕು ಎಂದಷ್ಟೇ ಹೇಳಿದ್ದೇನೆ. ಇದೇ ಕೆಲಸವನ್ನೇ ಗಾಂಧೀಜಿ, ಅಂಬೇಡ್ಕರ್, ಬಸವಣ್ಣ, ಬುದ್ಧ ಮುಂತಾದವರು ಮಾಡಿದ್ದಾರೆ ಎಂದರು.


೧೯೨೬ ರಲ್ಲಿ ಸ್ಥಾಪನೆಯಾದ ಆರ್. ಎಸ್ ಎಸ್ ಇದುವರೆಗೂ ಹಿಂದೂ ಧರ್ಮ, ಸನಾತನ ಧರ್ಮದಲ್ಲಿನ ಮನುಷ್ಯ ವಿರೋಧಿ ವಿಚಾರಗಳನ್ನು ಸರಿಪಡಿಸಲು ಪ್ರಯತ್ನವನ್ನೆ ಮಾಡಿಲ್ಲ. ಒಂದೇ ಒಂದು ಕಾರ್ಯಕ್ರಮವನ್ನೂ ರೂಪಿಸಿಲ್ಲ. ಬದಲಾಗಿ ಒಂದು ಧರ್ಮವನ್ನು ಹೀಯಾಳಿಸುವ, ಪ್ರಚೋದಿಸುವ ಕೆಲಸ ವನ್ನು ಮಾಡಿಕೊಂಡು ಬಂದಿದೆ ಎಂದ ಅವರು ಮನುಸ್ಮೃತಿಯನ್ನು ಅವರು ಬೇಕಾದರೆ ಎಲ್ಲಾ ಬಿಜೆಪಿ ಕಚೇರಿಯಲ್ಲಿ, ಆರ್‌ಎಸ್‌ಎಸ್ ಕಚೇರಿಗಳಲ್ಲಿ ಇಡಲಿ, ಆದರೆ ಅಂಬೇಡ್ಕರ್‌ರವರನ್ನು ಕೂಡ ಓದಲಿ ಎಂದು ಸವಾಲು ಹಾಕಿದರು.


ಸೈದ್ಧಾಂತಿಕವಾಗಿ ನಾನು ಬಿಜೆಪಿಯನ್ನು ವಿರೋಧ ಮಾಡುತ್ತೇನೆ. ವೈಯುಕ್ತಿಕವಾಗಿ ನಾನು ಯಾರ ವಿರೋಧಿಯೂ ಅಲ್ಲ. ಬಿಜೆಪಿಯೊಂದಿಗೆ ಎಂದಿಗೂ ಹೊಂದಾಣಿಕೆಯನ್ನು ಮಾಡಿಕೊಂಡಿಲ್ಲ. ಹಾಗೆ ನೋಡಿದರೆ ದೇವಸ್ಥಾನಗಳಿಗೆ ಆರಗಜ್ಞಾನೇಂದ್ರರಿಗಿಂತ ಹೆಚ್ಚು ಹಣ ಕೊಟ್ಟವನೇ ನಾನು. ಸಾಹಿತ್ಯ ಪರಿಷತ್‌ಗೆ ಜಾಗ ಕೊಟ್ಟಿದ್ದು ನಾನು, ಈಗಿರುವಾಗ ನಾನು ಹಿಂದೂ ಧರ್ಮದ ವಿರೋಧಿ ಎಂದು ಹೇಗೆ ಹೇಳುತ್ತಾರೆ. ಆರ್‌ಎಸ್‌ಎಸ್, ರಾಮಸೇನೆ, ಬಿಜೆಪಿ ಇವೆಲ್ಲವೂ ಒಂದೇ ಸಂತಾನ ಎಂದರು.


ಬಿಜೆಪಿಯವರು ಮುಸ್ಲಿಂ ವಿರುದ್ಧ ಮಾತನಾಡಿದರೆ ಮತ ಬರುತ್ತೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಅದು ಸುಳ್ಳು. ಸಾರ್ವಕರ್ ಬಗ್ಗೆ ಮಾತನಾಡುವ ಅವರು ಅವರ ಕಟ್ಟಡದ ಕೆಳಗೆಯೇ ಗೂಡ್ಸ್ ವಾಸಿಸುತ್ತಾ ಎನ್ನುವುದನ್ನು ಮರೆತು ಬಿಟ್ಟಿದ್ದಾರೆ. ಹಿಂದೂ ಮಹಾಸಭಾದ ಅಧ್ಯಕ್ಷರೇ ಇವರಲ್ಲವೇ ಎಂದರು.
ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ದ ಎಂದು ಮಾಜಿ ಸಚಿವ ಕಾಂಗ್ರೇಸ್ ಮುಖಂಡ ಕಿಮ್ಮನೆ ರತ್ನಾಕರ್ ಸ್ಪಷ್ಟಪಡಿಸಿದ ಅವರು, ನಾನಂತು ಆಕಾಂಕ್ಷಿಯಲ್ಲ ಅರ್ಜಿಯನ್ನೂ ಹಾಕಿಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ವಕ್ತಾರ ಆದರ್ಶಹುಂಚದಕಟ್ಟೆ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!